ಕೂಡ್ಲಿಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಮಸೂದೆ ಜಾರಿ ಮಾಡು ಮೂಲಕ ಗ್ರಾಮ ಸ್ವರಾಜ್ ಆಶಯದ ಮೇಲೆ ಗದಾಪ್ರಹಾರ ಮಾಡಿರುವ ಕೇಂದ್ರ ಸರ್ಕಾರ ಗ್ರಾಮೀಣ ಜನತೆಯ ಸಂವಿಧಾನಬದ್ಧ ಹಕ್ಕನ್ನು ಕಸಿಕೊಂಡಿದೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ತಾಲೂಕಿನ ಹುಡೇಂ ಗ್ರಾಮದಿಂದ ತಾಯಕನಹಳ್ಳಿವರೆಗೂ ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡಿದ ನಂತರ ಮಾತನಾಡುತ್ತಿದ್ದರು. ಮನರೇಗಾ ಮರು ಜಾರಿಯಾಗುವವರೆಗೂ ನಮ್ಮ ಹೋರಾಟ ಬಿಡಲ್ಲ ಎಂದರು.

ಕೇಂದ್ರ ಸರ್ಕಾರದವರು ನರೇಗಾ ಕಾಯ್ದೆ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಯನ್ನು ಜಾರಿಗೊಳಿಸಿದ್ದಾರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜನಪರ ದೂರದೃಷ್ಟಿಯಿಂದ ಜಾರಿಗೊಂಡ ನರೇಗಾ ಯೋಜನೆಯಡಿ ಬಡವರು, ಸಣ್ಣ ರೈತರು, ಮಹಿಳೆಯರಿಗೆ 100 ದಿನಗಳ ಕಾಲ ಕೆಲಸವನ್ನು ಖಾತ್ರಿಪಡಿಸುತ್ತಿತ್ತು. ಬಡವರಿಗೆ ಕೆಲಸದ ಹಕ್ಕು ಸಂವಿಧಾನಬದ್ಧವಾದದ್ದು. ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಸಂವಿಧಾನಬದ್ದವಾದ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದರು.

90:10 ಅನುಪಾತವನ್ನು 60:40ಕ್ಕೆ ಬದಲಾಯಿಸಲಾಗಿದೆ. ಇದು ರಾಜ್ಯಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಮೊದಲು ಯಾವ ಕೆಲಸ ಮಾಡಿಸಬೇಕು ಎಂದು ಪಂಚಾಯಿತಿ ಸದಸ್ಯರು ತೀರ್ಮಾನ ಮಾಡುತ್ತಿದ್ದರು. ಆದರೆ ಈಗ ಕೇಂದ್ರ ಸರ್ಕಾರ ಮನರೇಗಾ ಹೆಸರು ತೆಗೆದು ಹಾಕಿ ಈ ಯೋಜನೆಗೆ ಹೊಸ ರೂಪ ಕೊಟ್ಟಿದೆ. ಬಡಜನರಿಗೆ ಕೆಲಸವನ್ನು ಸಂವಿಧಾನಾತ್ಮಕ ಹಕ್ಕನ್ನಾಗಿಸಿ, ವರ್ಷದ ಯಾವುದೇ ದಿನಗಳಲ್ಲಿ, ಅವರು ವಾಸಿಸುವ ಸ್ಥಳದಲ್ಲೇ ಉದ್ಯೋಗ ಒದಗಿಸುವುದು ಮನರೇಗಾ ಯೋಜನೆಯ ಮೂಲ ಆಶಯವಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಕೇವಲ ಮಹಾತ್ಮ ಗಾಂಧಿಯವರ ಹೆಸರಿನ ಯೋಜನೆ ರದ್ದು ಮಾಡಿರುವುದಲ್ಲ, ಬದಲಿಗೆ ಗ್ರಾಮೀಣ ಆರ್ಥಿಕತೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದರು.

ಪ್ರತಿಭಟನೆಯಲ್ಲಿ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಕಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರಗೌಡ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಜಿಲಾನ್, ಹುಡೇಂ ಗ್ರಾಮದ ಯುವ ಮುಖಂಡರಾದ ಜಿ.ಪಾಪನಾಯಕ, ಕಾಂಗ್ರೆಸ್ ಯುವ ಮುಖಂಡರಾದ ಬಣವಿಕಲ್ಲು ಯರ್ರಿಸ್ವಾಮಿ, ಎಪಿಎಂಸಿ ಉಪಾಧ್ಯಕ್ಷರಾದ ಮಹದೇವಣ್ಣ, ಮುಖಂಡರಾದ ಪೇಪರ್ ಸೂರಯ್ಯ, ಮಹಾಂತಣ್ಣ, ಜಿ. ಓಬಣ್ಣ. ಜಿ. ಪಾಪನಾಯಕ, ಅಜ್ಜನಗೌಡ, ನಾಗೇಶ, ವೆಂಕಟೇಶ ನಾಯ್ಕ, ರಘು, ರಸೂಲ್, ರಾಮಚಂದ್ರ, ಬೋಸೆಮಲ್ಲಯ್ಯ, ಗುರುಮೂರ್ತಿ , ಸೂರ್ಯಪ್ರಕಾಶ, ಚಂಪಾ ಚವಾಣ್, ಜಿಲಾನ್, ನಾಗೇಶ ರೆಡ್ಡಿ, ಹೊಸಹಳ್ಳಿ ಜಗದೀಶ್, ಪೋಟೋ ಸಿದ್ಲಂಗಪ್ಪ, ಬೊಮ್ಮಣ್ಣ, ಕಂಡಕ್ಟರ್ ಬಸಣ್ಣ, ದುರುಗಪ್ಪ, ಬೊಮ್ಮಣ್ಣ, ಪ್ರಹ್ಲಾದ, ಹರೀಶ್, ಮಂಜಣ್ಣ, ಗಾದ್ರಿಪಾಲನಾಯಕ, ಗಾಣಗಟ್ಟೆ ಸೂರಣ್ಣ, ಗೊಂಚಿಕಾರು ನಾಗರಾಜ, ಬಿ. ಓಬಣ್ಣ, ತಳವಾರ ಶರಣಪ್ಪ, ಇಒ ಬಸಣ್ಣ, ಸಿಡೇಗಲ್ಲು ಬಸಣ್ಣ, ಟೈಲರ್ ನಾಗರಾಜ, ಅಜ್ಜಣ್ಣ, ರೈತರು, ಯುವಕರು, ಗಡಿ ಗ್ರಾಮಗಳ ಊರಿನ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.