ಆಧುನಿಕ ಮಹಿಳೆಯರು ಜಗತ್ತನ್ನು ಆಳಬಲ್ಲರು

| Published : Mar 14 2024, 02:02 AM IST / Updated: Mar 14 2024, 02:03 AM IST

ಸಾರಾಂಶ

ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ಮಾಡಬೇಕು. ಆಧುನಿಕ ಆಹಾರ ಪದ್ಧತಿಯು ನಮ್ಮನ್ನು ರೋಗಿಗಳನ್ನಾಗಿ ಮಾಡುತ್ತಿದೆ

ಲಕ್ಷ್ಮೇಶ್ವರ: ಮಹಿಳೆಯರು ಪ್ರತಿಯೊಂದು ರಂಗದಲ್ಲಿ ತಮ್ಮ ಪ್ರೌಢಿಮೆ ತೋರುತ್ತಿದ್ದಾರೆ.‌‍ ಆಧುನಿಕ ಮಹಿಳೆ ಪುರುಷರಿಗೆ ಸರಿಸಮನಾಗಿ ನಿಲ್ಲಬಲ್ಲಳು ಎಂದು ರೈತ ಮಹಿಳೆ ಪ್ರಶಸ್ತಿ ಪುರಸ್ಕೃತ ರಾಜೇಶ್ವರಿ ಪಾಟೀಲ ಹೇಳಿದರು.

ಪಟ್ಟಣದ ದೇಸಾಯಿ ಬಣದ ವೀರಭದ್ರೇಶ್ವರ ಹೊಟೇಲ್ ಹತ್ತಿರ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಕೃತಿಮಾ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.

ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ಮಾಡಬೇಕು. ಆಧುನಿಕ ಆಹಾರ ಪದ್ಧತಿಯು ನಮ್ಮನ್ನು ರೋಗಿಗಳನ್ನಾಗಿ ಮಾಡುತ್ತಿದೆ. ರೈತ ಮಹಿಳೆಯರು ಸಾಕಷ್ಟು ಸಾಧನೆ ಮಾಡಿದ್ದಾರೆ ಎಂಬ ಸಂಗತಿ ನಿಜಕ್ಕೂ ಶ್ಲಾಘನೀಯ. ಮಹಿಳೆ ಮನಸ್ಸು ಮಾಡಿದಲ್ಲಿ ಎಂತಹ ಕಠಿಣ ಕಾರ್ಯ ಮಾಡಬಲ್ಲರು. ಕೃಷಿಯಲ್ಲಿ ಮಹಿಳೆ ಪುರುಷರಿಗೆ ಸರಿ ಸಮಾನವಾಗಿ ದುಡಿದು ಕೃಷಿಗೆ ತನ್ನದೆ ಆದ ಕೊಡುಗೆ ನೀಡಿದ್ದಾರೆ. ರೈತರು ಸಾಲದಲ್ಲಿ ಮುಳುಗಬಾರದು‌ ರೈತರು ದೇಶಕ್ಕೆ ಅನ್ನ ನೀಡುವ ಮೂಲಕ ದೇಶವಾಸಿಗಳ ಹಸಿವು ನೀಗಿಸುವ ಕಾರ್ಯ ಎಲ್ಲಕ್ಕಿಂತ ಮಿಗಿಲು ಎಂದು ಹೇಳಿದರು.

ಈ ವೇಳೆ ಸುಕೃತಿಮಾ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ಪ್ರಶಸ್ತಿ ವಿಜೇತ ಕುಸ್ತಿಪಟು ಜಯಶ್ರೀ ಗುಡಗುಂಟಿ ಮಾತನಾಡಿ, ನಿಮ್ಮ ಮಕ್ಕಳು ಕೇವಲ ಒಂದು ಬರಹದಲ್ಲಿ ಮುಂದೆ ಇದ್ದರೆ ಸಾಲದು ಕ್ರೀಡಾ ರಂಗದಲ್ಲಿ ಉತ್ತಮ ಸಾಧನೆ ಮಾಡುವಂತೆ ಬೆಳೆಸುವ ಮೂಲಕ ದೇಶಕ್ಕೆ ಆಸ್ತಿಯನ್ನಾಗಿ ಮಾಡಬೇಕು ಎಂದು ಹೇಳಿದರು.

ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಮುಕ್ತಿ ಮಂದಿರ ಧರ್ಮಕ್ಷೇತ್ರದ ಪೀಠಾಧಿಪತಿ ವಿಮಲ ರೇಣುಕ ವೀರಮುಕ್ತಿ ಮುನಿ ಶ್ರೀಗಳು ಆಶೀರ್ವಚನ ನೀಡಿದರು.

ಸಭೆಯಲ್ಲಿ ಬಿಇಓ ಮಂಗಳಾ ತಾಪಸ್ಕರ, ನ್ಯಾಯವಾದಿ ನಂದಾ ಅಮಾಸಿ ಪಂಚಮಸಾಲಿ ರಾಜ್ಯ ಉಪಾಧ್ಯಕ್ಷೆ ವಸಂತಾ ಹುಲ್ಲತ್ತಿ ಮಾತನಾಡಿದರು.

ಪುರ‌ಸಭೆ ಸದಸ್ಯೆ ಜಯಮ್ಮ ಅಂದಲಗಿ, ಸುನೀತಾ ಮಾಗಡಿ, ಸುಕೃತಿ ಮಾಗಡಿ ಹಾಗೂ ಮಂಜುನಾಥ ಮಾಗಡಿ ಇದ್ದರು. ಈ ವೇಳೆ ನಡೆದ ನನ್ನಮ್ಮ ಸೂಪರ್ ಸ್ಟಾರ್ ಸ್ಫರ್ಧೆ ಕಾರ್ಯಕ್ರಮಗಳಲ್ಲಿ ನೂರಾರು ಮಹಿಳೆಯರು ಉಪಸ್ಥಿತರಿದ್ದರು.