ಕನ್ನಡಪ್ರಭ ವಾರ್ತೆ ಹಿರಿಯೂರು
ಹಿರಿಯೂರು ಬಿಜೆಪಿ ಮಂಡಲದ ವತಿಯಿಂದ ತಾಲೂಕಿನ ವಿವಿ ಪುರದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಬಿಜೆಪಿ ಜಿಲ್ಲಾ ಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಪ್ರಶಿಕ್ಷಣ ಕಾರ್ಯಕ್ರಮದ ಉದ್ದೇಶ ವ್ಯಕ್ತಿ ನಿರ್ಮಾಣ ಮಾಡಿ ಆ ವ್ಯಕ್ತಿಗಳಿಂದ ರಾಷ್ಟ್ರ ನಿರ್ಮಾಣ ಮಾಡುವುದಾಗಿದೆ.
ದೇಶಭಕ್ತಿ ಮೂಡಿಸುವ ಈ ಕಾರ್ಯಕ್ರಮವನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಯರು ಪ್ರಾರಂಭ ಮಾಡಿದ್ದು ಬಿಜೆಪಿ ಪಕ್ಷವು ನಿರಂತರವಾಗಿ ಪ್ರಶಿಕ್ಷಣ ವರ್ಗಗಳನ್ನು ನಡೆಸುತ್ತಾ ಬಂದಿದೆ. 2047ರ ಹೊತ್ತಿಗೆ ಭಾರತವನ್ನು ವಿಕಸಿತ ಭಾರತ ಮಾಡುವ ಸಂಕಲ್ಪ ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವನ್ನು ನಾವೆಲ್ಲರೂ ಶ್ರಮಿಸಿ ಸಾಕಾರಗೊಳಿಸಬೇಕಿದೆ ಎಂದರು.ಬಿಜೆಪಿ ಹಿರಿಯ ಮುಖಂಡ ಲಕ್ಷ್ಮಿಕಾಂತ್ ಮಾತನಾಡಿ, ಪಕ್ಷದ ಎಲ್ಲಾ ಕಾರ್ಯಕರ್ತರು ಸಂಘಟಿತರಾಗಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವತ್ತ ಹೆಜ್ಜೆ ಇಡಬೇಕಾಗಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಗೆಲುವು ಕಾಣಲು ಈಗಿನಿಂದಲೇ ಎಲ್ಲರೂ ಕೆಲಸ ಮಾಡುತ್ತಾ ಹೋಗಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಮಾತನಾಡಿ, ಈ ಪ್ರಶಿಕ್ಷಣ ವರ್ಗವು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಹ ಪ್ರಭಾರಿ ಎ.ಮುರಳಿ, ಪ್ರಶಿಕ್ಷಣ ಮಹಾಭಿಯಾನದ ಜಿಲ್ಲಾ ಸಂಯೋಜಕರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಚ್.ಮೋಹನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಮಾಧುರಿ ಗಿರೀಶ್, ವೆಂಕಟೇಶ್ ಯಾದವ್, ಅಭಿಯಾನದ ಸಹ ಸಂಯೋಜಕರಾದ ನಿತಿನ್, ಯೋಗೀಶ್ ಸೇರಿದಂತೆ ಮಂಡಲದ ಬೂತ್ ಅಧ್ಯಕ್ಷರು, ಬಿಎಲ್‌ಎಗಳು, ಕಾರ್ಯಕರ್ತರು ಹಾಗೂ ಜಿಲ್ಲಾ ಮಟ್ಟದ ಮುಖಂಡರು ಉಪಸ್ಥಿತರಿದ್ದರು.