ಸಾರಾಂಶ
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿ ಅಕುಶಲ ಕೂಲಿ ಕೆಲಸ ಮಾಡುವ ಗ್ರಾಮೀಣ ಕೂಲಿಕಾರರ ದಿನಗೂಲಿ ದರವನ್ನು 349- 370 ರುಪಾಯಿಗಳಿಗೆ ಹೆಚ್ಚಳ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಆದೇಶ ಹೊರಡಿಸಿದೆ.
ರಾಮನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿ ಅಕುಶಲ ಕೂಲಿ ಕೆಲಸ ಮಾಡುವ ಗ್ರಾಮೀಣ ಕೂಲಿಕಾರರ ದಿನಗೂಲಿ ದರವನ್ನು 349- 370 ರುಪಾಯಿಗಳಿಗೆ ಹೆಚ್ಚಳ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಆದೇಶ ಹೊರಡಿಸಿದೆ.
ಏಪ್ರಿಲ್ 1ರಿಂದಲೇ ಹೊಸ ದಿನಗೂಲಿ ದರ ಜಾರಿಗೆ ಬಂದಿದ್ದು, ಮಂತ್ರಾಲಯದ ಆದೇಶದಂತೆ ದಿನಕ್ಕೆ 21 ರುಪಾಯಿ ಏರಿಕೆಯಾಗಲಿದೆ. ಗಂಡು ಮತ್ತು ಹೆಣ್ಣು ಕೂಲಿಕಾರರಿಬ್ಬರಿಗೂ ಈ ದರ ಅನ್ವಯವಾಗಲಿದೆ. ಈ ಕೂಲಿ ಹೆಚ್ಚಳದಿಂದ ಜಿಲ್ಲೆಯಲ್ಲಿರುವ ಜಾಬ್ ಕಾರ್ಡ್‌ದಾರರಿಗೆ ಅನುಕೂಲವಾಗಲಿದೆ.
ದುಡಿಯುವ ಪ್ರತಿ ಕೈಗೆ ವರ್ಷದಲ್ಲಿ 100 ದಿನ ಕೆಲಸ ಕೊಡಬೇಕು ಎಂಬುದು ನರೇಗಾ ಯೋಜನೆಯ ಉದ್ದೇಶ. ಅದರಂತೆ ಜಾಬ್ ಕಾರ್ಡ್ ಹೊಂದಿದವರು 100 ದಿನ ಕೆಲಸ ಮಾಡಿದರೆ ದಿನಕ್ಕೆ 370 ರುಪಾಯಿಗಳಂತೆ ವರ್ಷದಲ್ಲಿ 37,000 ರುಪಾಯಿ ಕೂಲಿ ಹಣ ಇ-ಎಫ್‌ಎಂಎಸ್ ಮುಖಾಂತರ ನೇರವಾಗಿ ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ.
2025-26ರ ಆರ್ಥಿಕ ವರ್ಷದ ನರೇಗಾ ಯೋಜನೆಯ ಕ್ರಿಯಾ ಯೋಜನೆಯಲ್ಲಿಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಮಣ್ಣು ಮತ್ತು ನೀರು ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದು, ಜತೆಯಲ್ಲಿ ಶಾಲಾಭಿವೃದ್ಧಿ ಕಾಮಗಾರಿಗಳು, ಸಿಸಿ ಡ್ರೈನ್, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಟಾನ ಮಾಡಿಕೊಳ್ಳಲು ಅವಕಾಶ ನೀಡಿದೆ. ಫಲಾನುಭವಿಗೆ ಖಾತೆಗೆ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಿದ ಆಧಾರದ ಮೇಲೆ ಹಣ ಸಂದಾಯವಾಗುತ್ತದೆ.
ಉದ್ಯೋಗ ಚೀಟಿ ಪಡೆದುಕೊಳ್ಳೋದು ಹೇಗೆ? :
ನರೇಗಾ ಯೋಜನೆ ಅನುಕೂಲ ಪಡೆದುಕೊಳ್ಳಲು ಉದ್ಯೋಗ ಚೀಟಿ ಹೊಂದಿರುವುದು ಕಡ್ಡಾಯ. 18 ವರ್ಷ ಮೇಲ್ಪಟ್ಟವರು ಸಂಬಂಧಿಸಿದ ಗ್ರಾಪಂಗೆ ಭೇಟಿ ನೀಡಿ, ನಮೂನೆ-1 ನ್ನು ಭರ್ತಿ ಮಾಡಿ, ಆಧಾರ ಕಾರ್ಡ್, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಭಾವಚಿತ್ರ ನೀಡಿ, ಉದ್ಯೋಗ ಚೀಟಿ ಪಡೆಯಬೇಕು. ಒಂದು ಕುಟುಂಬಕ್ಕೆ ಒಂದು ಉದ್ಯೋಗ ಚೀಟಿ ಮಾತ್ರವೇ ನೀಡಲಾಗುತ್ತದೆ. ಉದ್ಯೋಗ ಚೀಟಿ ಪಡೆದುಕೊಂಡ ಮೇಲೆ ಯೋಜನೆಯಡಿ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿ ಕೂಲಿ ಪಡೆಯಬಹುದು ಅಥವಾ ತಮ್ಮ ಜಮೀನುಗಳಲ್ಲಿವೈಯಕ್ತಿಕ ಕಾಮಗಾರಿ ಅನುಷ್ಟಾನ ಮಾಡಿಕೊಂಡು ಕೂಲಿ ಪಡೆಯಲು ಅವಕಾಶವಿದೆ.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಬೇಸಿಗೆ ಕಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಜನರು ಉದ್ಯೋಗ ಬೇಡಿಕೆ ನೀಡಿದ ತಕ್ಷಣ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿ ಕೂಲಿ ಪಾವತಿ ಮಾಡಲು ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಮುಖ್ಯವಾಗಿ ನರೇಗಾ ಯೋಜನೆಯಡಿ ಐಇಸಿ ಚಟುವಟಿಕೆಗಳ ಮುಖಾಂತರ ಗ್ರಾಮೀಣ ಪ್ರದೇಶಗಳಲ್ಲಿನ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆಯರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಅಗತ್ಯ ಕ್ರಮವಹಿಸಲಾಗಿದ್ದು, ಎಲ್ಲಾ ಗ್ರಾಪಂಗಳಲ್ಲಿ ಮಾಹಿತಿ, ಶಿಕ್ಷಣ ಮತ್ತು (ಐಇಸಿ) ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೂಲಿಕಾರರನ್ನು ಸಂಘಟಿಸಿ 50 ಕೂಲಿಕಾರರಿರುವ ಕಾರ್ಮಿಕ ಸಂಘಗಳನ್ನು ರಚಿಸಿ ಅದಕ್ಕೆ ಒಬ್ಬ ಕಾಯಕ ಬಂಧುವನ್ನು ನೇಮಿಸಿ ಅವರ ಮೂಲಕ ಕೂಲಿ ಬೇಡಿಕೆ ಪಡೆಯಲು ಗ್ರಾಮ ಪಂಚಾಯತಿಗಳ ವಾರ್ಡಗಳಲ್ಲಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ವಿಶೇಷ ಅಭಿಯಾನಗಳನ್ನು ಆಯೋಜಿಸಿ ಕೂಲಿಕಾರರಿಂದ ಕೂಲಿ ಬೇಡಿಕೆ ಪಡೆದು ಸಮಯಕ್ಕೆ ಸರಿಯಾಗಿ ಕೆಲಸ ಒದಗಿಸಲಾಗುತ್ತದೆ.
ಮನರೇಗಾದಡಿ ಏನೆಲ್ಲ ಸೌಲಭ್ಯವಿದೆ?:
ಮನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ 06 ತಿಂಗಳ ಗರ್ಭಿಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯರಿಗೆ ಮಗುವಿನ ಜನನ ದಿನಾಂಕದಿಂದ 06 ತಿಂಗಳವರೆಗೆ ಯೋಜನೆಯಡಿ ನಿಗದಿತ ಕೂಲಿ ಪಡೆಯಲು ನಿಗದಿಪಡಿಸಲಾದ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗಿದೆ. ರಿಯಾಯತಿ ಪಡೆಯಲು ಆರೋಗ್ಯ ಇಲಾಖೆಯು ನೀಡುವ ತಾಯಿ ಕಾರ್ಡ್‌ನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2025ರ ಏಪ್ರಿಲ್ 1ರಿಂದ ಪ್ರತಿ ದಿನಕ್ಕೆ 370 ರುಪಾಯಿ ಕೂಲಿಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ನಿಗದಿಪಡಿಸಿದೆ. ರೈತರು, ತಮ್ಮ ಜಮೀನುಗಳಲ್ಲಿ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಅರಣ್ಯ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸಹಾಯಧನ ಪಡೆಯಲು ಈ ಯೋಜನೆಯಡಿ ಅವಕಾಶವಿದೆ.
-ಅನ್ಮೋಲ್ ಜೈನ್, ಸಿಇಒ, ಜಿಪಂ, ರಾಮನಗರ