ಮನರೇಗಾ ರದ್ದುಗೊಳಿಸುವ ಮೂಲಕ ಕಾನೂನುಬದ್ಧ ಕೆಲಸದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಡಿಜಿಟಲ್ ಕಣ್ಗಾವಲಿನ ಮೂಲಕ ಗ್ರಾಮಸಭೆಗಳ ಸ್ವಾಯತ್ತತೆಯನ್ನು ಹತ್ತಿಕ್ಕಲಾಗುತ್ತಿದೆ.

ಹುಬ್ಬಳ್ಳಿ:

ಮನರೇಗಾ ಯೋಜನೆ ರದ್ದುಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹುತಾತ್ಮ ದಿನವಾದ ಶುಕ್ರವಾರ ಇಲ್ಲಿನ ಕೆಎಂಸಿಆರ್‌ಐನ ಎದುರಿನ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಮೌನ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಧರಣಿ ಆರಂಭಿಸಿದರು. ಸಂಜೆ ವರೆಗೂ ನಡೆದ ಧರಣಿಯಲ್ಲಿ ಕೆಲ ಹೊತ್ತು ಭಜನೆ ಮಾಡಿದರು.

ಮನರೇಗಾ ಯೋಜನೆ ರದ್ದುಗೊಳಿಸಿ ಹೊಸ ಯೋಜನೆ ತರುತ್ತಿರುವುದು ಗ್ರಾಮೀಣ ಭಾರತದ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ ಎಂದು ದೂರಿದ ಪ್ರತಿಭಟನಾಕಾರರು, ಮನರೇಗಾ ರದ್ದುಗೊಳಿಸುವ ಮೂಲಕ ಕಾನೂನುಬದ್ಧ ಕೆಲಸದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಡಿಜಿಟಲ್ ಕಣ್ಗಾವಲಿನ ಮೂಲಕ ಗ್ರಾಮಸಭೆಗಳ ಸ್ವಾಯತ್ತತೆಯನ್ನು ಹತ್ತಿಕ್ಕಲಾಗುತ್ತಿದೆ. ಕೃಷಿ ಹಂಗಾಮಿನ ಸಮಯದಲ್ಲಿ ಕೆಲಸವನ್ನು ನಿರ್ಬಂಧಿಸುವ ಮೂಲಕ ಕಾರ್ಮಿಕರನ್ನು ಖಾಸಗಿ ಹಿತಾಸಕ್ತಿಗಳ ಅಡಿಯಾಳಾಗುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆ ವೇಳೆ ಪಕ್ಷದ ಎಐಸಿಸಿ ಸದಸ್ಯ ಕಿರಣ ಮೂಗಬಸವ ಚರಕ ನೂಲುವ ಮೂಲಕ ಗಮನ ಸೆಳೆದರು. ಈ ವೇಳೆ ಹು- ಧಾ ಕಾಂಗ್ರೆಸ್ ಘಟಕ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಮುಖಂಡರಾದ ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು. ಮಾಜಿ ಸಂಸದ ಐ.ಜಿ. ಸನದಿ ಭೇಟಿ ನೀಡಿದ್ದರು.