ಕನ್ನಡಪ್ರಭ ವಾರ್ತೆ ಬೇಲೂರು

ಇತ್ತೀಚಿನ ದಿನಗಳಲ್ಲಿ ಯುವಕರು ಹಾಗೂ ಮಕ್ಕಳು ವಿಪರೀತ ಮೊಬೈಲ್‌ ಗೀಳಿನಿಂದಾಗಿ ಕ್ರೀಡಾ ಕ್ಷೇತ್ರದಿಂದ ದೂರ ಉಳಿಯುತ್ತಿದ್ದಾರೆ ಎಂದು ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಕರ್ತರು ಮತ್ತು ವಿವಿಧ ಇಲಾಖೆಗಳೊಂದಿಗೆ ಸ್ನೇಹ ಸಮ್ಮಿಲನ ಕ್ರಿಕೆಟ್ ಪಂದ್ಯಾವಳಿ ಸಮಾರಂಭದಲ್ಲಿ ಮಾತನಾಡಿದರು.ಕ್ರೀಡೆಯಲ್ಲಿ ಗೆಲ್ಲುವ ಹುಮ್ಮಸ್ಸಿಗಿಂತ ಭಾಗವಹಿಸುವುದು ಬಹುಮುಖ್ಯ. ಕ್ರೀಡೆಯಲ್ಲಿ ಸೋಲು- ಗೆಲುವು ಸರ್ವೇ ಸಾಮಾನ್ಯವಾಗಿದ್ದು, ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.

ಸಿಪಿಐ ರೇವಣ್ಣ ಮಾತನಾಡಿ, ಪತ್ರಕರ್ತರು ಮತ್ತು ಇಲಾಖೆಗಳ‌ ನಡುವೆ ಸಾಮರಸ್ಯ ತರಲು ಮತ್ತು ಒತ್ತಡ ಬದುಕಿನಿಂದ ಹೊರಗೆ ಬರಲು ಇಂತಹ ಕ್ರೀಡಾಕೂಟವನ್ನು ಪತ್ರಕರ್ತರ ಸಂಘ ಹಮ್ಮಿಕೊಂಡಿರುವುದು ಸಂತೋಷವಾಗಿದೆ. ಕ್ರೀಡೆ ಮನುಷ್ಯನಿಗೆ ಅತ್ಯಂತ ಪ್ರಮುಖ ಪಾತ್ರ ವಹಿಸುವ ಹಿನ್ನೆಲೆ ವಯಸ್ಸಿನ ಅಂತರವಿಲ್ಲದೆ ಕ್ರೀಡೆ, ಯೋಗ, ಧ್ಯಾನ ಇವುಗಳಲ್ಲಿ ಭಾಗವಹಿಸಿ ಆರೋಗ್ಯ ಸದೃಢವಾಗಿಡಬೇಕು ಎಂದರು.

ಬೇಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ.ಶಿವರಾಜ್ ಮಾತನಾಡಿ, ಪತ್ರಕರ್ತರ ಸಂಘ ಕಳೆದ ಮೂರು ದಶಕದಿಂದ ಮಾಧ್ಯಮ ದಿನಾಚರಣೆ ಅಂಗವಾಗಿ ವಿವಿಧ ಇಲಾಖೆಯೊಂದಿಗೆ ಸ್ನೇಹ ಸಮ್ಮಿಲನ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡು ಬರುತ್ತಿದೆ. ಈ ಬಾರಿ ಕೂಡ ಸುಮಾರು ೧೨ ತಂಡಗಳು ಭಾಗವಹಿಸಿವೆ. ವಿಜೇತ ತಂಡಗಳಿಗೆ ಮಾಧ್ಯಮ ದಿನಾಚರಣೆ ದಿನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪತ್ರಕರ್ತರ ಸಂಘ ಸಮಾಜಮುಖಿ ಮತ್ತು ಜನಪರ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.


ಬೇಲೂರು ಪುರಸಭಾ ಅಧ್ಯಕ್ಷ ಅಕ್ರಂ ಶರೀಪ್, ಮಾಜಿ ಅಧ್ಯಕ್ಷ ಎ.ಆರ್.ಅಶೋಕ್, ಸದಸ್ಯರಾದ ಜಮಾಲುದ್ದೀನ್, ವಕೀಲರ ಸಂಘದ ಅಧ್ಯಕ್ಷ ನಟರಾಜ್, ಬೇಲೂರು ಲಯನ್ಸ್ ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಬೇ.ನಾ.ತಾರಾನಾಥ, ಎನ್.ಅನಂತು, ಮಂಜುನಾಥ ಶೆಟ್ಟಿ, ಡಿ.ಬಿ.ಮೋಹನ್ ಕುಮಾರ್, ರಾಘವೇಂದ್ರ ಹೊಳ್ಳ, ಹೆಬ್ಬಾಳು ಹಾಲಪ್ಪ, ವೈ.ಆರ್.ಭಾರತೀಗೌಡ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲಕ್ಷ್ಮಣ್, ಖಜಾಂಚಿ ಲೋಹಿತ್, ಮಾಜಿ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಮಲ್ಲೇಶ, ಡಾ.ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ತೀರ್ಥಂಕರ, ಪಿಎಸ್ ಐ ಶಿವಾನಂದ ಪಾಟೀಲ ಮುಂತಾದವರು ಹಾಜರಿದ್ದರು.