ಸಾರಾಂಶ
ಮದ್ದೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಜಗತ್ತು ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೋಮವಾರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಮನ್ಮುನ್ ನಿರ್ದೇಶಕ, ಬಿಜೆಪಿ ಮುಖಂಡ ಎಸ್. ಪಿ.ಸ್ವಾಮಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರಧಾನಿ ಮೋದಿ ಭಾವಚಿತ್ರದೊಂದಿಗೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪರ ಘೋಷಣೆ ಕೂಗಿದ ಮೈತ್ರಿ ಕಾರ್ಯಕರ್ತರು ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಸ್ವೀಕರಿಸಿರುವುದು ದೇಶದ ಹಿತ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು. ವಿಜಯೋತ್ಸವದ ವೇಳೆ ಎಸ್.ಪಿ.ಸ್ವಾಮಿ ಮಾತನಾಡಿ, ದೇಶದ ಕೆಲವು ಜಾತಿ ಮತ್ತು ರಾಜಕೀಯ ಶಕ್ತಿಗಳು ಒಗ್ಗೂಡಿ ನರೇಂದ್ರ ಮೋದಿಯನ್ನು ಸೋಲಿಸಲು ಷಡ್ಯಂತ್ರ ನಡೆಸಿದರು ಸಹ ಪ್ರಬುದ್ಧ ಮತದಾರರ ಬೆಂಬಲ ಬಿಜೆಪಿಗೆ ಇದೆ ಎಂದು ಸಾಬೀತುಪಡಿಸಿದ್ದಾರೆ ಎಂದರು.ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಜನತೆ ಅತ್ಯಧಿಕ ಬಹುಮತಗಳಿಂದ ಬೆಂಬಲಿಸಿದ್ದಾರೆ. ಚುನಾವಣೆ ಈ ಫಲಿತಾಂಶ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈತ್ರಿ ಮುಂದುವರಿದು ಗೆಲುವಿನ ನಾಗಾಲೋಟದ ಸಾಧ್ಯತೆ ನಿಚ್ಚಳವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಬಿಜೆಪಿ ತಾಲೂಕ್ ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಜಿಲ್ಲಾ ಉಪಾಧ್ಯಕ್ಷ ಪ್ರಧಾನ ಕಾರ್ಯದರ್ಶಿ ಎಂ.ಸಿ.ಸಿದ್ದು, ಸುಧಾಕರ್, ಜಿಲ್ಲಾ ರೈತ ಮೋರ್ಚ ಉಪಾಧ್ಯಕ್ಷ ಜಿ.ಸಿ.ಮಹೇಂದ್ರ, ನಗರ ಘಟಕದ ಅಧ್ಯಕ್ಷ ಮಧು ಕುಮಾರ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷ ಶ್ವೇತಾ ಅಶೋಕ್, ಜಿಲ್ಲಾ ಕಾರ್ಯದರ್ಶಿ ರಂಜಿತಾ, ಪೂರ್ಣಿಮಾ, ಮುಖಂಡರಾದ ಸೌಮ್ಯ, ಮಮತಾ, ತ್ರಿವೇಣಿ, ಲಲಿತಮ್ಮ, ಜಾನಕಿ, ಸುಮಾ, ಜಿಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಮುಖಂಡರಾದ ಗೆಜ್ಜಲಗೆರೆ ಪುಟ್ಟಸ್ವಾಮಿ, ಶೇಖರ್ ಹಲವರು ಪಾಲ್ಗೊಂಡಿದ್ದರು.