ಮಿತ ಆಹಾರ ಆರೋಗ್ಯಕ್ಕೆ ಸಹಕಾರಿ: ಮಂಜುನಾಥ್

| Published : Sep 20 2025, 01:02 AM IST

ಸಾರಾಂಶ

ಕೋಪಟ್ಟಿ ಸಮೀಪದ ಚೆರಂಡೇಟಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಿತವಾದ ಆಹಾರ ಸೇವನೆ, ಆರೋಗ್ಯಕರ ಚಟುವಟಿಕೆಯಿಂದ ಮಾತ್ರ ಆರೋಗ್ಯ ಸುಧಾರಣೆ ಸಾಧ್ಯ ಎಂದು ಆಹಾರ ಸುರಕ್ಷತಾ ಸಹಾಯಕ ಅಧಿಕಾರಿ ಮಂಜುನಾಥ್ ಹೇಳಿದರು.

ಕೋಪಟ್ಟಿ ಸಮೀಪದ ಚೆರಂಡೇಟಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನ ಅಡಿಯಲ್ಲಿ ಅರಿವು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸಮತೋಲನ ಆಹಾರದ ಕುರಿತು ಕಾರ್ಯಕ್ರಮಕ್ಕೆ ಸೀಮಿತವಾಗದೆ, ಪ್ರತಿದಿನದ ಬದುಕಿನ ಭಾಗವಾಗಬೇಕು ಎಂದರು.ಮಡಿಕೇರಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಮಾತನಾಡಿ, ಪ್ರತಿದಿನದ ಆಹಾರದಲ್ಲಿ ಸಮತೋಲನ ಆಹಾರ ಸೇವನೆ ಅಗತ್ಯವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸಿಗುವ ಹಸಿರು ಸೊಪ್ಪು, ತರಕಾರಿ, ಕಾಳು, ಹಾಲು, ಮೊಟ್ಟೆ ಹೆಚ್ಚು ಹೆಚ್ಚು ಸೇವಿಸಬೇಕು. ಉದಾಸೀನ ಮಾಡಿದರೆ ಹಲವಾರು ಕಾಯಿಲೆಗಳಿಗೆ ನಾವೇ ಆಸ್ಪದ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.ಸರ್ಕಾರ ಹಲವಾರು ಯೋಜನೆಗಳ ಮೂಲಕ ಗರ್ಭಿಣಿಯರು, ಮಕ್ಕಳಿಗೆ ಮತ್ತು ರೋಗಿಗಳಿಗೆ ಸೌಲಭ್ಯ ನೀಡುತ್ತಿದ್ದರೂ ಇನ್ನೂ ರಕ್ತಹೀನತೆಯಿಂದ ಸಾವುಗಳು ಸಂಭವಿಸುತ್ತಿರುವುದು ಬೇಸರ ಎಂದರು.ಆಹಾರ ಪದ್ಧತಿ, ಜೀವನ ಶೈಲಿಯಲ್ಲಿ ಬದಲಾವಣೆಯಿಂದ ಸ್ವಸ್ಥ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಆ ನಿಟ್ಟಿನಲ್ಲಿ ಸರಳ ಬದುಕು, ಸರಳ ಜೀವನ ನಡೆಸಬೇಕು ಎಂದು ತಿಳಿಸಿದರು.ಬಾಲವಿಕಾಸ ಸಮಿತಿ ಅಧ್ಯಕ್ಷರಾದ ದಿವ್ಯಾ ಅಧ್ಯಕ್ಷತೆ ವಹಿಸಿದ್ದರು. ಗರ್ಭಿಣಿಯರಿಗೆ ಮಡಿಲು ತುಂಬಿ ಸೀಮಂತ ನೆರವೇರಿಸಲಾಯಿತು.ಅಂಗನವಾಡಿ ಕಾರ್ಯಕರ್ತೆ ಉಮಾಶ್ರೀ ಎಲ್ಲರನ್ನೂ ಸ್ವಾಗತಿಸಿದರು. ಜಿಲ್ಲಾ ಎಪಿಡಿಮಾಲಿಜಿಸ್ಟ್ ಕಿಶೋರ್, ಹೇಮಂತ್, ಆಶಾ ಕಾರ್ಯಕರ್ತೆ ಚಂದ್ರಾವತಿ, ಶಾಲಾ ಶಿಕ್ಷಕಿಯರಾದ ಪುಷ್ಪಾವತಿ ಮತ್ತು ಚೈತ್ರ ಹಾಗೂ ಮಹಿಳೆಯರು ಹಾಜರಿದ್ದರು.