ಚಿಕ್ಕಮಗಳೂರು ನಗರದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ 287ನೇ ಜಯಂತಿಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಒಳಮೀಸಲಾತಿ ನಿಗದಿಯಲ್ಲಿ ಕಾಂಗ್ರೆಸ್‌ ಸರ್ಕಾರ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಂಜಾರ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು

ಚಿಕ್ಕಮಗಳೂರು ನಗರದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ 287ನೇ ಜಯಂತಿಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಒಳಮೀಸಲಾತಿ ನಿಗದಿಯಲ್ಲಿ ಕಾಂಗ್ರೆಸ್‌ ಸರ್ಕಾರ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಂಜಾರ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಬಂಜಾರ ಸಮುದಾಯದ ಮುಖಂಡ ಪ್ರದೀಪ್‌ನಾಯಕ ಮತ್ತು ಮಂಜುನಾಥನಾಯ್ಕ ಮತ್ತಿತರರು ವೇದಿಕೆಯತ್ತ ನುಗ್ಗಿ ಕಾಂಗ್ರೆಸ್‌ ಸರ್ಕಾರದ ಮೀಸಲು ವರ್ಗಿಕರಣದಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಸಮುದಾಯದ ಬಗ್ಗೆ ಮಾತನಾಡಲು ವೇದಿಕೆಯಲ್ಲಿ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.

ಅಷ್ಟರಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಹೊರಗೆ ಕರೆತಂದರು. ಉದ್ದೇಶ ಪೂರ್ವಕವಾಗಿ ಪ್ರತಿಭಟನಾಕಾರರನ್ನು ಸಮಾರಂಭಕ್ಕೆ ಕಳುಹಿಸಲಾಗಿದೆ ಎಂದು ಶಾಸಕ ತಮ್ಮಯ್ಯ ಪರೋಕ್ಷವಾಗಿ ಬಿಜೆಪಿ ವಿರುದ್ಧ ಗರಂ ಆದರು.

ಸಮಾರಂಭದ ಬಳಿಕ ಮತ್ತೆ ಶಾಸಕ ತಮ್ಮಯ್ಯ ಅವರನ್ನು ಜಂಜಾರ ಸಮುದಾಯದ ಮುಖಂಡರು ತಡೆಯಲು ಯತ್ನಿಸಿದರು. ಬಿಜೆಪಿ ಸರ್ಕಾರ ಇದ್ದಾಗ ಶೇ.4.5 ರಷ್ಟು ಒಳ ಮೀಸಲಾತಿ ನೀಡಿ 4 ಪಂಗಡಗಳನ್ನು ಮಾತ್ರ ಸೇರಿಸಿತ್ತು. ಕಾಂಗ್ರೆಸ್ ಸರ್ಕಾರ ಮೀಸಲಾತಿಯನ್ನು ಶೇ.5ಕ್ಕೆ ಹೆಚ್ಚಿಸಿ 60 ಪಂಗಡಗಳನ್ನು ಸೇರಿಸಿದೆ. ಇದರಿಂದ ಬಂಜಾರ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಮೀಸಲಿನಿಂದ ವಂಚಿತವಾಗುತ್ತಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಮಾರ್ಚನಲ್ಲಿ ನಡೆಯುವ ಬಜೆಟ್‌ ಅಧಿವೇಶನದಲ್ಲಿ ಹಾಗೂ ಸದ್ಯದಲ್ಲೇ ಮುಖ್ಯಮಂತ್ರಿ ಬಳಿ ಮಾತನಾಡಿ ಚರ್ಚಿಸುತ್ತೇನೆ ಎಂದ ಶಾಸಕ ತಮ್ಮಯ್ಯ ಬಂಜಾರ ಸಮುದಾಯದ ಮನವಿ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.ಫೋಟೋ- ಸಂತ ಸೇವಾ ಲಾಲ್‌ ಜಯಂತಿ ಸಮಾರಂಭದಲ್ಲಿ ಬಂಜಾರ ಸಮುದಾಯದ ಮುಖಂಡರು ಶಾಸಕ ತಮ್ಮಯ್ಯ ಭಾಷಣಕ್ಕೆ ಅಡ್ಡಿ ಪಡಿಸುವುದಕ್ಕೆ ಮುಂದಾದ ವೇಳೆ ಪೊಲೀರು ತಡೆದರು.- ಸಮಾರಂಭ ಮುಗಿದ ಬಳಿಕವೂ ಕುವೆಂಪು ಭವನದ ಮುಂಭಾಗ ಮತ್ತೆ ಬಂಜಾರ ಸಮುದಾಯದ ಮುಖಂಡರು ಶಾಸಕ ತಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.