ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 1962 ಸಂಖ್ಯೆಯ ತುರ್ತು ಚಿಕಿತ್ಸಾ ಸಂಚಾರಿ ಪಶು ಸಂಜೀವಿನಿ ಯೋಜನೆಯು ತುರ್ತು ಸಂದರ್ಭದಲ್ಲಿ ರೈತರ ಜಾನುವಾರುಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: 108 ಆ್ಯಂಬುಲೆನ್ಸ್ ಸೇವೆಯ ಮಾದರಿಯಲ್ಲಿಯೇ ಮನೆ ಬಾಗಿಲಿಗೆ ಬಂದು ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡುವ 1962 ಸಂಚಾರಿ ಪಶು ಸಂಜೀವಿನಿ ಯೋಜನೆಯು ತಾಲೂಕಿನ ಗ್ರಾಮೀಣ ಭಾಗದ ರೈತರಿಗೆ ಅಕ್ಷರಶಃ ರೈತ ಸಂಜೀವಿನಿ ಆಗಿದೆ.

ಕೇಂದ್ರ ಮತ್ತು ರಾಜ್ಯಸರ್ಕಾರಗಳ ಸಹಯೋಗದೊಂದಿಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 1962 ಸಂಖ್ಯೆಯ ತುರ್ತು ಚಿಕಿತ್ಸಾ ಸಂಚಾರಿ ಪಶು ಸಂಜೀವಿನಿ ಯೋಜನೆಯು ತುರ್ತು ಸಂದರ್ಭದಲ್ಲಿ ರೈತರ ಜಾನುವಾರುಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ.

ಈ ಸೇವೆಯು ಸಂಪೂರ್ಣ ಉಚಿತವಾಗಿದೆ. ನಾನಾ ಕಾಯಿಲೆಗಳಿಂದ ಬಳಲುತ್ತಿರುವ ಜಾನುವಾರುಗಳಿಗೆ ರೈತರು 1962- ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ವಿಳಾಸ ನೀಡಿದರೆ ವಾಹನ ಸಮೇತವಾಗಿ ಸಿಬ್ಬಂದಿ ತಮ್ಮ ಮನೆ ಬಾಗಿಲಿಗೆ ಬಂದು ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ.

ನಾಯಿ, ಕೋಳಿ ಮತ್ತು ಬೆಕ್ಕು ಹೊರತುಪಡಿಸಿ ರೈತರ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತದೆ, ತಾಲೂಕಿನಲ್ಲಿ ಎರಡು ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆ ಲಭ್ಯವಿದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತದೆ.

ಈ ಪಶು ಸಂಜೀವಿನಿ ವಾಹನದಲ್ಲಿ ಪಶು ವೈದ್ಯರು, ಸಹಾಯಕರು, ಚಾಲಕರು ಸೇರಿ ಮೂರು ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ರೈತರು ಮತ್ತು ಜಾನುವಾರು ಮಾಲೀಕರು1962-ಸಹಾಯವಾಣಿಗೆ ಕರೆ ಮಾಡುವ ಮೂಲಕ ಇದರ ಸೇವೆಯನ್ನು ಪಡೆಯಬಹುದು.

ಯಾವವ ಕಾಯಿಲೆಗೆ ಚಿಕಿತ್ಸೆ: ಜಾನುವಾರುಗಳ ಅಪಘಾತ, ಹೆರಿಗೆ ಸಮಸ್ಯೆ, ಮೈ ಹೊಬೀಳುವುದು, ಹೊಟ್ಟೆ ಉಬ್ಬರ, ವಿಷಪ್ರಾಶನ, ಕೀಟನಾಶಕ ಸೇವನೆ, ಹಾವು ಕಡಿತ, ಕಾಲು ಮುರಿತ, ಮೇಲೆ ಏಳಲು ಆಗದಿರುವುದು, ನೆಲ ಕಟ್ಟುವುದು ಸೇರಿದಂತೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತದೆ.

ಪ್ರಸ್ತುತ ತಾಲೂಕಿನಲ್ಲಿ 81,751 ಜಾನುವಾರುಗಳು, 3,95,873 ಕುರಿ-ಮೇಕೆಗಳಿವೆ. 2025-26ನೇ ಸಾಲಿನಲ್ಲಿ ಒಟ್ಟು 1225 ಜಾನುವಾರುಗಳಿಗೆ ಈ ಯೋಜನೆಯಿಂದ ಉಚಿತ ಚಿಕಿತ್ಸೆ ನೀಡಲಾಗಿದೆ. ಆದರೆ ಈ ಯೋಜನೆ ಬಗ್ಗೆ ತಾಲೂಕಿನ ಕೆಲ ರೈತರಿಗೆ ಮಾಹಿತಿ ಇಲ್ಲ. 1962-ಸಹಾಯವಾಣಿಗೆ ಕರೆ ಮಾಡುವ ಮೂಲಕ ರೈತರು ಇದರ ಸೇವೆಯನ್ನು ಪಡೆಯಬೇಕು ಎನ್ನುತ್ತಾರೆ ಪಶು ವೈದ್ಯ ಡಾ.ಶಿವಕುಮಾರ್.

ಹೈನುಗಾರಿಕೆಯನ್ನೇ ನಂಬಿ ಜೀವನ ಕಟ್ಟಿಕೊಂಡಿರುವ ಗ್ರಾಮೀಣ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಈ ಯೋಜನೆಯಿಂದ ತುಂಬಾ ಅನುಕೂಲವಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕಿದೆ.

ಸಾಮಾನ್ಯವಾಗಿ ಮನುಷ್ಯ ಅನಾರೋಗ್ಯ ಪೀಡಿತನಾದಾಗ ಹತ್ತಿರದ ಆಸ್ಪತ್ರೆಗೆ ಹೋಗುತ್ತಾನೆ. ಆದರೆ ಬಾಯಿ ಇಲ್ಲದ ಮೂಕ ಪ್ರಾಣಿಗಳಿಗೆ ಅನಿರೀಕ್ಷಿತ ತೊಂದರೆಯಾದಾಗ ಕರೆದುಕೊಂಡು ಹೋಗಲು ಆಸ್ಪತ್ರೆಗಳೇ ಇರುವುದಿಲ್ಲ. ಇಂತಹ ತುರ್ತು ಸಂದರ್ಭದಲ್ಲಿ ಪಶು ಸಂಜೀವಿನಿ ಯೋಜನೆಯು ಲಭ್ಯವಿದ್ದು ತಾಲೂಕಿನ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ತಾಲೂಕಿನಲ್ಲಿ ಜಾನುವಾರುಗಳ ತುರ್ತು ಚಿಕಿತ್ಸೆಗಾಗಿ ಸಂಚಾರ ಪಶು ಸಂಜೀವಿನಿ ಯೋಜನೆ ಲಭ್ಯವಿದೆ. 1962-ಸಹಾಯವಾಣಿಗೆ ಕರೆ ಮಾಡುವ ಮೂಲಕ ರೈತರು ಇದರ ಸೇವೆ ಪಡೆಯಬೇಕು ಎನ್ನುತ್ತಾರೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹರಪನಹಳ್ಳಿ ಡಾ.ಶಿವಕುಮಾರ್.

ಕಳೆದ ಮೂರು ವರ್ಷಗಳಿಂದ ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದೇವೆ. ಈ ಹಿಂದೆ ಜಾನುವಾರುಗಳು ಅನಾರೋಗ್ಯಕ್ಕೆ ಒಳಗಾದಾಗ ತುಂಬ ತೊಂದರೆ ಆಗುತ್ತಿತ್ತು. ಈಗ ಪಶು ಸಂಜೀವಿನಿ ಯೋಜನೆ ಜಾರಿಯಾದ ಮೇಲೆ ನಮಗೆ ತುಂಬ ಅನುಕೂಲವಾಗಿದೆ ಎನ್ನುತ್ತಾರೆ ಪಾವನಪುರ ಗ್ರಾಮದ ಪ್ರಸಾದ ಕವಾಡಿ.