ವಿಜಯಪುರ ಜಿಲ್ಲೆಗೆ ಒಲಿಯುತ್ತಾ ಎಂಎಲ್ಸಿ ಸ್ಥಾನ?

| Published : May 26 2024, 01:34 AM IST

ವಿಜಯಪುರ ಜಿಲ್ಲೆಗೆ ಒಲಿಯುತ್ತಾ ಎಂಎಲ್ಸಿ ಸ್ಥಾನ?
Share this Article
  • FB
  • TW
  • Linkdin
  • Email

ಸಾರಾಂಶ

ಕೆಳಮನೆಯಲ್ಲಿ ಟಿಕೆಟ್ ಸಿಗದವರು ಇದೀಗ ಮೇಲ್ಮನೆಯಲ್ಲಾದ್ರೂ ಅವಕಾಶ ಸಿಗಬಹುದು ಎಂದು ರಾಜ್ಯ ಹಾಗೂ ರಾಷ್ಟ್ರ ನಾಯಕರ ಮನೆಗೆ ಅಲೆದಾಡುತ್ತಿದ್ದು, ಲಾಬಿ ಆರಂಭಿಸಿದ್ದಾರೆ. ಜೂ.13ರಂದು ನಡೆಯಲಿರುವ 11 ಎಂಎಲ್ಸಿ ಸ್ಥಾನಗಳ ಚುನಾವಣೆಯಲ್ಲಿ ವಿಧಾನಸಭೆಯ ಶಾಸಕರು ಆಯ್ಕೆ ಮಾಡುವ ಅವಕಾಶ ಹೊಂದಿದ್ದರಿಂದ ಸುಮಾರು 7 ಸ್ಥಾನಗಳು ಕಾಂಗ್ರೆಸ್ ಹಾಗೂ 3 ಸ್ಥಾನಗಳು ಬಿಜೆಪಿ ಪಾಲಾಗಲಿವೆ ಎಂಬ ಲೆಕ್ಕಾಚಾರಗಳು ಪಕ್ಕಾ ಆಗಿವೆ. ಅದರಂತೆ ಈ ಬಾರಿ ವಿಜಯಪುರಕ್ಕೊಂದು ಸ್ಥಾನ ಕೊಡಲೇಬೇಕು ಎಂಬ ಕೂಗು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಾಳೆಯದಲ್ಲಿ ಕೇಳಿಬರುತ್ತಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಕೆಳಮನೆಯಲ್ಲಿ ಟಿಕೆಟ್ ಸಿಗದವರು ಇದೀಗ ಮೇಲ್ಮನೆಯಲ್ಲಾದ್ರೂ ಅವಕಾಶ ಸಿಗಬಹುದು ಎಂದು ರಾಜ್ಯ ಹಾಗೂ ರಾಷ್ಟ್ರ ನಾಯಕರ ಮನೆಗೆ ಅಲೆದಾಡುತ್ತಿದ್ದು, ಲಾಬಿ ಆರಂಭಿಸಿದ್ದಾರೆ. ಜೂ.13ರಂದು ನಡೆಯಲಿರುವ 11 ಎಂಎಲ್‌ಸಿ ಸ್ಥಾನಗಳ ಚುನಾವಣೆಯಲ್ಲಿ ವಿಧಾನಸಭೆಯ ಶಾಸಕರು ಆಯ್ಕೆ ಮಾಡುವ ಅವಕಾಶ ಹೊಂದಿದ್ದರಿಂದ ಸುಮಾರು 7 ಸ್ಥಾನಗಳು ಕಾಂಗ್ರೆಸ್ ಹಾಗೂ 3 ಸ್ಥಾನಗಳು ಬಿಜೆಪಿ ಪಾಲಾಗಲಿವೆ ಎಂಬ ಲೆಕ್ಕಾಚಾರಗಳು ಪಕ್ಕಾ ಆಗಿವೆ. ಅದರಂತೆ ಈ ಬಾರಿ ವಿಜಯಪುರಕ್ಕೊಂದು ಸ್ಥಾನ ಕೊಡಲೇಬೇಕು ಎಂಬ ಕೂಗು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಾಳೆಯದಲ್ಲಿ ಕೇಳಿಬರುತ್ತಿದೆ.

ಇನ್ನೊಂದೆಡೆ ಯಾವಾಗಲು ಬರಿ ನಾಯಕರುಗಳೆ ಅಧಿಕಾರ ಅನುಭವಿಸಿದರೆ ಹೇಗೆ? ಪಕ್ಷದಲ್ಲಿ ದುಡಿದಿರುವ ಕೆಳ ಹಂತದ ಮುಖಂಡರಿಗೂ ಅವಕಾಶ ಸಿಗಬೇಕು ಎಂಬ ಕೂಗು ಕೇಳಿಬರುತ್ತಿದೆ. ಇವೆರಡರ ಮಧ್ಯೆ ಹಲವು ಸಮುದಾಯಗಳು ತಮ್ಮ ತಮ್ಮ ಜಾತಿಯ ಲೆಕ್ಕಾಚಾರದಲ್ಲಿ ಅವಕಾಶ ಕೇಳುತ್ತಿವೆ. ಇದು ಸದ್ಯದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ರಂಗೇರಿರುವ ರಣಕಣವಾಗಿದೆ.

ಕಾಂಗ್ರೆಸ್‌ನಲ್ಲಿ ತೀವ್ರಗೊಂಡ ಲಾಬಿ:

ರಾಜ್ಯ ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಆ ಪಕ್ಷದಲ್ಲಿ ತುಸು ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಲಾಬಿ ತುಸು ಜೋರಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂತಿರುವುದು ಅಲ್ಪಸಂಖ್ಯಾತರ ಮತಗಳ ಮೇಲೆ. ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್‌ಗೆ ಆಕ್ಸಿಜನ್ ಇದ್ದಂತೆ. ಅಕಸ್ಮಾತ ಮುಸ್ಲಿಮರ ಮತಗಳು ಇಲ್ಲವೆಂದರೆ ಕಾಂಗ್ರೆಸ್ ಉಸಿರಾಟವೇ ನಿಂತು ಹೋಗುತ್ತದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ನಿಂದ ವಿಜಯಪುರದಲ್ಲಿ ಅಲ್ಪಸಂಖ್ಯಾತರಿಗೆ ಒಂದು ಸ್ಥಾನ ಕೊಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇನ್ನೊಂದೆಡೆ ಗಾಣಿಗ ಸಮಾಜದ ಮುಖಂಡರು ತಮ್ಮ ಸಮಾಜದ ನಾಯಕ ಮಲ್ಲಿಕಾರ್ಜುನ ಲೋಣಿ ಅವರನ್ನು ಎಂಎಲ್‌ಸಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ:

ವಿಧಾನಸಭೆ ಚುನಾವಣೆಯಲ್ಲಿ 6 ಸ್ಥಾನಗಳನ್ನು ಕಾಂಗ್ರೆಸ್‌ಗೆ ಪಡೆದುಕೊಂಡಿದೆ. ಅಲ್ಲದೇ ಎಂ.ಬಿ.ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಇಬ್ಬರು ಪ್ರಭಾವಿ ಸಚಿವರು ಇರುವುದರಿಂದ ಗುಮ್ಮಟ ನಗರಿಗೆ ಒಂದು ಸ್ಥಾನ ತರಲಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಆಶಾಭಾವನೆ ಹೊಂದಿದ್ದಾರೆ.

ಬಿಜೆಪಿಯಲ್ಲೂ ಕಸರತ್ತು:

ಇನ್ನೊಂದೆಡೆ ಅಂದಾಜು 3 ಸ್ಥಾನಗಳು ಬಿಜೆಪಿ ಪಾಲಾಗಲಿರುವುದರಿಂದ ಅದರಲ್ಲಿ ಒಂದು ಸ್ಥಾನ ಜಿಲ್ಲೆಗೆ ಬೇಕೇಬೇಕು ಎಂದು ಹಲವು ನಾಯಕರು ಪಟ್ಟು ಹಿಡಿದಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಜಿಲ್ಲೆಯಲ್ಲಿ ಒಂದೇ ಸ್ಥಾನ ಬಿಜೆಪಿಗೆ ಸಿಕ್ಕಿರುವುದರಿಂದ ವಿಜಯಪುರಕ್ಕೆ ಒಂದು ಎಂಎಲ್‌ಸಿ ಸ್ಥಾನ ಸಿಕ್ಕರೆ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಸಹಕಾರಿಯಾಗಲಿದೆ ಎಂಬುದು ಆ ಪಕ್ಷದ ಜಿಲ್ಲಾ ನಾಯಕರ ಆಶಯ.

ಯಾವುದೇ ಚುನಾವಣೆ ಸಮಯದಲ್ಲಿ ಜಿಲ್ಲಾ ಮಟ್ಟದಲ್ಲಿನ ಆಕಾಂಕ್ಷಿಗಳು ಆಯಾ ಪಕ್ಷದ ಜಿಲ್ಲಾಧ್ಯಕ್ಷರು ನಾವು ಆಕಾಂಕ್ಷಿಗಳು ಎಂದು ತಮ್ಮ ಸ್ವವಿವರ ಕೊಡುತ್ತಾರೆ. ಆದರೆ ವಿಜಯಪುರದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಸ್ವತಃ ಆಕಾಂಕ್ಷಿಯಾಗಿದ್ದಾರೆ. ಇನ್ನೊಂದೆಡೆ ಬಿಜೆಪಿಯಲ್ಲೂ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಪಾಟೀಲ ಕುಚಬಾಳ ಅವರೂ ಒಳಗೊಳಗೆ ಪ್ರಯತ್ನಿಸುತ್ತಿದ್ದು, ಪಕ್ಷ ಅವಕಾಶ ಕೊಟ್ಟರೆ ಬಿಡೋದಿಲ್ಲ ಎನ್ನುತ್ತಿದ್ದಾರೆ.

---

ಬಾಕ್ಸ್

ಗಣಿಹಾರ ಹೆಸರು ಚಾಲ್ತಿಯಲ್ಲಿ?

ಕಾಂಗ್ರೆಸ್‌ನಲ್ಲಿ ಮುಂಚೂಣಿಯಲ್ಲಿರುವ ಅಲ್ಪಸಂಖ್ಯಾತ ನಾಯಕ ಎಸ್.ಎಂ.ಪಾಟೀಲ್ ಗಣಿಹಾರ ಅವರ ಹೆಸರು ಜೋರಾಗಿ ಕೇಳಿ ಬಂದಿದೆ. ಪಕ್ಷಕ್ಕಾಗಿ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರಲ್ಲಿ ಇವರು ಒಬ್ಬರಾಗಿದ್ದಾರೆ. ಇತ್ತ ಬಿಜೆಪಿಯಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೆಸರು ಕೇಳಿಬಂದಿದ್ದು, ವಿಧಾನಸಭೆಯಲ್ಲಿ ಸೋತಿರುವ ಕಾರಣ ಇವರಿಗೆ ಅವಕಾಶ ಸಿಗಬಹುದು ಎಂದು ಇವರ ಹೆಸರನ್ನು ಚಾಲ್ತಿಯಲ್ಲಿ ಬಿಡಲಾಗಿದೆ.

----

ಕೋಟ್....

ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೂ ಯಾರೂ ಆಕಾಂಕ್ಷಿಗಳು ನಮ್ಮನ್ನು ಭೇಟಿಯಾಗಿಲ್ಲ. ಇನ್ನು ಮುಂದೆ ಯಾವ ಯಾವ ಆಕಾಂಕ್ಷಿಗಳು ಸ್ವವಿವರ ಸಲ್ಲಿಸುತ್ತಾರೋ ಅಂತಹ ಅರ್ಜಿಗಳನ್ನು ಹೈಕಮಾಂಡ್‌ಗೆ ಕಳಿಸಿಕೊಡಲಾಗುವುದು.

-ಮಲ್ಲಿಕಾರ್ಜುನ ಲೋಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ.

-------

ಎಂಎಲ್‌ಸಿ ಆಕಾಂಕ್ಷಿಗಳು ನಮ್ಮಲ್ಲಿ ಜಾಸ್ತಿ ಇಲ್ಲ. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹಾಗೂ ಸಿದ್ಧಲಿಂಗ ಹಂಜಗಿ ಅವರು ಮಾತ್ರ ಆಕಾಂಕ್ಷಿಗಳು ಇದ್ದೇವೆ ಎಂದು ತಿಳಿಸಿದ್ದಾರೆ. ಮತ್ಯಾರು ನಮ್ಮ ಗಮನಕ್ಕೆ ತರುತ್ತಾರೋ ಅವರ ಹೆಸರುಗಳನ್ನು ನಾಯಕರುಗಳಿಗೆ ಕಳುಹಿಸಿ ಕೊಡಲಾಗುವುದು. ಒಟ್ಟಿನಲ್ಲಿ ಜಿಲ್ಲೆಗೆ ಒಂದು ಸ್ಥಾನ ಸಿಗಬೇಕು ಎಂಬುದು ನನ್ನ ಅಪೇಕ್ಷೆ ಇದೆ.

-ಆರ್.ಎಸ್.ಪಾಟೀಲ್ ಕುಚಬಾಳ, ಬಿಜೆಪಿ ಜಿಲ್ಲಾಧ್ಯಕ್ಷ.