ರಾಜ್ಯದ ಇನ್ನೂ 3 ಕಡೆ ಮಾಕ್‌ಡ್ರಿಲ್‌

| Published : May 08 2025, 12:30 AM IST

ಸಾರಾಂಶ

ಪಹಲ್ಗಾಂನಲ್ಲಿ ನಡೆದ ಹಿಂದು ನರಮೇಧಕ್ಕೆ ಪ್ರತಿಕಾರವಾಗಿ ಭಾರತದಿಂದ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ನಡೆವು ಯುದ್ಧ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಬುಧವಾರ ಹಾಜ್ಯದ ಹಲವು ಕಡೆಗಳಲ್ಲಿ ಅಣಕು ಕವಾಯಿತು (ಮಾಕ್ ಡ್ರಿಲ್‌) ನಡೆಸಲಾಯಿತು.

ಕನ್ನಡಪ್ರಭವಾರ್ತೆ ಬೆಂಗಳೂರು

ರಾಯಚೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬುಧವಾರ ಸಂಜೆ ಆಪರೇಷನ್‌ ಅಭ್ಯಾಸ್‌ ಹೆಸರಿನಡಿ ಅಣಕು ಕವಾಯಿತು ನಡೆಸಲಾಯಿತು. ದಕ್ಷಿಣ ಮಧ್ಯೆ ರೈಲ್ವೆ ಗುಂತಕಲ್ ವಿಭಾಗದ ವ್ಯಾಪ್ತಿಗೆ ಬರುವ ರಾಯಚೂರು ರೈಲ್ವೆ ನಿಲ್ದಾಣದ ಆವರಣದಲ್ಲಿ ರೈಲ್ವೆ ಪೊಲೀಸ್‌ ಇಲಾಖೆ, ನಾಗರಿಕ ರಕ್ಷಣಾ ವಿಭಾಗದ ಅಧಿಕಾರಿ, ಸಿಬ್ಬಂದಿ ತಂಡ ಮಾಕ್‌ ಡ್ರಿಲ್‌ ನಡೆಸಿತು. ಯುದ್ಧದ ಸಮಯದಲ್ಲಿ ಎದುರಾಗುವ ಸನ್ನಿವೇಶ, ಬಾಂಬ್‌ ಸ್ಫೋಟ, ಸ್ವಯಂ ರಕ್ಷಣೆ, ಗಾಯಾಳುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡುವುದು, ಬೆಂಕಿ ನಂದಿಸುವುದರ ಕುರಿತು ಅಣಕು ಪ್ರದರ್ಶನ ನಡೆಸಲಾಯಿತು.

ಹಾಗೆಯೇ ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಮಾಕ್‌ ಡ್ರಿಲ್‌ ನಡೆಸಲಾಯಿತು. ಮಧ್ಯಾಹ್ನ ರಕ್ಷಾ ವಿಶ್ವವಿದ್ಯಾಲಯದಲ್ಲಿ ಸೈರನ್‌ ಶಬ್ದ ಕೇಳಿಸಿತು. ತರಗತಿಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಕೂಡಲೇ ಬೆಂಚ್‌, ಟೇಬಲ್‌ ಅಡಿಯಲ್ಲಿ ಕುಳಿತು ರಕ್ಷಣೆ ಪಡೆದರು. ಬಯಲಿನಲ್ಲಿ ಆಟವಾಡುತ್ತಿದ್ದವರು ಕಟ್ಟಡಗಳ ಅಡಿ ಓಡಿ ಬಂದರು. ಕಟ್ಟಡಗಳು ಇಲ್ಲದೆಡೆ ನೆಲದ ಮೇಲೆ ಮಲಗಿದರು. ಸ್ವಲ್ಪ ಸಮಯದ ಬಳಿಕ ಗಾಯಾಳುಗಳ ರಕ್ಷಣೆ, ಪ್ರಾಥಮಿಕ ಚಿಕಿತ್ಸೆ ನೀಡುವ ಕುರಿತು ಮಾಕ್‌ ಡ್ರಿಲ್‌ ಮಾಡಲಾಯಿತು.

ಅದೇ ರೀತಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್‌ನ ತುರ್ತು ಕಾರ್ಯಾಚರಣೆ ಯೋಜನೆಯಂತೆ ಅಣಕು ಪ್ರದರ್ಶನ ನಡೆಸಲಾಯಿತು. ವಿಮಾನ ನಿಲ್ದಾಣದ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರದಂತೆ ಸಿಐಎಸ್‌ಎಫ್‌ ತಂಡವು ಅಣಕು ಕಾರ್ಯಾಚರಣೆ ನಡೆಸಿತು.