ಕೋಸ್ಟ್‌ಗಾರ್ಡ್‌ನಿಂದ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ

| Published : Feb 04 2024, 01:32 AM IST

ಕೋಸ್ಟ್‌ಗಾರ್ಡ್‌ನಿಂದ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಗೋವಾ, ಕಾರವಾರದ ಅರಬ್ಬಿ ಸಮುದ್ರದಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್‌ನಿಂದ ಮೀನುಗಾರರ ರಕ್ಷಣೆಯ ಅಣಕು ಕಾರ್ಯಾಚರಣೆ ನಡೆಯಿತು. ಕೋಸ್ಟ್ ಗಾರ್ಡ್ ಹೇಗೆ ಕೆಲಸ ಮಾಡುತ್ತದೆ? ದಾಳಿಕೋರರನ್ನು ಹಿಮ್ಮೆಟ್ಟಿಸುತ್ತದೆ? ಎನ್ನುವುದನ್ನು ನೈಜ ಗುಂಡಿನ ಚಕಮಕಿ ಮೂಲಕ ತೋರಿಸಲಾಯಿತು.

ಕಾರವಾರ: ಇಂಡಿಯನ್ ಕೋಸ್ಟ್ ಗಾರ್ಡ್‌ನ ರೋಚಕ ಕಾರ್ಯಾಚರಣೆ, ಮೀನುಗಾರರ ರಕ್ಷಣೆ ಇದಕ್ಕೆಲ್ಲಾ ಇಲ್ಲಿನ ಅರಬ್ಬಿ ಸಮುದ್ರ ಸಾಕ್ಷಿಯಾಯಿತು. ಮೈನವಿರೇಳಿಸುವ ಅಣಕು ಕಾರ್ಯಾಚರಣೆಯ ಶನಿವಾರ ಮೂಲಕ ಸಾರ್ವಜನಿಕರಿಗೆ ತೋರಿಸಲಾಯಿತು.

ಗೋವಾ ರಾಜ್ಯದ ಕಾಣಕೋಣ ಸಮೀಪದ ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್‌ನ ಐಸಿಜಿ ವಿಕ್ರಮ, ಐಸಿಜಿ ಸಾವಿತ್ರಿ ಫುಲೆ, ಐಸಿಜಿ ಕಸ್ತೂರ್ಬಾ ಗಾಂಧಿ ಹಡಗುಗಳು ಹಾಗೂ ಜಾರ್ಲಿ ೪೪೮ ಗಸ್ತು ಬೋಟ್ ಅಣಕು ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಕರಾವಳಿ ಭಾಗದಲ್ಲಿ ಮೀನುಗಾರಿಕೆಯೇ ಪ್ರಮುಖ ಉದ್ಯೋಗವಾಗಿದ್ದು, ಆಳ ಸಮುದ್ರ ಮೀನುಗಾರಿಕೆಗೆಂದು ಅರಬ್ಬಿ ಸಮುದ್ರಕ್ಕೆ ಸಾಕಷ್ಟು ಬೋಟ್‌ಗಳು ತೆರಳುತ್ತವೆ. ಈ ವೇಳೆ ಬೋಟ್‌ನಲ್ಲಿ ಅಗ್ನಿ ಅವಘಡವಾದಾಗ ಹಡಗನ್ನು ಬಳಿಕೆ ಮಾಡಿಕೊಂಡು ನೀರಿನಿಂದ ಹೇಗೆ ಬೆಂಕಿ ಆರಿಸಲಾಗುತ್ತದೆ. ಮೀನುಗಾರರು ಆಯತಪ್ಪಿ, ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಾಗ ಮಾಹಿತಿ ರವಾನಿಸಲಾಗುತ್ತದೆ. ಕೋಸ್ಟ್ ಗಾರ್ಡ್‌ನ ಹಡಗಿನಲ್ಲಿ ಕೂಡಲೇ ಆಗಮಿಸಿದ ಸಿಬ್ಬಂದಿ ರ‍್ಯಾಫ್ಟ್ ಬೋಟ್ ಮೂಲಕ ಅವರ ರಕ್ಷಣೆ ಹೇಗೆ ಮಾಡುತ್ತಾರೆ ಎನ್ನುವ ಕುರಿತು ಕೋಸ್ಟ್ ಗಾರ್ಡ್ ಸಿಬ್ಬಂದಿ ಅಣಕು ಪ್ರದರ್ಶನ ನೀಡಿದರು.

ಇತ್ತೀಚಗೆ ಸರಕು ಸಾಗಾಣಿಕಾ ಹಡಗಿನ ಮೇಲೆ ಗಲ್ಫ್ ಆಫ್‌ ಏಡನ್‌ನಲ್ಲಿ ಕಡಲ್ಗಳ್ಳರು ದಾಳಿ ಮಾಡಿದ್ದರು. ಭಾರತೀಯ ರಕ್ಷಣಾ ಪಡೆಗಳೇ ನೆರವು ನೀಡಿತ್ತು. ಇದರ ಹೊರತಾಗಿ ಹಲವು ದಾಳಿ ನಡೆದಿದ್ದು, ಸಾಕಷ್ಟು ಆತಂಕವನ್ನು ಉಂಟುಮಾಡಿದೆ. ಜಲಮಾರ್ಗದಲ್ಲಿ ಇಂತಹ ದಾಳಿಗಳು ನಡೆದಾಗ ಕೋಸ್ಟ್ ಗಾರ್ಡ್ ಹೇಗೆ ಕೆಲಸ ಮಾಡುತ್ತದೆ? ದಾಳಿಕೋರರನ್ನು ಹಿಮ್ಮೆಟ್ಟಿಸುತ್ತದೆ? ಎನ್ನುವುದನ್ನು ನೈಜ ಗುಂಡಿನ ಚಕಮಕಿ ಮೂಲಕ ತೋರಿಸಲಾಯಿತು.

ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರಿನಿಂದ ಅಂದಾಜು ೧೦೦ಕ್ಕೂ ಅಧಿಕ ಸಾರ್ವಜನಿಕರು ಕೋಸ್ಟ್‌ ಗಾರ್ಡ್‌ನ ಹಡಗಿನಲ್ಲಿ ಆಳ ಸಮುದ್ರಕ್ಕೆ ತೆರಳಿ ರಕ್ಷಣಾ ಪಡೆಯ ಕಾರ್ಯವೈಖರಿ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಇಂಡಿಯನ್ ಕೋಸ್ಟ್ ಗಾರ್ಡ್‌ನಿಂದ ಅಣಕು ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ರಕ್ಷಣಾ ಕಾರ್ಯದ ಬಗ್ಗೆ ತೋರಿಸಿರುವುದು ಶ್ಲಾಘನೀಯವಾಗಿದೆ. ಇದು ಯುವ ಜನಾಂಗಕ್ಕೆ ದೇಶ ಸೇವೆಗೆ ಸೇರಿಕೊಳ್ಳಲು ಸ್ಫೂರ್ತಿದಾಯಕವಾಗಿದೆ. ಜತೆಗೆ ಅರಬ್ಬಿ ಸಮುದ್ರದಲ್ಲಿ ಅವರ ಬದುಕು ಹೇಗಿರುತ್ತದೆ ಎನ್ನುವುದು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮ ಸಂಘಟಿಸಬೇಕು ಎಂದು ಕಾರವಾರ ಸರ್ಕಾರಿ ಪದವಿ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಮಹೇಂದ್ರಕುಮಾರ ಹೇಳಿದರು.