ಮೋದಿ ದ್ವೇಷ ಭಾಷಣ; ಚುನಾವಣಾ ಆಯೋಗ ಮೌನ ಯಾಕೆ: ಪ್ರಿಯಾಂಕ್‌ ಖರ್ಗೆ

| Published : Apr 25 2024, 01:03 AM IST

ಮೋದಿ ದ್ವೇಷ ಭಾಷಣ; ಚುನಾವಣಾ ಆಯೋಗ ಮೌನ ಯಾಕೆ: ಪ್ರಿಯಾಂಕ್‌ ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ಹಂತದ ಮತದಾನದ ನಂತರ ಪ್ರಧಾನಿ ಮತ ಬೇಟೆ ನಿರೀಕ್ಷೆ ಹುಸಿ ಹೋಗಿದೆ, ಹೀಗಾಗಿ ಅವರ ಮಾತಿನ ಶೈಲಿಯೇ ಬದಲಾಗಿ ದ್ವೇಷ, ಅಸೂಯೆ, ಕೋಮು ಭಾವನೆ ಕೆರಳಿಸುವಂತಹ ಮಾತುಗಳ್ದೆ ಹೊರಬರುತ್ತಿವೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಮತ ಬಂದಿಲ್ಲ ಎಂದು ಮನವರಿಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತಲ್ಲಿ ದ್ವೇಷ, ಅಸೂಯೆಗಳ ಮಾತುಗಳನ್ನಾಡುತ್ತ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದಾರೆಂದು ದೂರಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಪ್ರಧಾನಿ ಮಾತೆತ್ತಿದರೆ ದ್ವೇಷ ಕಾರುತ್ತಿದ್ದರೂ ಕೂಡಾ ಭಾರತೀಯ ಚುನಾವಣಾ ಆಯೋಗ ಇದನ್ನೆಲ್ಲ ಗಮನಿಸಿ ಕ್ರಮಕ್ಕೆ ಮುಂದಾಗುತ್ತಿಲ್ಲ, ಹೀಗಾಗಿ ಆಯೋಗ ನಿದ್ರೆಯಲ್ಲಿದೆಯೋ, ಸತ್ತೇ ಹೋಗಿದೆಯೋ ಎಂಬ ಶಂಕೆ ಕಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಲಬುರಗಿ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ಮತದಾನದ ನಂತರ ಪ್ರಧಾನಿ ಮತ ಬೇಟೆ ನಿರೀಕ್ಷೆ ಹುಸಿ ಹೋಗಿದೆ, ಹೀಗಾಗಿ ಅವರ ಮಾತಿನ ಶೈಲಿಯೇ ಬದಲಾಗಿ ದ್ವೇಷ, ಅಸೂಯೆ, ಕೋಮು ಭಾವನೆ ಕೆರಳಿಸುವಂತಹ ಮಾತುಗಳ್ದೆ ಹೊರಬರುತ್ತಿವೆ. ಆದರೂ ಕೂಡಾ‌ ಚುನಾವಣಾ ಆಯೋಗ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಕಳೆದ ಮೂರು ದಿನಗಳ ಹಿಂದೆ ರಾಜಸ್ತಾನದಲ್ಲಿ ಚುನಾವಣೆ ಭಾಷಣ ಮಾಡಿದ ಮೋದಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಲಸೂತ್ರ ಕಿತ್ತು ಮುಸ್ಲಿಮರ ಕೈಗೆ ಕೊಡುತ್ತದೆ ಎಂದು ಹೇಳಿದ್ದಾರೆ. ಅವರ ಹೇಳಿಕೆಗಳಲ್ಲಿ ಹತಾಶ ಬಾವ ಅಡಗಿದೆ. ಇಂತಹ ಹೇಳಿಕೆಗಳು ಪ್ರಧಾನಿ ಹುದ್ದೆಯ ಘನತೆಗೆ ತಕ್ಕುದಲ್ಲ, ಆರ್‌ಎಸ್‌ಎಸ್‌ ಕಾರ್ಯಕರ್ತನಂತೆ ಹೇಳಿಕೆ ನೀಡುತ್ತಿರೋದು ಸರಿಯಲ್ಲವೆಂದರು.

ಮೋದಿಯವರ ಹೇಳಿಕೆ ಬಂದು ಮೂರು ದಿನವಾಗಿ ಕನಿಷ್ಠ 20 ಸಾವಿರ ಜನರು ಸಹಿ ಹಾಕಿರುವ ದೂರನ್ನು ಸಲ್ಲಿಸಲಾಗಿದೆ. ಕಾಂಗ್ರೆಸ್ ನಾಯಕರ ಮೇಲೆ ತಕ್ಷಣವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಚುನಾವಣಾ ಆಯೋಗ ಈಗ ನಿದ್ದೆ ಮಾಡುತ್ತಿದೆಯಾ? ಅಥವಾ ಸತ್ತಿದೆಯಾ? ಸಂವಿಧಾನ ಬದ್ಧ ಸ್ವಾಯತ್ತ ಸಂಸ್ಥೆಯಾದ ಆಯೋಗ ಈ ವಿಚಾರದಲ್ಲಿ ಸುಮ್ಮನಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಧೋರಣೆ ಅನುಸರಿಸುತ್ತಿರುವುದು ನೋಡಿದರೆ ಆಯೋಗವೂ ಕೂಡಾ ಬಿಜೆಪಿ ಮುಂಚೂಣಿ ಘಟಕ ದಂತೆ ಕಾಣುತ್ತಿದೆ ಹಾಗಾಗಿ ಅದು ತನ್ನ ಬೋರ್ಡ್ ಬದಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತ್ರಿವಳಿ ತಲಾಖ್, ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿ ರದ್ದು ಮಾಡಿದ ನಂತರದ ‌ಮುಸ್ಲಿಮರು ಸ್ವಾಭಿಮಾನಿಗಳಾಗಿ ಜೀವಿಸುವಂತೆ ಮಾಡಿರುವುದಾಗಿ ಹೇಳಿದ್ದರು. ಆದರೆ, ಮೊದಲ ಹಂತದ ಚುನಾವಣೆಯ ನಂತರ ಮುಸ್ಲಿಮರ ಕುರಿತಂತೆ ಹೇಳಿಕೆ ನೀಡುತ್ತಿದ್ದಾರೆ. ಎಸ್‌ಸಿ‌ ಹಾಗೂ ಎಸ್‌ಟಿಗಳ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ಹಂಚುವ ಪ್ರಯತ್ನ ನಡೆದಿತ್ತು ಎಂದು ಹೇಳಿದ್ದಾರೆ. ಇದು ಮೋದಿ ಅವರು ಹತಾಶೆಯನ್ನು ತೋರಿಸುತ್ತದೆ ಎಂದು ಹರಿಹಾಯ್ದರು.

ರಾಜಸ್ತಾನದಲ್ಲಿ ರಾಮನ ಹೆಸರಿನಲ್ಲಿ ಮತ ಕೇಳುತ್ತಾರೆ. ಹನುಮಾನ್ ಚಾಲೀಸ್ ಹೇಳಿದರೆ ಹಲ್ಲೆ ಮಾಡಲಾಗುತ್ತದೆ ಎಂದು ಪ್ರಚಾರ ಭಾಷಣದಲ್ಲಿ ಹೇಳುತ್ತಾರೆ. ಸ್ವತಃ ಬಿಜೆಪಿಯ ಶಾಸಕ ಗರುಡಾಚಾರ್ ಈ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಎಫ್ ಐ ಆರ್ ನಲ್ಲಿಯೂ ಉಲ್ಲೇಖಿಸಿಲ್ಲ. ಆದರೂ ಕೂಡಾ ರಾಜ್ಯದ ಮರ್ಯಾದೆ ಹಾಳು ಮಾಡುವ ಹೇಳಿಕೆಯನ್ನು ಮೋದಿ ನೀಡಿದ್ದಾರೆ. ಇತ್ತೀಚಿಗೆ ನಾಗಪುರಕ್ಕೆ ಭೇಟಿ ನೀಡಿದ ನಂತರ ಮೋದಿ ವರಸೆ ಬದಲಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಎಲ್ಲರ ಆಸ್ತಿಯನ್ನು ಆತಂಕವಾದಿಗಳಿಗೆ ಹಾಗೂ ಹೆಚ್ಚು ಮಕ್ಕಳು ಇದ್ದವರಿಗೆ ಹಂಚುತ್ತಾರೆ ಎಂದು ಹೇಳುತ್ತಾರೆ. ಬಿಜೆಪಿಯವರಿಗೆ ಅರಿವಿದೆಯಾ? ಸಂವಿಧಾನದಲ್ಲಿ‌ ಇದು ಸಾಧ್ಯವೇ? ಎಂದು ಪ್ರಶ್ನಿಸಿದ ಸಚಿವರು ಬಿಜೆಪಿಯವರಿಗೆ ಭಾಷಣ ಮಾಡಲು ವಿಷಯಗಳೇ ಇಲ್ಲ. ಭಯೋತ್ಪಾದನೆ, ಮೊಘಲ್, ರಾಮಮಂದಿರ, ಹನುಮಾನ ಚಾಲೀಸ್, ರಾಹುಲ್ ಗಾಂಧಿ ಹಾಗೂ ಖರ್ಗೆ ಬಿಟ್ಟರೇ ಬೇರೆ ವಿಚಾರಗಳೇ ಇಲ್ಲ ಎಂದು ಕಿಡಿಕಾರಿದರು.

ಸಂಸದ ಉಮೇಶ ಜಾಧವ್ ತಮನ್ನು ಸ್ಪೆಷಲ್ ಬೇಬಿ ಎಂದು ಕರೆಯುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಹೌದು ನಾನು ಸ್ಪೆಷಲ್ ಬೇಬಿನೆ. ಏನೀಗ? ಅವರಿಗೆ ಏನು ಸಮಸ್ಯೆ. ನಾನು‌ ಎನ್ ಎಸ್ ಐ‌ಯು‌ ನಲ್ಲಿದ್ದಾಗ ಹೋರಾಟ ಮಾಡಿಕೊಂಡೇ ರಾಜಕೀಯಕ್ಕೆ ಬಂದವನು. ಕಲಬುರಗಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೈಬಿಟ್ಟಾಗ ನಾನು ಹೋರಾಟ ಮಾಡಿದ್ದೇನೆ. ಜಾಧವ್ ಅಂತಹ ಯಾವುದಾದರೂ ಹೋರಾಟ ಮಾಡಿ ರಾಜಕೀಯಕ್ಕೆ ಬಂದಿದ್ದಾರ? ನೇರವಾಗಿ ಟಿಕೆಟ್‌ ತೆಗೆದುಕೊಂಡು‌ ಚುನಾವಣೆ ಎದುರಿಸಿದ್ದಾರೆ ಎಂದು‌ ಕಿಚಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎರಡು ಚೊಂಬುಗಳನ್ನು ಪ್ರದರ್ಶಿಸಿ ಉಮೇಶ್ ಜಾಧವ ಇವುಗಳನ್ನೇ ಕಲಬುರಗಿಗೆ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಕಳೆದ 10 ವರ್ಷದ ಹಾಗೂ ಡಾ. ಜಾಧವ್‌ 5 ವರ್ಷದ ಸಾಧೆಗಳೇ ಈ ಚೊಂಬುಗಳೆಂದು ಗೇಲಿ ಮಾಡಿದರು.

ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ, ರಾಜಗೋಪಾಲ ರೆಡ್ಡಿ, ಡಾ ಕಿರಣ್ ದೇಶಮುಖ್, ಪ್ರವೀಣ್ ಹರವಾಳ, ಶಿವಕುಮಾರ ಹೊನಗುಂಟಿ, ಡೆವಿಡ್ಈ ಸಿಮೆಯೋನ್‌, ಈರಣ್ಣ ಝಳಕಿ ಇದ್ದರು.