ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ತಮಿಳಿನಿಂದ ಕನ್ನಡ ಹುಟ್ಟಿತ್ತು ಎಂದಿರುವ ನಟ ಕಮಲ್ ಹಾಸನ್ ಅವರಿಗೆ ಕ್ರಿ.ಪೂ.450 ರಲ್ಲಿ ಕನ್ನಡ ಭಾಷೆ ಹೇಗೆ ಹುಟ್ಟಿತ್ತು ಎಂಬುದನ್ನು ಬಗ್ಗೆ ಸರಿಯಾದ ಮಾಹಿತಿ ಬೇಕಾದರೆ ಮಾಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಿ.ವಿ.ಗುಂಡಪ್ಪ ಕನ್ನಡ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ಉತ್ತರ ಸಿಗಲಿದೆ.ಏಕೆಂದರೆ ಇಲ್ಲಿನ ಸರ್ಕಾರಿ ಪದವಿ ಪೂರ್ವಕಾಲೇಜಿನ ಕನ್ನಡ ಮೇಷ್ಟ್ರು ಸಿ.ಬಿ.ವೀರಭದ್ರಚಾರಿ ಅವರು ಸತತ 3 ವರ್ಷದ ಶ್ರಮದಿಂದ ಸಿದ್ಧಪಡಿಸಿರುವ ಕನ್ನಡ ಭಾಷಾ ಭಂಡಾರ ವಾಗಿರುವ ಡಿ.ವಿ.ಜಿ.ಕನ್ನಡ ಸಂಪನ್ಮೂಲ ಕೇಂದ್ರದಲ್ಲಿ ಸಂಗ್ರಹಿಸಿರುವ ಕನ್ನಡದ ಸಂಪನ್ಮೂಲಗಳನ್ನು ವೀಕ್ಷಿಸಿದರೆ ಸಾಕು ನಮ್ಮ ಭಾಷೆ ಹಾಗೂ ಕನ್ನಡ ಭಾಷ ಸಾಧಕರ ಬಗ್ಗೆ ಹೆಮ್ಮೆ ಎನಿಸುತ್ತದೆ. ನೂರಾರು ಸಾಧಕರ ಫೋಟೋ
ಕನ್ನಡ ಹುಟ್ಟಿದ್ದ ಕ್ರಿ.ಪೂ ೪೫೦ದಿಂದ ಇಂದಿನ ಕಾಲಘಟ್ಟದ ವರೆಗೆ ಕನ್ನಡ ಭಾಷೆ ಬೆಳವಣಿಗೆ ಬಗ್ಗೆ, ಕನ್ನಡ ಬೆಳವಣಿಗೆಯನ್ನು ಶ್ರೀಮಂತಗೊಳಿಸಿದ ನೂರಾರು ಸಾಧಕರ ಪೋಟೋ ಜೂತೆಯಲ್ಲಿ ಅವರ ಸಾಧನೆಯನ್ನು ವಿವರವಾಗಿ ಪ್ರಸ್ತುತಗೊಳಿಸಲಾಗಿದೆ.ದ್ರಾವಿಡ ಭಾಷಾ ಪರಂಪರೆಯಲ್ಲಿ ಕ್ರಿ.ಪೂ.೪೫೦ ರಲ್ಲಿ ರಾಜವಂಶಸ್ಥರ ಕಾಲದಲ್ಲಿ ಹುಟ್ಟಿದ ಕನ್ನಡವು ಹೇಗೆ ಮೌರ್ಯ, ಕಳಿಂಗ, ಆಂಧ್ರ, ಕದಂಬ, ಗುಪ್ತ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ನೊಳಂಬ, ಹೂಯ್ಸಳ, ವಿಜಯನಗರ, ಪಾಳೇಗಾರ ಹಾಗೂ ಮೈಸೂರು ರಾಜ ವಂಶಸ್ಥರ ಕಾಲದವರೆಗೆ ಕನ್ನಡ ಲಿಪಿ ಹಂತಹಂತವಾಗಿ ಸುಧಾರಣೆಯಾಗಿರುವುದನ್ನು ಪಟದ ಮೂಲಕ ತೋರಿಸಲಾಗಿದೆ.
ಗೋವಿಂದ ಪೈ ಬರೆದ ಹಸ್ತಪ್ರತಿತಾಯೇ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇ ಬರೆದಿದ್ದ ಗೋವಿಂದ ಪೈ ಅವರ ಹಸ್ತಪ್ರತಿ ಇಲ್ಲಿದೆ. ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನದ ಪ್ರತಿ ಸಹ ಇಲ್ಲಿದೆ. ಈ ಬಗ್ಗೆ ವಿವರಣೆ ನೀಡಿರುವ ಕನ್ನಡ ಭಂಡಾರದ ಕರ್ತೃ ಕನ್ನಡ ಮೇಸ್ಟ್ರು ಸಿ.ಬಿ.ವಿ. ಅವರು ಪ್ರಾಚೀನ ಕಾಲದಲ್ಲಿ ಭಾಷೆಯ ಲಿಪಿಗಳನ್ನು ಕಲ್ಲಿನಲ್ಲಿ ಕೆತ್ತುತ್ತಿದ್ದರಿಂದ ಲಿಪಿಗಳು ಒಂದು ಅಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ೫ ನೇ ಶತಮಾನದಲ್ಲಿ ಕನ್ನಡದ ಪ್ರಥಮ ಶಾಸಕ ಹಲ್ಮಿಡಿ ಶಾಸನ ಬಂದಿದ್ದರೂ ಕನ್ನಡ ಭಾಷೆ ಪ್ರವರ್ಧಮಾನವಾಗಿದ್ದು ೯ ನೇ ಶತಮಾನದಲ್ಲಿ ಎನ್ನುತ್ತಾರೆ. ವಿದ್ಯಾರ್ಥಿಗಳು ಭೇಟಿ ನೀಡಲಿ
ಉಪ ಪ್ರಾಂಶುಪಾಲ ರಾಮಕೃಷ್ಣ ಅವರ ನೀಡಿದ ಅವಕಾಶದಿಂದಾಗಿ ಈ ಭವ್ಯ ಕನ್ನಡ ಭಂಡಾರ ತೆರೆಯಲು ಸಾಧ್ಯವಾಗಿದ್ದು,ಈ ಶ್ರಮಕ್ಕೆ ಸಾರ್ಥಕತೆ ಸಿಗಬೇಕಾದರೆ ನಮ್ಮ ಶಾಲೆ ಅಲ್ಲದೇ ಹೊರಗಡೆಯ ಶಾಲೆಗಳ ವಿದ್ಯಾರ್ಥಿಗಳು ಭೇಟಿ ನೀಡಿ ಜ್ಞಾನಾರ್ಜನೆ ಮಾಡಬೇಕು ಎನ್ನುತ್ತಾರೆ.ಮೇಷ್ಟ್ರು ಸಿಬಿವಿ ಅವರ ಸಾಧನೆಯನ್ನುಕೊಂಡಾಡುವ ಉಪ ಪ್ರಾಂಶುಪಾಲ ರಾಮಕೃಷ್ಣ ಅವರು ಉನ್ನತ ವ್ಯಾಸಂಗದ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಒಮ್ಮೆ ಈ ವಿದ್ಯ ಭಂಡಾರಕ್ಕೆ ಭೇಟಿ ನೀಡಿದರೆ ಸಾಕು ಪರೀಕ್ಷೆಯಲ್ಲಿ ಸುಲಭವಾಗಿ ೨೦ ಅಂಕ ಪಡೆಯಬಹುದು ಎನ್ನುತ್ತಾರೆ.