ಅರ್ಹರಿಗೆ ಶಾಸಕರೂ ಯುವನಿಧಿ ತಲುಪಿಸಬೇಕು: ಕಿಮ್ಮನೆ ರತ್ನಾಕರ್‌

| Published : Jan 09 2024, 02:00 AM IST

ಸಾರಾಂಶ

ಜ.12ರಂದು ಯುವನಿಧಿಗೆ ಅದ್ಧೂರಿ ಚಾಲನೆ ನೀಡಿ, ಯುವಮತಗಳ ಸೆಳೆಯುವ ಕಾಂಗ್ರೆಸ್‌ ಸರ್ಕಾರದ ದೂರದೃಷ್ಟಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಅಧಿಕವಾಗಿ ಶ್ರಮಿಸುತ್ತಿದ್ದಾರೆ. ರಾಜ್ಯ ಸೇರಿದಂತೆ, ಜಿಲ್ಲೆಯ ವಿವಿಧೆಡೆ ಶಾಸಕರು, ಸಚಿವರು, ಮಾಜಿ ಜನಪ್ರತಿನಿಧಿಗಳೆಲ್ಲ ಯುವನಿಧಿ ಜಪ ಮಾಡುತ್ತಿದ್ದಾರೆ. ತೀರ್ಥಹಳ್ಳಿಯಲ್ಲೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಮಾತನಾಡಿ, ಸಮಾರಂಭಕ್ಕೆ ಫಲಾನುಭವಿಗಳನ್ನು ಕರೆ ತರಲು 2 ಸಾವಿರ ಬಸ್‍ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಅತಿ ಹೆಚ್ಚಿನ ಯುವಜನರು ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಅರ್ಹರನ್ನು ಕರೆತರಬೇಕು ಎಂದು ಮನವಿ ಮಾಡಿದ್ದಾರೆ.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಯಂತೆ ಈಗಾಗಲೇ ನಾಲ್ಕು ಭರವಸೆಗಳನ್ನು ಪೂರೈಸಿದೆ. ಈ ಯೋಜನೆಗಳ ಫಲವಾಗಿ ಒಂದು ಕೋಟಿ ಕುಟುಂಬಗಳಿಗೆ ಈಗಾಗಲೇ ಇದರ ಸೌಲಭ್ಯ ತಲುಪಿದೆ. 5ನೇ ಗ್ಯಾರಂಟಿಯಾದ ಯುವನಿಧಿಗೆ ಜ.12ರಂದು ಸಿಎಂ ಸಿದ್ದರಾಮಯ್ಯ ಶಿವಮೊಗ್ಗ ನಗರದ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಸಮಾರಂಭದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಪಕ್ಷದ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದ ಸಮಾರಂಭಕ್ಕೆ ಫಲಾನುಭವಿಗಳನ್ನು ಕರೆ ತರಲು 2 ಸಾವಿರ ಬಸ್‍ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರಾದ ಪ್ರಿಯಾಂಕ್‌ ಖರ್ಗೆ, ಶರಣಪ್ರಕಾಶ್ ಪಾಟೀಲ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಇಷ್ಟು ದೊಡ್ಡ ಯೋಜನೆಗಳ ಜಾರಿಯಲ್ಲಿ ಇರಬಹುದಾದ ಸಣ್ಣಪುಟ್ಟ ಲೋಪಗಳನ್ನು ಪರಿಹರಿಸಲು ಅಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜನರಿಗಾಗಿ ಯಾವುದೇ ಕಾರ್ಯಕ್ರಮಗಳನ್ನು ಜಾರಿ ಮಾಡದ ಬಿಜೆಪಿಗೆ ಗ್ಯಾರಂಟಿ ಯೋಜನೆಗಳ ಕುರಿತು ಟೀಕಿಸುವ ನೈತಿಕತೆಯೇ ಇಲ್ಲ. ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಪಕ್ಷಭೇದ ಮರೆತು ಫಲಾನುಭವಿಗಳಿಗೆ ತಲುಪಿಸುವ ಹೊಣೆಗಾರಿಕೆ ಶಾಸಕರಿಗೂ ಇದೆ ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎಂಟು ತಿಂಗಳು ಮಾತ್ರ ಸಂದಿದೆ. ಇನ್ನು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲಾವಕಾಶವಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷಗಳೇ ಸಂದಿದ್ದರೂ ಏನೂ ಮಾಡಲಾಗಿಲ್ಲ. ಕೇವಲ ಜಾತಿ-ಧರ್ಮದ ಹೆಸರಿನಲ್ಲಿ ಭಾವನೆಗಳನ್ನು ಮೂಡಿಸಿ, ಚುನಾವಣೆ ಗೆಲ್ಲುವ ತಂತ್ರಗಾರಿಕೆ ಹೊಂದಿರುವ ಬಿಜೆಪಿ ಆರೋಪ ಹಾಸ್ಯಾಸ್ಪದ ಎಂದರು.

ಮುಳುಗಡೆ ಸಂತ್ರಸ್ತರ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪಕ್ಷದ ವಕ್ತಾರ ಬಿ.ಎ.ರಮೇಶ್ ಹೆಗ್ಡೆ, ಸಂತ್ರಸ್ತರಿಗೆ ಭೂಮಿ ಹಕ್ಕನ್ನು ಕೊಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಗಟ್ಟಿ ನಿರ್ಧಾರವನ್ನು ಕೈಗೊಂಡಿದೆ. ಶೀಘ್ರದಲ್ಲಿ ಬಗೆಹರಿಯುವ ವಿಶ್ವಾಸವನ್ನು ಹೊಂದಿದ್ದೇವೆ. ಈ ಹಿಂದಿನ ಸರ್ಕಾರದ ವೈಫಲ್ಯದಿಂದಾಗಿಯೇ ಈ ಸಮಸ್ಯೆ ಪರಿಹಾರಕ್ಕೆ ಹಿನ್ನಡೆಯಾಗಿತ್ತು ಎಂದರು.

ಪಕ್ಷದ ತೀರ್ಥಹಳ್ಳಿ ಘಟಕ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಎಸ್.ಪಿ.ದಿನೇಶ್, ಪಪಂ ಅಧ್ಯಕ್ಷೆ ಗೀತಾ ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಡಿ.ಲಕ್ಷ್ಮಣ್, ಟಿ.ಎಲ್ ಸುಂದರೇಶ್ ಇದ್ದರು.

- - -

ಕೋಟ್‌ ಬಿಜೆಪಿ ತನ್ನ ಅಧಿಕಾರವಧಿಯಲ್ಲಿ ಘೋಷಣೆ ಮಾಡಿದ್ದ 605 ಭರವಸೆಗಳಲ್ಲಿ ಒಂದನ್ನೂ ಪೂರೈಸಲು ಶಕ್ತವಾಗಿಲ್ಲ. ತನ್ನ ಪ್ರಣಾಳಿಕೆಯಲ್ಲಿ ರೈತರ ₹1 ಲಕ್ಷದವರೆಗಿನ ಸಾಲಮನ್ನಾ, ಬಿಪಿಎಲ್ ಕಾರ್ಡುದಾರರ ವಿವಾಹಗಳಿಗೆ ₹25 ಸಾವಿರ ಸಹಾಯಧನ ಹಾಗೂ 3 ಗ್ರಾಂ ಚಿನ್ನ ನೀಡುವುದಾಗಿ ಹೇಳಿ, ಜನರನ್ನು ವಂಚಿಸಿದೆ

- ಕಿಮ್ಮನೆ ರತ್ನಾಕರ್‌, ಕೆಪಿಸಿಸಿ ವಕ್ತಾರ

- - - -08ಟಿಟಿಎಚ್‌01:

ತೀರ್ಥಹಳ್ಳಿ ಪಟ್ಟಣದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು.