ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮೂರು ವರ್ಷಗಳ ಹಿಂದೆ ಉದ್ಭವ ಮೂರ್ತಿಯಾಗಿ ಕುಟುಂಬದ ಹಿನ್ನೆಲೆಯಿಂದ ರಾಜಕಾರಣಕ್ಕೆ ಬಂದು ವಿಧಾನ ಪರಿಷತ್ ಸದಸ್ಯರಾಗಿರುವ ಸೂರಜ್ ರೇವಣ್ಣ ಅವರಿಗೆ, ಕೆಲ ವಿಷಯಗಳಲ್ಲಿ ಮಾಹಿತಿ ಕೊರತೆ ಇದೆ. ಹಾಗಾಗಿ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ದೇವರಾಜೇಗೌಡ ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ರಾಜಕೀಯಕ್ಕೆ ಉದ್ಭವ ಮೂರ್ತಿಯಾಗಿ ಕಾಲಿಟ್ಟಿದ್ದಾರೆ. ಎಂಎಲ್‌ಸಿ ಅನುದಾನ ಬಿಟ್ಟು ವೈಯಕ್ತಿಕವಾಗಿ ಸರ್ಕಾರದಿಂದ ಎಷ್ಟು ಅನುದಾನ ತಂದಿದ್ದಾರೆ. ಈ ಸಂದರ್ಭದಲ್ಲಿ ಆಸಿಡ್ ದಾಳಿ ಪ್ರಕರಣವನ್ನು ಪ್ರಸ್ತಾಪಿಸುವ ಅಗತ್ಯ ಇರಲಿಲ್ಲ. ಪ್ರಕರಣ ಸಂಬಂಧ ಆರೋಪಿಗೆ ಶಿಕ್ಷೆಯಾಗಿದ್ದು ಮುಕ್ತಾಯಗೊಂಡಿರುವ ವಿಷಯವನ್ನು ಪ್ರಸ್ತಾಪಿಸುವ ಅವಶ್ಯಕತೆ ಇದೆಯೇ ಎಂದು ಕೇಳಿದರು. ೨೦೦೧ ಫೆಬ್ರವರಿ ೨೧ರಂದು ಸೂರಜ್ ರೇವಣ್ಣ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ದೇವೇಗೌಡರು ಹಾಗೂ ಅವರ ಸಹೋದರ ಬಸವೇಗೌಡರ ನಡುವಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಸಿಡ್ ದಾಳಿ ಪ್ರಕರಣ ನಡೆದಿದೆ. ಬಸವೇಗೌಡರ ಮಗ ಜ್ಞಾನೇಶ್ ಪರ ನ್ಯಾಯಾಲಯದಲ್ಲಿ ನಾನೇ ವಕಾಲತ್ತು ವಹಿಸಿದ್ದೇನೆ. ಈ ಬಗ್ಗೆ ಸ್ಪಷ್ಟ ಮಾಹಿತಿ ನನ್ನ ಬಳಿಯಿದ್ದು, ಇದರಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರ ಅಜ್ಜ ಪುಟ್ಟಸ್ವಾಮಿಗೌಡರ ಪಾತ್ರ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಆಸಿಡ್ ದಾಳಿ ರಾಜಕೀಯ ಪ್ರೇರಿತವಲ್ಲ. ಕೇವಲ ಕುಟುಂಬದ ಕಲಹದಿಂದ ಆಗಿದೆ ಎಂದು ಹೇಳಿದ ಅವರು, ೨೦೦೧ರಲ್ಲಿ ದೇವೇಗೌಡರ ಪತ್ನಿ ಹಾಗೂ ಭವಾನಿ ರೇವಣ್ಣ ಅವರು ದೇವಾಲಯದ ಪೂಜೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಎ೧ ಆರೋಪಿಗೆ ಶಿಕ್ಷೆ ಕೂಡ ಆಗಿದೆ. ಆ ಸಂದರ್ಭದಲ್ಲಿ ಬಸವೇಗೌಡರ ಕುಟುಂಬ ಪುಟ್ಟಸ್ವಾಮಿಗೌಡರ ಸಹಾಯವನ್ನು ಕೇಳಿದ್ದರು ಅಷ್ಟೇ. ಈ ಘಟನೆ ನಡೆದಾಗ ಸೂರಜ್ ರೇವಣ್ಣ ಅವರಿಗೆ ಸುಮಾರು ೧೨ ವರ್ಷ ವಯಸ್ಸು ಇರಬಹುದು. ಆಸಿಡ್ ಪ್ರಕರಣದಲ್ಲಿ ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಸೂರಜ್ ರೇವಣ್ಣ ಮಾಡಬಾರದು ಹಾಗೂ ಪ್ರಕರಣ ಸಂಬಂಧ ಈಗಾಗಲೇ ನ್ಯಾಯಾಲಯದಿಂದ ತೀರ್ಪು ಹೊರಬಿದ್ದಿದ್ದು, ಆರೋಪಿಯು ಶಿಕ್ಷೆಯನ್ನು ಅನುಭವಿಸಿ ಆಗಿದೆ. ಇದೀಗ ತನಿಖೆಗೆ ವಹಿಸಬೇಕು ಎಂಬುದು ಮೂರ್ಖತನವಾಗಿದೆ ಎಂದು ಟೀಕಿಸಿದರು.
ಪಿಎಂ, ಸಿಎಂ, ಸಚಿವರಾದ ಕುಟುಂಬಕ್ಕೆ ಆನೆ ಕಾರಿಡಾರ್ ನೆನಪಾಗಲಿಲ್ಲವೇ! ಕೇವಲ ಲೆಟರ್ ಹೆಡ್‌ನಲ್ಲಿ ಕೇಂದ್ರ ಸಚಿವರಿಗೆ ಮನವಿ ಪತ್ರ ನೀಡಿದರೆ ಸಾಲದು ಎಂದು ಸೂರಜ್ ರೇವಣ್ಣ ಟೀಕಿಸಿದ್ದಾರೆ. ಹಲವು ಬಾರಿ ಸಚಿವರಾಗಿ ಅಧಿಕಾರ ನಡೆಸಿರುವ ದೇವೇಗೌಡರ ಕುಟುಂಬದಿಂದ ಜಿಲ್ಲೆಯಲ್ಲಿ ಆನೆ ಕಾರಿಡಾರ್ ಮಾಡಲು ಏಕೆ ಆಗಲಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಇಚ್ಛಾಶಕ್ತಿ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಯಾರೇ ಒಬ್ಬ ಜನಪ್ರತಿನಿಧಿ ಸಾರ್ವಜನಿಕವಾಗಿ ಮಾತನಾಡುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡಬೇಕು. ಸಾರ್ವಜನಿಕ ವೇದಿಕೆಯಲ್ಲಿ ಎಂಎಲ್ಸಿ ಸೂರಜ್ ರೇವಣ್ಣಗೆ ಅವರ ಕುಟುಂಬದವರೊಂದಿಗೆ ಮಾತನಾಡಿ, ಹಿಂದೆ ನಡೆದಿರುವ ಪ್ರಕರಣ ಕುರಿತು ಸ್ಪಷ್ಟ ಮಾಹಿತಿಯನ್ನು ಪಡೆದು ಮಾತನಾಡುವ ಬುದ್ಧಿ ಬೇಕಿತ್ತು ಎಂದರು. ಎಚ್.ಡಿ. ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಹಂಚಿರಬಹುದು!? ಪೆನ್‌ಡ್ರೈವ್ ಹಂಚುವ ಮೂಲಕ ಶ್ರೇಯಸ್ ಪಟೇಲ್ ಸಂಸದರಾದರು ಎಂಬ ಸೂರಜ್ ರೇವಣ್ಣ ಆರೋಪ ಸತ್ಯಕ್ಕೆ ದೂರವಾದದ್ದು, ಪೆನ್‌ಡ್ರೈವ್ ಅನ್ನು ನಿಮ್ಮ ಕುಟುಂಬ ಸದಸ್ಯರೇ ಹಂಚಿರಬಹುದು ಎಂದು ಅನುಮಾನಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಆರಿಫ್, ಚಂದ್ರಶೇಖರ್, ವಕೀಲ ಸುರೇಶ್, ತುಳಸೀಧರ, ದಿನೇಶ್ ಕುಮಾರ್, ಇತರರು ಉಪಸ್ಥಿತರಿದ್ದರು.