ಸಾರಾಂಶ
ಕ್ಯಾನ್ಸರ್ ರೋಗ ಪ್ರಾಥಮಿಕ ಹಂತದಲ್ಲಿ ಗುರುತಿಸಿದರೆ ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು
ಕುಷ್ಟಗಿ: ಇತ್ತೀಚೆಗೆ ಅಭಿವೃದ್ಧಿ ಹೊಂದಿದಂತೆ ಜನರ ಜೀವನ ಶೈಲಿಯೂ ಬದಲಾಗುತ್ತಿದೆ. ನಾವು ಸೇವಿಸುವ ಆಹಾರದಲ್ಲಿ ವಿಷಯುಕ್ತ ಅಂಶಗಳು ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದು ಕ್ಯಾನ್ಸರ್ ಕಾಯಿಲೆಗೂ ಕಾರಣವಾಗುತ್ತಿದೆ ಎಂದು ಶಸ್ತ್ರಚಿಕಿತ್ಸಕ ಡಾ.ವಿ.ಎಸ್.ರೇಖಾ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇನ್ನರ್ ವಿಲ್ ಕ್ಲಬ್ ಹಾಗೂ ಕೊಪ್ಪಳದ ಕೆ.ಎಸ್. ಹಾಸ್ಪಿಟಲ್ ಸಹಯೋಗದಲ್ಲಿ ನಡೆದ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕ್ಯಾನ್ಸರ್ ರೋಗ ಪ್ರಾಥಮಿಕ ಹಂತದಲ್ಲಿ ಗುರುತಿಸಿದರೆ ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು, ಕ್ಯಾನ್ಸರ್ ಕುರಿತ ಇಂತಹ ಅರಿವಿನ ಜಾಗೃತಿ ಕಾರ್ಯಕ್ರಮ ಅವಶ್ಯಕವಾಗಿವೆ ಎಂದರು.
ಡಾ. ಪಾರ್ವತಿ ಪಳೋಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳ ಸೇವನೆ, ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸುವ ಅವಶ್ಯ ಇದೆ, ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ರಕ್ತನಾಳದ ಸಮಸ್ಯೆಮತ್ತು ಉಸಿರಾಟದ ಸಮಸ್ಯೆಗಳಂತಹ ಕಾಯಿಲೆಗಳು ಉದ್ಭವಿಸುತ್ತವೆ.ತಂಬಾಕು ಸೇವನೆಯಿಂದ ಆಗುವ ಸಮಸ್ಯೆಗಳ ಕುರಿತು ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಲು ಕಾಲೇಜುಗಳ ವೇದಿಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.ಕಾಲೇಜು ಪ್ರಾಚಾರ್ಯ ಡಾ. ಎಸ್.ವಿ.ಡಾಣಿ ಮಾತನಾಡಿ, ಯುವಕರು ಮದ್ಯಪಾನ ಧೂಮಪಾನದಿಂದ ದೂರವಿದ್ದು,ಆರೋಗ್ಯವಂತರಾಗಿ ಬದುಕು ನಡೆಸಲು ಮುಂದಾಗಿ ಸುಭದ್ರ ದೇಶ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಗಿರಿಜಾ ಮಾಲಿಪಾಟೀಲ, ಕಾರ್ಯದರ್ಶಿ ಶಾರದಾ ಚಟ್ಟೇರ ಸೇರಿದಂತೆ ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.