ಬರ ಪರಿಹಾರ ಬಗ್ಗೆ ಮೋದಿ, ಶಾ ಸುಳ್ಳು: ಸಿದ್ದು

| Published : Apr 08 2024, 01:03 AM IST

ಸಾರಾಂಶ

ಭಾನುವಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿವಿಧೆಡೆ ಸಿದ್ದರಾಮಯ್ಯ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಶಾ ಹಾಗೂ ನಿರ್ಮಲಾ ಸೀತಾರಾಮನ್‌ ತರಹೇವಾರಿ ಸುಳ್ಳು ಹೇಳುತ್ತಿದ್ದಾರೆ. ಇಂತಹ ಸುಳ್ಳರ ಪಕ್ಷಕ್ಕೆ ಮತ ಹಾಕಿದರೆ ನಿಮ್ಮ ಮತಕ್ಕೆ ಗೌರವ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕಾರಣಕ್ಕಾಗಿ ರಾಜ್ಯಕ್ಕೆ ಅನ್ಯಾಯ ಮಾಡಿರುವ ಬಿಜೆಪಿಯನ್ನು ತಿರಸ್ಕರಿಸಿ ಎಂದೂ ಅವರು ಕರೆ ನೀಡಿದ್ದಾರೆ.

ಭಾನುವಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಿ ಮಾತನಾಡಿದ ಅವರು, ಕೇಂದ್ರದ ಆರ್ಥಿಕ ಅನ್ಯಾಯ, ಬರ ಪರಿಹಾರ ವಿಳಂಬದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಸುಳ್ಳು ಹೇಳಿದ್ದಾರೆ. ತನ್ಮೂಲಕ ರಾಜ್ಯದ ಜನತೆಯ ಮುಂದೆ ಅವರ ಬಣ್ಣ ಬಯಲಾಗಿದ್ದು, ಮತದಾರರು ಅಂತಹ ಸುಳ್ಳರಿಗೆ ಮತ ಹಾಕಿದರೆ ನಿಮ್ಮ ಮತಕ್ಕೆ ಗೌರವ ಬರುತ್ತದೆಯೇ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಗೆ ಅನುಮತಿ ಕೊಡಲಿಲ್ಲ. ಮೋದಿಯವರೂ ಬೆಂಗಳೂರಿನ‌ ಜನತೆಗೆ ಕುಡಿಯುವ ನೀರು ಕೊಡುವ ಯೋಜನೆಗೆ ಬೆಂಬಲ ಘೋಷಿಸುತ್ತಿಲ್ಲ. ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ ಮೋದಿಯವರು 15 ರುಪಾಯಿಯನ್ನೂ ಹಾಕಿಲ್ಲ. ಮೋದಿಯವರು ಹೇಳಿದ ಯಾವುದನ್ನೂ ಜಾರಿ ಮಾಡಿಲ್ಲ. ಹೀಗಾಗಿ ಅವರ ಮುಖ ನೋಡಿ ಮತ ಹಾಕಿದರೆ ನಿಮ್ಮ ಮತ ಗೌರವ ಕಳೆದುಕೊಳ್ಳಲಿದೆ ಎಂದು ಹೇಳಿದರು.

ನುಡಿದಂತೆ ನಡೆದು ನಿಮ್ಮ ಮತಗಳಿಗೆ ಘನತೆ ತರುವ ಕೆಲಸವನ್ನು ನಾವು ಮಾಡಿದ್ದೇವೆ. ಹೀಗಾಗಿ ನಮಗೆ ಶಕ್ತಿ ತುಂಬಿ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸಂಸದರಾಗಿ ನಾಡಿನ ಜನತೆಗೆ ಆದ ಅನ್ಯಾಯಗಳು ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಶೋಭಾ ಕರಂದ್ಲಾಜೆ ಅವರನ್ನು ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್ ಎಂದು ಓಡಿಸಿದ್ದಾರೆ. ಹೀಗಾಗಿ ನೀವು ಸಹ ಸೋಲಿಸಿ ಎಂದರು.

ದಾವಣಗೆರೆ ಕೈ ಟಿಕೆಟ್‌ ಆಕಾಂಕ್ಷಿ ವಿನಯ್ ಬಂಡಾಯಕ್ಕೆ ಸಿದ್ದು ಯತ್ನಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ ಜಿ.ಬಿ.ವಿನಯ್‌ ಕುಮಾರ್‌ ಬಂಡಾಯ ಶಮನಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ರಂಗ ಪ್ರವೇಶ ಮಾಡಿದ್ದು, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಸಮ್ಮುಖದಲ್ಲಿ ವಿನಯ್ ಮನವೊಲಿಕೆಗೆ ಮುಂದಾಗಿದ್ದಾರೆ.ಬೆಂಗಳೂರಿನ ನಿವಾಸದಲ್ಲಿ ಭಾನುವಾರ ಬೆಳಗ್ಗೆ ನಿರಂಜನಾನಂದ ಪುರಿ ಶ್ರೀ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಮ್ಮುಖದಲ್ಲಿ ವಿನಯ್ ಜೊತೆಗೆ ಮಾತುಕತೆ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದರು.

‘ನಿನಗೆ ಇನ್ನೂ ಉತ್ತಮ ಭ‍ವಿಷ್ಯ ಇದೆ. ನಿನಗಿನ್ನೂ ವಯಸ್ಸಿದೆ. ನಿನ್ನನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ಈಗಲೇ ಇಷ್ಟು ದುಡುಕಬೇಡ. ಇನ್ನೂ ಕಾಲಾವಕಾಶ ಮಿಂಚಿಲ್ಲ. ಸಮಯ ಇದ್ದು, ಯೋಚನೆ ಮಾಡು. ಲೋಕಸಭೆ ಚುನಾವಣೆ ಅತ್ಯಂತ ಮುಖ್ಯ ಚುನಾವಣೆಯಾಗಿದ್ದು, ಕಾಂಗ್ರೆಸ್ ಗೆಲ್ಲುವ ಮೂಲಕ ದಾವಣಗೆರೆಯಲ್ಲಿ ಮತ್ತೆ ಬೇರೂರಬೇಕಿದೆ’ ಎಂದು ವಿನಯ್‌ಗೆ ಸಿದ್ದರಾಮಯ್ಯ ಹೇಳಿದರು ಎಂದು ತಿಳಿದುಬಂದಿದೆ.ಈ ಬಗ್ಗೆ ಮಾತನಾಡಿದ ವಿನಯ್‌, ‘ಬೆಂಗಳೂರಿನಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ್ದೆ. ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಸೂಚಿಸಿದ್ದಾರೆ. ಏ.8ರಂದು ಬೆಂಬಲಿಗರ ಸಭೆ ಕರೆದು, ನನ್ನ ಅಂತಿಮ ನಿರ್ಧಾರ ತಿಳಿಸುವೆ’ ಎಂದರು.