ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ರೈತರ ಸಮಸ್ಯೆಗಳನ್ನು ಅರಿತು ಸಮರ್ಪಕವಾಗಿ ನೀರು ಜಮೀನುಗಳಿಗೆ ತಲುಪುವಂತೆ ಮಾಡಲು ನಾಲಾ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಸಮೀಪದ ಅಣ್ಣೂರು, ಮೆಣಸಗೆರೆ, ಬೊಪ್ಪಸಮುದ್ರ, ಹೊನ್ನಾಯಕನಹಳ್ಳಿ, ಪುಟ್ಟೇಗೌಡನದೊಡ್ಡಿ, ಹೆಬ್ಬಕವಾಡಿ ಶಾಖಾ ನಾಲೆಯ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ನಂತರ ರೈತರೊಂದಿಗೆ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿ ಮಾಹಿತಿ ನೀಡಿದರು.

ನಾನು ಕೂಡ ರೈತನ ಮಗ. ರೈತರ ಸಮಸ್ಯೆಗಳು, ಕಷ್ಟಗಳು ನನಗೂ ತಿಳಿದಿದೆ. ಈ ಹಿಂದೆ ರೈತರ ಜಮೀನುಗಳಿಗೆ ನೀರು ಸರಿಯಾಗಿ ಹರಿಯದೆ ಸಾಕಷ್ಟು ತೊಂದರೆ, ನಷ್ಟ ಅನುಭವಿಸುತ್ತಿದ್ದರು. ಇದನ್ನು ತಿಳಿದು ನೀರಿನ ಸಮಸ್ಯೆ ನಿವಾರಿಸಲು, ಕೊನೆ ಭಾಗದ ಜಮೀನುಗಳಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡಲು ನಾಲಾ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಸರ್ಕಾರದಿಂದ ಸಾವಿರಾರು ಕೋಟಿ ರು. ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದೇನೆ. ನಾಲಾ ಕಾಮಗಾರಿಗೂ ಚಾಲನೆ ನೀಡಲಾಗಿದೆ. ರೈತರು ಯಾವುದೇ ರಾಜಕೀಯ ಮಾಡದೆ, ವಿರೋಧಿಗಳ ಮಾತಿಗೆ ಕಿವಿಗೊಡದೆ ಅಭಿವೃದ್ಧಿಗೆ ಕೈಗೂಡಿಸಬೇಕು ಎಂದು ಮನವಿ ಮಾಡಿದರು.


ಇನ್ನೂ ಮೂರು ತಿಂಗಳಲ್ಲಿ ಕಾಮಗಾರಿ ಸಂಪೂರ್ಣ ಮುಗಿಯಲಿದೆ. ಇದರಿಂದ ಈ ಭಾಗದ ಹಲವು ಹಳ್ಳಿಗಳ ಸುಮಾರು 6500 ಎಕರೆ ಜಮೀನುಗಳಿಗೆ ನೀರು ಸರಾಗವಾಗಿ ಹರಿಯಲಿದೆ. ಬೆಳೆಗಳನ್ನು ಬೆಳೆಯಲು, ಜೊತೆಗೆ ಅಂತರ್ಜಲ ವೃದ್ಧಿಯಾಗಿ ಬೋರ್ ವೆಲ್ ಗಳಲ್ಲಿ ನೀರು ಬಂದು ರೈತರಿಗೆ ಮತ್ತಷ್ಟು ಅನೂಕೂಲವಾಗಲಿದೆ ಎಂದರು.

ತಾಲೂಕಿಗೆ ಬೇಕಾದ ಯೋಜನೆಗಳನ್ನು ತರಲು ತೀರಾ ಸೌಮ್ಯ ಸ್ವಭಾವ ಸಲ್ಲದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನನಗೆ ನೇರವಾಗಿ ಮಾತನಾಡಿ ಅಭ್ಯಾಸ. ಯಾರನ್ನು ಮೆಚ್ಚಲು ನಾನು ಇಲ್ಲಿಗೆ ಬಂದು ಕೆಲಸ ಮಾಡುವುದಿಲ್ಲ. ನಾನು ಮಾಡುವ ಅಭಿವೃದ್ಧಿ ಕೆಲಸವನ್ನು ಕ್ಷೇತ್ರದ ಜನರು ಒಪ್ಪಿದರೆ ಸಾಕು ಎಂದರು.

ನಾಲಾ ಆಧುನೀಕರಣದ ವೇಳೆ ನೀರಿಲ್ಲದೆ ರೈತರಿಗೆ ನಷ್ಟವಾಗಿದ್ದರೆ ಅದನ್ನು ರೈತರು ಒಂದೆರಡು ಬೆಳೆಗಳನ್ನು ಬೆಳೆದು ಸಂಪಾದನೆ ಮಾಡಿಕೊಳ್ಳಬಹುದು. ಸಂಪೂರ್ಣ ನಾಲೆಗಳು ಅಭಿವೃದ್ಧಿಗೊಂಡರೆ ಕೆಆರ್ ಎಸ್ ಜಲಾಶಯದಿಂದ 24 ಗಂಟೆಯಲ್ಲಿಯೇ ನೀರು ರೈತರ ಹೊಲ ಗದ್ದೆಗಳಿಗೆ ಸೇರಲಿದೆ ಎಂದರು.

ಹೆಚ್ಚುವರಿ ಕೆಲಸವಿದ್ದರೂ ಕೂಡ ಅವುಗಳನ್ನು ಸೇರಿಸಿಕೊಂಡು ರೈತರ ಗದ್ದೆಗೆ ತೆರಳುವ ರಸ್ತೆಗಳನ್ನು ಮಾಡುವಂತೆ ಗುತ್ತಿಗೆದಾರರಿಗೆ ಹೇಳಲಾಗಿದೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವವರಿಗೆ ರೈತರೇ ತಕ್ಕ ಉತ್ತರ ನೀಡಬೇಕು ಶಾಸಕರು ಸೂಚಿಸಿದರು.

ಈ ವೇಳೆ ಮದ್ದೂರು ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಬಸವರಾಜ್, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎ.ಎಸ್.ರಾಜೀವ್, ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ಎಲ್.ಪ್ರಶಾಂತ್, ಸಹಾಯಕ ಎಂಜಿನಿಯರ್ ಅವಿನಾಶ್ ಸೇರಿದಂತೆ ಹಲವರು ಇದ್ದರು.