ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಕೊನೇ ಭಾಗದ ರೈತರ ಬೆಳೆಗಳಿಗೆ ನೀರಿನ ಬವಣೆ ತೀರಿಸಲು ನಾಲಾ ಆಧುನೀಕರಣ ಕಾಮಗಾರಿ ಕೈಗೆತ್ತಿ ಕೊಂಡು ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು ನಡೆಸುತ್ತಾ ಬಂದಿದ್ದೇನೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.ಸಮೀಪದ ಹೊನ್ನಾಯಕನಹಳ್ಳಿ ಗ್ರಾಮದ ಬಸವನಗೋರಿ ಬಳಿ ಕಾವೇರಿ ನೀರಾವರಿ ನಿಗಮದಿಂದ ಸುಮಾರು 35 ಕೋಟಿ ರು. ವೆಚ್ಚದಲ್ಲಿ ಮದ್ದೂರು ತಾಲೂಕಿನ ಹೆಬ್ಬಕವಾಡಿ ಮುಖ್ಯನಾಲೆ, ವಿತರಣಾ ನಾಲೆಗಳು ಹಾಗೂ ಪಿಕಪ್ ನಾಲೆಗಳ ಆಧುನೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪ್ರತಿ ಬೆಳೆಗೂ ಕೊನೇ ಭಾಗದ ರೈತರು ನೀರಿಗಾಗಿ ಪರಿತಪಿಸುತ್ತಾ ಹೋರಾಟ ನಡೆಸಿಕೊಂಡು ಬಂದಿದ್ದರು. ದಶಕಗಳಿಂದ ಕೊನೆಯ ಭಾಗದ ರೈತರಿಗೆ ನೀರು ಗಗನ ಕುಸುಮವಾಗಿತ್ತು. ಇದನ್ನು ಅರಿತು ಮುಖ್ಯ ನಾಲೆ ಸೇರಿದಂತೆ ವಿತರಣಾ ನಾಲಾ ಆಧುನೀಕರಣಗೊಳಿಸಿ ರೈತರ ಬೆಳೆಗಳಿಗೆ ಸರಗವಾಗಿ ನೀರು ಹರಿಸಲು ಕ್ರಮ ವಹಿಸಿದ್ದೇನೆ ಎಂದರು.ನಾಲೆಗಳಿಗೆ ಹರಿಸಿದಾಗ ನೀರು ಪೋಲಾಗಿ ಕೊನೆಯ ಭಾಗಕ್ಕೆ ನೀರು ಸಿಗದೆ ರೈತರು ಕಂಗಾಲಾಗಿದ್ದರು. ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ 35 ಕೋಟಿ ರು. ವೆಚ್ಚದಲ್ಲಿ ನಾಲೆಗಳ ಆಧುನೀಕರಣ, ವಿತರಣಾ ನಾಲೆಗಳು ಹಾಗೂ ಪಿಕಪ್ ನಾಲೆಗಳ ಅಭಿವೃದ್ಧಿಪಡಿಸಿ ಮುಂದೆ ತಾಲೂಕಿನ ರೈತರ ನೀರಾವರಿ ಸಮಸ್ಯೆಗಳು ಎದುರಾಗದಂತೆ ಕ್ರಮ ವಹಿಸಲಾಗುವುದು ಎಂದರು.
ಮುಟ್ಟನಹಳ್ಳಿ ಬಳಿ ಇರುವ ಸೂಳೆಕೆರೆಯನ್ನು 300 ಎಕರೆ ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಲಾಗುತ್ತಿದೆ. ಕೆರೆ ಹೂಳೆತ್ತುವ ಕಾರ್ಯ ಕೂಡ ಆರಂಭವಾಗಿದ್ದು ನಿತ್ಯ ಇಟಾಚಿ, ಜೆಸಿಬಿಗಳ ಮೂಲಕ ಹೂಳು ತೆಗೆಸಿ ನೂರಾರು ಲಾರಿಗಳ ಮೂಲಕ ಮಣ್ಣನ್ನು ಸಾಗಿಸಲಾಗುತ್ತಿದೆ. ಕೆರೆಗೆ ಹೆಚ್ಚುವರಿ ನೀರು ಸಂಗ್ರಹವಾಗುವಂತೆ ಮಾಡಲಾಗುತ್ತಿದೆ. ಈ ಭಾಗದ ರೈತರಿಗೆ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸಿ ಎರಡು ಬೆಳೆಗಳಿಗೆ ನೀರು ದೊರಕಿಸಲಾಗುವುದು ಎಂದು ಭರವಸೆ ನೀಡಿದರು.
ಮದ್ದೂರು ಕ್ಷೇತ್ರದ ರೈತರ ಸಮಗ್ರ ಕಲ್ಯಾಣಕ್ಕಾಗಿ ಹಾಗೂ ನೀರಾವರಿ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದಿಂದ ಕಾವೇರಿ ನೀರಾವರಿ ನಿಗಮಕ್ಕೆ 600 ಕೋಟಿ ರು.ಗೂ ಹೆಚ್ಚಿನ ಅನುದಾನ ತಂದಿದ್ದು, ಹೆಬ್ಬಕವಾಡಿ ನಾಲೆಗಳ ಅಭಿವೃದ್ಧಿಯಿಂದ ತಾಲೂಕಿನ ಸಬ್ಬನಹಳ್ಳಿಯಿಂದ ಎಸ್.ಐ ಹೊನ್ನಲಗೆರೆ ಗ್ರಾಮದ ಸುಮಾರು ಸಾವಿರಾರು ಎಕರೆ ಭೂಪ್ರದೇಶಗಳಿಗೆ ನೀರಿನ ಅನುಕೂಲ ದೊರೆಯಲಿದೆ ಎಂದರು.
ಕ್ಷೇತ್ರದ ಹಲವು ಗ್ರಾಮಗಳಲ್ಲಿ ಗ್ರಾಮ ಪರಿಮಿತಿ ರಸ್ತೆಗಳ ನಿರ್ಮಾಣಕ್ಕೆ ಸುಮಾರು 40 ಕೋಟಿ ರು.ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆಗಳನ್ನು ಅಭಿವೃದ್ಧಿಗೆ ಶೀಘ್ರ್ರದಲ್ಲಿ ಚಾಲನೆ ದೊರೆಯಲಿದೆ. ಉತ್ತಮ ರಸ್ತೆ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿಶೇಷ ಕಾಳಜಿ ವಹಿಸಿ ಮಂಡ್ಯ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದ್ದು ಅದರಲ್ಲಿ ವಿಶೇಷವಾಗಿ ಮದ್ದೂರು ತಾಲೂಕಿಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸ್ಟಾರ್ ಚಂದ್ರು, ಮದ್ದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಸವರಾಜು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಭಾರತೀನಗರ ಯುವ ಬ್ಲಾಕ್ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಭೂನ್ಯಾಯ ಮಂಡಳಿಯ ಸದಸ್ಯ ಮಹೇಂದ್ರ, ಕೆಡಿಪಿ ಸಮಿತಿಯ ಸದಸ್ಯರಾದ ಟಿ.ಬಿ.ಹಳ್ಳಿ ಅಭಿಷೇಕ, ರಾಜಣ್ಣ, ಕಾವೇರಿ ನೀರಾವರಿ ನಿಗಮದ ಎಇಇ ಪ್ರಶಾಂತ್, ಎಇ ಅವಿನಾಶ್ ಉಪಸ್ಥಿತರಿದ್ದರು.ಲೋಕಸಭೆಯಲ್ಲಿ ಸ್ಟಾರ್ ಚಂದ್ರು ಗೆಲ್ಲಿಸಬೇಕಿತ್ತುಕಳೆದ ಲೋಕಸಭೆ ಚುನಾವಣೆಯಲ್ಲಿ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಉದಾರವಾದ ಮನುಸ್ಸುಳ್ಳ ಸಮಾಜ ಸೇವಕ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿದ್ದರೆ ಮಂಡ್ಯ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುತ್ತಿತ್ತು. ಸ್ಥಳೀಯ ಜನಸಾಮಾನ್ಯರಿಗೆ ಸಿಗದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ. ಗೆದ್ದಂತವರು ಎಷ್ಟು ಜನರ ಸಮಸ್ಯೆಗಳಿಗೆ ಸ್ಪಂದಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮಾರ್ಮಿಕವಾಗಿ ನುಡಿದರು.