ಕನ್ನಡಪ್ರಭ ವಾರ್ತೆ ಮಂಡ್ಯ

ತುಮಕೂರಿನಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಅಣಕು ವಿಜಯೋತ್ಸವದ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಭಾವಚಿತ್ರದ ಮಾಸ್ಕ್‌ನ್ನು ಮುಖಕ್ಕೆ ಧರಿಸಿಕೊಂಡು ತಮಟೆ ಬಾರಿಸುತ್ತಾ, ತಮಟೆ ಸದ್ದಿಗೆ ಹೆಜ್ಜೆ ಹಾಕುವ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೂಡಾ ನಿವೇಶನ ಹಗರಣದಲ್ಲಿ ನಿಯಮ ಉಲ್ಲಂಘಿಸಿ ಸಿಎಂ ಮತ್ತು ಕುಟುಂಬದವರಿಗೆ ನಿವೇಶನಗಳ ಹಂಚಿಕೆ, ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣ, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು, ಕೋಮು ಗಲಭೆಗಳು ಮತ್ತು ಧಾರ್ಮಿಕ ಸೂಕ್ಷ್ಮ ವಿಚಾರಗಳಲ್ಲಿ ಸರ್ಕಾರದ ಮೃದು ಧೋರಣೆ ಧಾರ್ಮಿಕ ಮೆರವಣಿಗೆ, ಕಾರ್ಯಕ್ರಮಗಳ ಮೇಲೆ ದಾಳಿ ಪ್ರಕರಣಗಳು ಸೇರಿದಂತೆ ಪ್ರತ್ಯೇಕತೆಯ ಕೂಗು ಮತ್ತು ಪಾಕಿಸ್ತಾನ ಪರ ಘೋಷಣೆಗಳು ವಿಧಾನಸಭೆಯಲ್ಲಿ ಮೊಳಗಿದಾಗ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ರಾಜ್ಯದ ಸಾಲದ ಹೊರೆ ೮ ಲಕ್ಷ ಕೋಟಿ ದಾಟಿದೆ. ೨೦೨೫-೨೬ ಬಜೆಟ್‌ನಲ್ಲಿ ಮತ್ತೆ ೧.೫೦ ಲಕ್ಷ ಕೋಟಿ ಸಾಲ ಎತ್ತುವ ಯೋಜನೆ. ಪ್ರತಿ ಕನ್ನಡಿಗನ ಮೇಲೆ ೧ ಲಕ್ಷಕ್ಕೂ ಹೆಚ್ಚು ಸಾಲದ ಹೊರೆ. ಕಾಂಗ್ರೆಸ್ ಸರ್ಕಾರದ ಈ ಸಾಧನೆಯನ್ನು ಕಂಡು ಸಂಭ್ರಮಪಡಬೇಕೇ ಎಂದು ಪ್ರಶ್ನಿಸಿದರು.


ಬಿಜೆಪಿ ನಗರಾಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ಆನಂದ್, ಗೊರವಾಲೆ ಶಿವಣ್ಣ, ಶಿವಕುಮಾರ್ ಆರಾಧ್ಯ, ನಾಗರಾಜು, ಶಿವಲಿಂಗಯ್ಯ, ಮಾದರಾಜೇ ಅರಸು, ಸಂತೋಷ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.