ಸಾರಾಂಶ
ಧಾರವಾಡ: ಭಾರತೀಯ ಸಂಸ್ಕೃತಿಯಲ್ಲಿನ ನಾಯಕತ್ವ ಅಂಶಗಳನ್ನು ಪಡೆದು ವಿಶ್ವಕ್ಕೆ ಭಾರತದ ಶಕ್ತಿ ತೋರಿರುವ ನರೇಂದ್ರ ಮೋದಿ ದೇಶಕ್ಕೆ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಆಲೂರ ಭವನದಲ್ಲಿ ನಿಸರ್ಗ ಸಂಶೋಧನಾ ಕೇಂದ್ರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ಆರ್. ಬಾಲಸುಬ್ರಹ್ಮಣ್ಯಂ ಬರೆದ ಪವರ್ ವಿಥಿನ್ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಭಾರತೀಯತೆಯಲ್ಲಿ ಅಡಕವಾಗಿರುವ ವಿಚಾರಗಳನ್ನು ಹೊಸತನದೊಂದಿಗೆ ಪವರ್ ವಿಥಿನ್ ಕೃತಿ ಪರಿಚಯಿಸುತ್ತಿದ್ದು, ಪ್ರಧಾನಿ ನಮೋ ಅವರನ್ನು ವಿಶ್ವನಾಯಕ ರನ್ನಾಗಿ ಮಾಡಿದೆ ಎಂದರು.
ಮೋದಿ ಹೊಗಳಿಕೆ ಮತ್ತು ತೆಗಳಿಕೆ ಬಗ್ಗೆ ಹಲವು ಪುಸ್ತಕಗಳು ಬಂದಿವೆ. ಆದರೆ, ಈ ಪುಸ್ತಕದಲ್ಲಿ ವ್ಯಕ್ತಿ ಕೇಂದ್ರಿತ ಇಲ್ಲ. ಬದಲಿಗೆ ಭಾರತದಲ್ಲಿಯೇ ಒಬ್ಬ ವಿಶ್ವ ನಾಯಕ ಹೇಗೆ ಬೆಳೆಯಬಲ್ಲ ಎಂದಿದೆ. ನಮ್ಮದೇ ಸಂಸ್ಕೃತಿಯ ಭಾಗವಾದ ಗ್ರಂಥಗಳು ಕೇವಲ ಧಾರ್ಮಿಕತೆ ಮಾತ್ರ ಅಡಕವಾಗಿಲ್ಲ. ಬದಲಿಗೆ ಒಬ್ಬ ನಾಯಕ ಸಮಕಾಲಿನ ಸಮಾಜದ ಮೇಲೆ ಹೇಗೆ ಪರಿಣಾಮ ಬೀರಬಲ್ಲ ಎಂಬುದನ್ನು ಹೇಳಿದ್ದಾರೆ ಎಂದರು.
ಧೈರ್ಯ, ಸಾಹಸ ಮೋದಿ ಸ್ವತ್ತು. ಹೀಗಾಗಿ ಅವರನ್ನು ಇವು ಎತ್ತರಕ್ಕೆ ನಿಲ್ಲಿಸಿದೆ. ಇದಕ್ಕೆ ಸಾಕ್ಷಿಯಾಗಿ 370ನೇ ವಿಧಿ ಜಾರಿ ಮಾಡಿದರು. ಎಲ್ಲಾ ಕಾನೂನು ತಜ್ಞರು ಇದನ್ನು ಜಾರಿಮಾಡುವುದು ಕಷ್ಟವಿದೆ ಎಂದು ಹೇಳಿದ್ದರು. ಸಾವಿರಾರು ಜನ ಸಾಯುತ್ತಾರೆ ಎಂದು ಹೇಳಿದ್ದರು. ಆದರೆ, ಮೋದಿ ಎದೆಗುಂದದೆ ತೆಗೆದು ಹಾಕಿದರು. ಇಂತಹ ಅನೇಕ ವಿಚಾರಗಳ ಮೇಲೆ ಕೃತಿ ಬೆಳಕು ಚೆಲ್ಲುತ್ತದೆ ಎಂದರು.
ಮೋದಿ ಸಂವಹನ ಕಲೆ ಬಗ್ಗೆ ಕೂಡ ಪುಸ್ತಕ ಬೆಳಕು ಚೆಲ್ಲಿದೆ. ಅವರು ಏನೆ ಮಾಡಿದರು ಅದು ಪಕ್ಕಾ ವಿಚಾರವೇ ಆಗಿರುತ್ತದೆ. ಯಾವುದೇ ಗೊಂದಲ ಇರುವುದಿಲ್ಲ. ಹೀಗಾಗಿ ಅವರು ಜನಮಾನಸದ ನಾಯಕರಾಗಿ ಬೆಳೆದಿದ್ದಾರೆ ಎಂದರು.
ನೇರವಾಗಿ ಜನರ ಖಾತೆಗೆ ಹಣ ಹಾಕುವುದರಿಂದ ಇಂದು ₹ 3 ಲಕ್ಷ ಕೋಟಿ ಉಳಿದಿದೆ. ಅವರಲ್ಲಿನ ಧೈರ್ಯ, ಸಾಹಸ ಪ್ರವೃತ್ತಿಯೊಂದಿಗೆ ಮುನ್ನುಗ್ಗಿ ಕೆಲಸ ಮಾಡುವ ಪ್ರವೃತ್ತಿ ಅವರದು. ಕೋವಿಡ್ ನಂತರ ಪರಿಸ್ಥಿತಿ ನಿರ್ವಹಣೆ ಮಾಡಿದ ರೀತಿಯನ್ನು ವಿದೇಶಿಗರು ಅಭ್ಯಸಿಸಲು ಬರುತ್ತಿದ್ದಾರೆ. ಇದು ಮೋದಿ ಅವರ ಮೇಲೆ ಭಾರತೀಯತೆ ಬೀರಿದ ಪ್ರಭಾವಕ್ಕೆ ಸಾಕ್ಷಿಯಾಗಿದೆ ಎಂದರು.
ಡಾ. ಚೇತನ್ ಸಿಂಗಾಯಿ ಕೃತಿ ಪರಿಚಯ ಮಾಡಿದರು. ಕೃತಿಕಾರ ಡಾ. ಆರ್. ಬಾಲಸುಬ್ರಹ್ಮಣ್ಯಂ ಮಾತನಾಡಿ, ನಾಯಕತ್ವ ಎಂದರೆ ಅದು ಅಮೆರಿಕದಿಂದ ಬಂದರೆ ಮಾತ್ರ ನಾಯಕ ಎನ್ನುವ ಕಾಲವಿತ್ತು. ಇದೀಗ ಕಾಲ ಬದಲಾಗಿದೆ. ನಮ್ಮ ದೇಶಿ ಸಂಸ್ಕೃತಿಯಲ್ಲಿನ ಭಾರತೀಯತೆ ಅಂಶಗಳನ್ನು ಇಟ್ಟುಕೊಂಡು ಬೆಳೆದ ನಾಯಕರು ನಮ್ಮಲ್ಲಿ ಇದ್ದಾರೆ. ನರೇಂದ್ರ ಮೋದಿ ಅವರು ಇಂದು ನಮಗೆ ದೇಶಿ ಭಾರತೀಯ ಸಂಸ್ಕೃತಿ ಆಧಾರಿತ ನಾಯಕತ್ವ ಅಳವಡಿಸಿಕೊಂಡ ನಾಯಕರಾಗಿದ್ದಾರೆ. ಹೀಗಾಗಿ ಭಾರತೀಯತ್ವ ಇಟ್ಟುಕೊಂಡ ನಾಯಕನ ಬಗ್ಗೆ ಪವರ್ ವಿಥಿನ್ ಕೃತಿ ರಚಿಸಿದ್ದೇನೆ ಎಂದರು.
ಪ್ರಪಂಚದ ನಾಯಕತ್ವವನ್ನು ಇಂದು ಭಾರತ ವಹಿಸುವ ಕಾಲ ಇದಾಗಿದೆ. ಶಾಂತಿ, ಪರಿಸರ, ಭಾರತೀಯತೆ ಸ್ವರೂಪವಾಗಿ ಬೆಳೆದು ನಿಂತಿದೆ. ಮಹಾತ್ಮ ಗಾಂಧಿ ಅವರ ಸರಿಸಮಾನ ನಾಯಕರಾಗಿ ಇಂದು ಮೋದಿ ಬೆಳೆದಿದ್ದಾರೆ ಎಂದರು.
ನಿಸರ್ಗ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಪಿ.ವಿ. ಹಿರೇಮಠ ಉಪಸ್ಥಿತರಿದ್ದರು. ವಿವೇಕಾನಂದ ಯುತ್ ಮೂವಮೆಂಟ್‌ನ ಉತ್ತರ ಕರ್ನಾಟಕ ಮುಖ್ಯಸ್ಥ ಕೆ.ಎಸ್. ಜಯಂತ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸ್ರೇಯಾ ಬಳ್ಳಾರಿ ಪ್ರಾರ್ಥಿಸಿದರು.