ಸಾರಾಂಶ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜು.25ರಂದು ಮತ್ತೆ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ವಿಧಾನಪರಿಷತ್ ಸದಸ್ಯ ನೇಮಕ ಹಾಗೂ ನಿಗಮ-ಮಂಡಳಿಗಳ ನೇಮಕ ಸೇರಿ ವಿವಿಧ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಇತ್ತೀಚೆಗೆ ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸಲು ಬೆಂಗಳೂರಿಗೆ ಆಗಮಿಸಿದ್ದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹಲವು ಸುತ್ತಿನ ಸಭೆ ನಡೆಸಿದ್ದರು. ಆದರೂ, ನಿಗಮ ಮಂಡಳಿ ನೇಮಕಾತಿ ವಿಚಾರ ಅಂತಿಮಗೊಂಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಜು.23ಕ್ಕೆ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದರು. ಆದರೆ, ಈಗ ಏಕಾಏಕಿ ಸುರ್ಜೇವಾಲಾ ಅವರ ರಾಜ್ಯ ಭೇಟಿ ರದ್ದಾಗಿದ್ದು, ಅದರ ಬದಲಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೇ ಜು.25ರಂದು ದೆಹಲಿಗೆ ತೆರಳಲಿದ್ದಾರೆ.
ಈ ವೇಳೆ ನಿಗಮ-ಮಂಡಳಿಗೆ ಖಾಲಿ ಇರುವ ಸ್ಥಾನಗಳ ಭರ್ತಿ ಹಾಗೂ ಗೊಂದಲ ಉಂಟಾಗಿರುವ ನಾಲ್ಕು ಮಂದಿ ಪರಿಷತ್ ಸದಸ್ಯರ ಹೆಸರು ಅಂತಿಮಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ. ಖಾಲಿಯಿರುವ ಎಂಟು ನಿಗಮ-ಮಂಡಳಿ ಅಧ್ಯಕ್ಷರ ಹುದ್ದೆ ಹಾಗೂ ಉಪಾಧ್ಯಕ್ಷರು ಸೇರಿ ಒಟ್ಟು 40 ಹುದ್ದೆಗಳ ನೇಮಕದ ಬಗ್ಗೆ ಬಹುತೇಕ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದ್ದು, ಇದಾದ ಕೆಲ ದಿನಗಳಲ್ಲೇ ಪಟ್ಟಿ ಹೊರ ಬೀಳಬಹುದು ಎಂದು ಮೂಲಗಳು ಹೇಳಿವೆ.