ಕನ್ನಡಪ್ರಭ ವಾರ್ತೆ ಹಾಸನ
ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏಪ್ರಿಲ್ ೧೧ ೨೦೨೬ರಂದು ಅಣಕು ಸಿಇಟಿ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.ಈ ಅಣಕು ಪರೀಕ್ಷೆಯನ್ನು ನಡೆಸುವ ಮೂಲ ಉದ್ದೇಶ ಸಂಪೂರ್ಣವಾಗಿ ವಿದ್ಯಾರ್ಥಿ ಸ್ನೇಹಿಯಾಗಿದ್ದು, ಈಗಾಗಲೇ ಈ ದಿಸೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿ ಸಮೂಹವು ತಮ್ಮ ಪರೀಕ್ಷಾ ಸಾಮರ್ಥ್ಯವನ್ನು ಓರೆಗೆ ಹಚ್ಚಿ ನೋಡಿಕೊಳ್ಳುವ ಸುವರ್ಣಾವಕಾಶವಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ ವಿಷಯಗಳಲ್ಲಿ ತಮಗಿರುವ ಪರಿಣತಿ, ತಮ್ಮ ದೌರ್ಬಲ್ಯಗಳು, ಸುದಾರಿಸಬೇಕಾದ ವಿಷಯ ಸಂಗತಿಗಳು, ಸಮಯ ಪರಿಪಾಲನೆ ಹಾಗೂ ಪರೀಕ್ಷಾ ಮಾದರಿಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯಲು ಸಹಾಯವಾಗುತ್ತದೆ. ಈ ಅಣಕು ಪರೀಕ್ಷೆಯಲ್ಲಿ ನಗರದ ಹಾಗೂ ಸುತ್ತಮುತ್ತಲ ಕಾಲೇಜುಗಳ ಸುಮಾರು ೩೦೦ಕ್ಕೂ ಹೆಚ್ಚು ಆಕಾಂಕ್ಷಿಗಳು ಭಾಗವಹಿಸಿದ್ದರು.
ಈ ಅಣಕು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನೋಂದಣಿ ಸಂಪೂರ್ಣವಾಗಿ ಉಚಿತವಾಗಿದ್ದು, ಸಾರಿಗೆ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಪರೀಕ್ಷೆಯ ಮೇಲ್ವಿಚಾರಣೆ ಜವಾಬ್ದಾರಿಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಶ್ ಪಿ.ಕೆ. ರವರು ವಹಿಸಿದ್ದರು. ಡೀನ್ ಅಕಾಡೆಮಿಕ್ ಡಾ. ರಾಮಮೂರ್ತಿ ಡಿ., ಅಸಿಸ್ಟೆಂಟ್ ಪ್ರೋಫೆಸರ್ ಡಾ. ಎಂ. ಸೋಮಶೇಖರ್, ಡಾ. ಧನಲಕ್ಷ್ಮಿ ಬಿ., ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಬೋಧಕ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ನಡೆಯಿತು.