ಸಾರಾಂಶ
ಮಂಗಳೂರು : ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಉನ್ನತ ತನಿಖೆ ಆಗಬೇಕು. ಮರು ಪರೀಕ್ಷೆ ನಡೆಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಸೆಂಟರ್‌ನಲ್ಲಿ ಪರೀಕ್ಷೆ ಬರೆದಿದ್ದ ಆರು ಮಂದಿ ವಿದ್ಯಾರ್ಥಿಗಳು ಟಾಪರ್ ಆಗಿದ್ದರೆ, ಉಳಿದ ಇಬ್ಬರು 718-719 ಅಂಕ ಗಳಿಸಿರುವುದು ಸಂಶಯಕ್ಕೆ ಎಡೆಮಾಡಿದೆ. ಜೂ.14ರಂದು ಪರೀಕ್ಷೆ ಫಲಿತಾಂಶ ನಿಗದಿ ಮಾಡಿದ್ದರೂ ಲೋಕಸಭೆ ಚುನಾವಣೆ ಫಲಿತಾಂಶದ ದಿನವೇ ಬಿಡುಗಡೆ ಮಾಡಲಾಗಿತ್ತು. ಪರೀಕ್ಷಾ ಅಕ್ರಮದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಮಾಡಿರುವ ಸಂಚು ಇದರಲ್ಲಿ ಕಾಣುತ್ತಿದೆ. ಪ್ರಕರಣದಲ್ಲಿ ಹಲವು ಮಂದಿಯನ್ನು ಬಂಧನ ಮಾಡಿರುವುದು ಅಕ್ರಮ ನಡೆದಿದೆ ಎನ್ನುವುದಕ್ಕೆ ಸಾಕ್ಷಿ. ತಕ್ಷಣ ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ನೀಟ್ ಪರೀಕ್ಷೆ ಅಕ್ರಮ ಬಗ್ಗೆ ಮೌನ ವಹಿಸಿರುವುದು ಆತಂಕಕಾರಿ. ಉತ್ತರ ನೀಡಬೇಕಾದವರೇ ಮೌನವಾದರೆ ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಈ ಬಗ್ಗೆ ಹೋರಾಟ ನಡೆಸಲಿದೆ ಎಂದರು.
ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಿದ್ದ ಪದ್ಮರಾಜ್ ಪೂಜಾರಿ ಮಾತನಾಡಿ, ನೀಟ್ ಅಕ್ರಮದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿದೆ. ಇಷ್ಟಾದರೂ ವಿದ್ಯಾರ್ಥಿ ಸಂಘಟನೆಗಳು ಯಾವುದೇ ಧ್ವನಿಯೆತ್ತದೆ ವಿದ್ಯಾರ್ಥಿಗಳ ಪರ ನಿಲ್ಲುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಪೂಜಾರಿ, ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಅಶ್ರಫ್ ಕೆ., ಶಾಲೆಟ್ ಪಿಂಟೊ ಮತ್ತಿತರರು ಇದ್ದರು.