ಭಾರತ ವಿಶ್ವ ಗುರುವಾಗಲು ಮತ್ತೊಮ್ಮೆ ಮೋದಿ ಗೆಲ್ಲಿಸಿ

| Published : Apr 24 2024, 02:23 AM IST

ಸಾರಾಂಶ

ಚಿತ್ರದುರ್ಗದ ತಾಲೂಕಿನ ಹುಲ್ಲೂರು, ಕುರುಬರಹಳ್ಳಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಭಾರತ ವಿಶ್ವ ಗುರುವಾಗಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಅಗತ್ಯವೆಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.

ಚಿತ್ರದುರ್ಗ ತಾಲೂಕಿನ ಹುಲ್ಲೂರ, ಕುರುಬರಹಳ್ಳಿ, ಸಿಂಗಾಪೂರ, ಬೆನಕನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಂಗಳವಾರ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ ಮತಯಾಚಿಸಿದ ಅವರು, ಈ ವೇಳೆ ನಡೆದ ಸಭೆಯಲ್ಲಿ ಮಾತನಾಡಿ, ರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವುದರ ಮೂಲಕ ಮೋದಿ ಹಿಂದೂಗಳ ಬಹುವರ್ಷದ ಕನಸು ನನಸು ಮಾಡಿದ್ದಾರೆ. ಇಂತಹ ಮಹಾನುಭಾವರನ್ನು ಮತ್ತೆ ಪ್ರಧಾನಿ ಮಾಡುವ ಜವಾಬ್ದಾರಿ ನಾಡಿನ ಜನ ಹೊರಬೇಕೆಂದರು.

ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಪವಿತ್ರ ಮತದಾನ ಮಾಡುವ ದಿನಕ್ಕೆ ಕ್ಷಣಗಣನೆ ಎದುರಾಗಿದೆ, ಈ ಬಾರಿಯೂ ದೇಶ ಅಭಿವೃದ್ಧಿ ಪಥದತ್ತ ಸಾಗಲು ಮೋದಿಜಿ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಮಹತ್ವದ ದೊಡ್ಡ ದೊಡ್ಡ ಕನಸುಗಳನ್ನು ಸಾಕಾರಗೊಳಿಸುವ ಗ್ಯಾರಂಟಿಯನ್ನು ನರೇಂದ್ರ ಮೋದಿಜಿ ನೀಡಿದ್ದಾರೆ. ಈ ಹಿಂದೆ ನೋಟ್ ಬ್ಯಾನ್ ಮಾಡಿ ಕಪ್ಪು ಹಣದ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದರು. ದೇಶದ ಹಿತರಕ್ಷಣೆ, ಬಡವರ ಕಲ್ಯಾಣ ಉದ್ದೇಶವನ್ನೇ ಅದಮ್ಯ ಧ್ಯೇಯವಾಗಿಸಿಕೊಂಡು ಶ್ರಮಿಸುತ್ತಿರುವ ನಿಸ್ವಾರ್ಥ ನಾಯಕ ಅವರಾಗಿದ್ದಾರೆ. ಇಂತಹ ನಾಯಕನ ಕೈಯಲ್ಲಿ ದೇಶ ಸುರಕ್ಷಿತವಾಗಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದಂತಹ ಕೋಮುವಾದಿ, ಜನವಿರೋಧಿ ಪಕ್ಷಗಳಿಗೆ ಅಧಿಕಾರ ನೀಡಬಾರದು, ಸದಾ ಜನ ಹಿತ ಬಯಸುವ ಬಿಜೆಪಿಗೆ ಮತ್ತೊಮ್ಮೆ ಆಶೀರ್ವದಿಸಿ ಎಂದು ಕೋರಿದರು.

ರೈತರ ಬಗ್ಗೆ ಕಳಕಳಿ ಹೊಂದಿರುವ ಗೋವಿಂದ ಕಾರಜೋಳ ಅವರು ನೀರಾವರಿ ವಿಚಾರದಲ್ಲಿ ಅವರದ್ದೇ ಆದ ಕಲ್ಪನೆ ಹೊಂದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅವರು ಕೈಗೊಂಡಿರುವ ಜಲ ಸಂಪನ್ಮೂಲ ಬಳಕೆ ಅವರ ಕಾಳಜಿಗೆ ಸಾಕ್ಷಿಯಾಗಿದೆ. ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಚುರುಕಿಗೆ ಕಾರಣರಾಗಿದ್ದಾರೆ. ಕೇಂದ್ರ ಘೋಷಿಸಿರುವ 5300 ಕೋಟಿ ರು. ಅನುದಾನವನ್ನು ಮುಂದಿಮ ದಿನಗಳಲ್ಲಿ ತರಲಿದ್ದಾರೆ ಎಂದರು.

ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮುತ್ಸದ್ದಿ ನಾಯಕ. ಚಿತ್ರದುರ್ಗದಿಂದ ಗೆದ್ದರೆ ಕೇಂದ್ರದಲ್ಲಿ ಸಚಿವರಾಗುವುದು ಗ್ಯಾರಂಟಿ. ಮೋದಿ ಸಂಪುಟದಲ್ಲಿ ಪ್ರಭಾವಿ ಖಾತೆ ಹೊಂದಲಿದ್ದಾರೆ. ಇಂತಹವರು ಕೇಂದ್ರದಲ್ಲಿ ಸಚಿವರಾದಲ್ಲಿ ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿ ಚಿತ್ರಣ ಬದಲಾಗಲಿದೆ. ಚಿತ್ರದುರ್ಗ ಕ್ಷೇತ್ರದ ಜನ ಎದುರಾಗಿರುವ ಅವಕಾಶವನ್ನು ಸಮರ್ಥವಾಗಿ ಬಳಸಿ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.

ಭದ್ರಾ ಮೇಲ್ದಂಡೆ ಕಾಮಗಾರಿಗೆ ಚುರುಕಿನ ಚಾಲನೆ ನೀಡಲು ಗೋವಿಂದ ಕಾರಜೋಳ ಆಯ್ಕೆ ಅನಿವಾರ್ಯ. ಈಗಾಗಲೇ ಕೇಂದ್ರ ಸರ್ಕಾರ ಮದಕರಿನಾಯಕ ಥೀಮ್ ಫಾರ್ಕ್ ಆರಂಭಿಸುವ ಭರವಸೆ ನೀಡಿದೆ. ಕೇಂದ್ರದ ಮುಂದೆ ಸಮರ್ಥವಾಗಿ ಬದ್ಧತೆ ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಗೋವಿಂದ ಕಾರಜೋಳ ಸಮರ್ಥ ಆಯ್ಕೆಯೆಂದು ಬಸವರಾಜನ್ ಹೇಳಿದರು.

ಈ ವೇಳೆ ಯುವ ಮುಖಂಡ ಹುಲ್ಲೂರು ದೇವರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಶೇಖರಪ್ಪ, ಸಿಂಗಾಪುರದ ಶ್ರೀಧರ್, ಬೆನಕನಹಳ್ಳಿ ಗಿರೀಶ್, ವಿಜಯ್, ಆಂಜಿನಪ್ಪ. ಕುರುಬರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಯಪ್ಪ, ಹುಲ್ಲೂರು ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವಪ್ಪ, ಗುತ್ತಿಗೆದಾರ ಪ್ರಭಾಕರ್, ಹುಲ್ಲೂರು ರಾಮಚಂದ್ರ ರೆಡ್ಡಿ, ಮಲ್ಲಿಕಾರ್ಜುನ್, ಶಿವಜ್ಜರ ರಾಜಪ್ಪ, ಬಂಗಾರದ ಅಂಗಡಿ ಅರುಣ್ ಕುಮಾರ್, ಸಿಂಗಾಪುರದ ಜಾನಕಲ್ ಗಂಗಣ್ಣ, ಹುಲ್ಲೂರು ಸ್ವಾಮಿ ಇದ್ದರು.