ಕಾರವಾರದಲ್ಲಿ ಸಾಗರ ಕವಚ ಅಣಕು ಕಾರ್ಯಾಚರಣೆ, ವಿವಿಧ ಭದ್ರತಾ ಪಡೆಗಳು ಭಾಗಿ

| Published : Oct 17 2024, 12:00 AM IST

ಸಾರಾಂಶ

ಸಾಗರ ಕವಚ ಅಣಕು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕರಾವಳಿಯ ಉದ್ದಗಲಕ್ಕೂ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ರಾಷ್ಟ್ರೀಯ ಹೆದ್ದಾರಿ­ ೬೬ರ ಅಲ್ಲಲ್ಲಿ ತಾತ್ಕಾಲಿಕ ನಾಕಾ­ಬಂಧಿಗಳನ್ನು ನಿರ್ಮಿಸಿ, ವಾಹನಗಳನ್ನು ತಪಾಸಣೆ ಮಾಡಿದರು.

ಕಾರವಾರ: ಕರಾವಳಿ ಕಾವಲು ಪಡೆ ಪೊಲೀಸರು ಎರಡು ಕಡೆ ಬಾಂಬ್ ಪತ್ತೆ ಮಾಡಿ ಶಂಕಿತ ಉಗ್ರರನ್ನು ಬಂಧಿಸಿ ಅವರ ಬಳಿ ಇದ್ದ ಬಾಂಬ್­ಗಳನ್ನು ವಶಪಡಿಸಿಕೊಂಡಿದ್ದಾರೆ.ಭಯಭೀತರಾಗಬೇಡಿ. ಇದು ನಿಜವಲ್ಲ. ಕರಾವಳಿ ತಾಲೂಕಿನಲ್ಲಿ ಬುಧವಾರ ನಡೆದ ಸಾಗರ ಕವಚ ಅಣಕು ಕಾರ್ಯಾಚರಣೆಯಾಗಿದೆ. ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸುವ ಹಾಗೂ ಪರಿಶೀಲಿಸುವ ನಿಟ್ಟಿನಲ್ಲಿ ವಿವಿಧ ಭದ್ರತಾ ಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತವೆ. ಗುರುವಾರವೂ ಈ ಅಣಕು ಕಾರ್ಯಾಚರಣೆ ನಡೆಯಲಿದೆ.ಸಾಗರ ಕವಚ ಅಣಕು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕರಾವಳಿಯ ಉದ್ದಗಲಕ್ಕೂ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ರಾಷ್ಟ್ರೀಯ ಹೆದ್ದಾರಿ­ ೬೬ರ ಅಲ್ಲಲ್ಲಿ ತಾತ್ಕಾಲಿಕ ನಾಕಾ­ಬಂಧಿಗಳನ್ನು ನಿರ್ಮಿಸಿ, ವಾಹನಗಳನ್ನು ತಪಾಸಣೆ ಮಾಡಿದರು. ಕಡಲಿನಲ್ಲಿ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ಗಸ್ತು ತಿರು­ಗಿದರು. ಈ ವೇಳೆ ಕರಾವಳಿ ಪಡೆಗೆ ತಾಲೂಕಿನ ಮಾಜಾಳಿ, ನಗರದ ಕಾಳಿ ನದಿ ಬಳಿ ನಕಲಿ ಬಾಂಬ್ ಸಿಕ್ಕಿದ್ದು, ೮ ಜನ ಬಾಂಬರ್‌ಗಳನ್ನು ಬಂಧಿಸಿದರು.ತಾಲೂಕಿನ ಅರಗಾದ ಕದಂಬ ನೌಕಾಸೇನೆ, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಹಾಗೂ ಜಿಲ್ಲಾ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದರಲ್ಲಿ ರೆಡ್ ಫೋರ್ಸ್ ಹಾಗೂ ಬ್ಲೂ ಫೋರ್ಸ್ ಎಂದು ಎರಡು ಗುಂಪುಗಳನ್ನು ಮಾಡಲಾಗುತ್ತದೆ. ರೆಡ್ ಫೋರ್ಸ್‌ನ ನೌಕಾನೆಲೆ ಸಿಬ್ಬಂದಿ ಮಾರುವೇಷದಲ್ಲಿ ಬಂದು ಬಾಂಬ್ ಮಾದರಿಯ ಪೆಟ್ಟಿಗೆಗಳನ್ನು ಆಯ್ದ ಸ್ಥಳಗಳಲ್ಲಿ ಇಡಬೇಕು. ಬ್ಲೂ ಫೋರ್ಸ್‌ನ ಸಿಬ್ಬಂದಿ ನಿಗದಿತ ಸ್ಥಳದಲ್ಲಿ ಇಡುವ ಮೊದಲೇ ಅದನ್ನು ಪತ್ತೆ ಮಾಡಬೇಕು. ಇದರಲ್ಲಿ ಪೊಲೀಸರು ವಿಫಲರಾದರೆ ಭದ್ರತೆ ಹೆಚ್ಚಿಸುವ ಕುರಿತು ಗಮನ ನೀಡಲಾಗುತ್ತದೆ. ಅಕ್ರಮವಾಗಿ ಕಟ್ಟಿಗೆ ಸಾಗಾಟ: ಆರೋಪಿ ಸಹಿತ ಕಟ್ಟಿಗೆ ವಶಕ್ಕೆ

ಮುಂಡಗೋಡ: ಮುಂಡಗೋಡ ಅರಣ್ಯ ವಲಯದ ಸನವಳ್ಳಿ ಗಸ್ತು ವ್ಯಾಪ್ತಿಯ ಬಪ್ಪಲಗುಂಡಿ ಅರಣ್ಯದಲ್ಲಿ ಅಕ್ರಮವಾಗಿ ೪ ಸಾಗವಾನಿ ಮರಗಳನ್ನು ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಿಗೆ ಸಮೇತ ಇಬ್ಬರನ್ನು ಮುಂಡಗೊಡ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.ಶಿಗ್ಗಾಂವಿ ತಾಲೂಕು ಬಸವನಕಟ್ಟಿ ಗ್ರಾಮದ ಬಸವರಾಜ ರುದ್ರಪ್ಪ ಆಡಿನವರ ಹಾಗೂ ಮಂಜುನಾಥ ಮುದುಕಪ್ಪ ತಿಗಡಿ ಬಂಧಿತ ಆರೋಪಿಗಳಾಗಿದ್ದು, ಮನೆಯಲ್ಲಿ ದಾಸ್ತಾನು ಮಾಡಲಾದ ಸುಮಾರು ₹೫೦ ಸಾವಿರ ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಭಾನು ಜಿ.ಪಿ., ಮುಂಡಗೋಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಹುಲಕೋಟಿ ಅವರ ಮಾರ್ಗದರ್ಶನಲ್ಲಿ ಮುಂಡಗೋಡ ವಲಯ ಅರಣ್ಯಾಧಿಕಾರಿ ವಾಗೀಶ ಬಾಚಿನಕೊಪ್ಪ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಂಕರ ಬಾಗೇವಾಡಿ, ಗಿರೀಶ ಕೋಳೆಕರ, ಸುನಿತಾ ಬಿ.ಎಂ. ಹಾಗೂ ಗಸ್ತು ಅರಣ್ಯ ಪಾಲಕರಾದ ರಾಜು ಪರೀಟ, ಮಲ್ಲಪ್ಪ ತುಳಜಣ್ಣವರ, ದೇವರಾಜ ಆಡಿನ್, ಶಿವಪ್ಪ ಬಿ. ಕಾರ್ಯಾಚರಣೆ ನಡೆಸಲಾಗಿದೆ.