ಮೋದಿ ನಾಯಕತ್ವ ಮೆಚ್ಚಿ, ಅಧಿಕಾರ ಕೊಡಲು ಜನರ ತೀರ್ಮಾನ-ಬೊಮ್ಮಾಯಿ

| Published : May 06 2024, 12:31 AM IST

ಮೋದಿ ನಾಯಕತ್ವ ಮೆಚ್ಚಿ, ಅಧಿಕಾರ ಕೊಡಲು ಜನರ ತೀರ್ಮಾನ-ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವಕ್ಕೆ ಮೆಚ್ಚಿರುವ ಈ ದೇಶದ ಮತದಾರರು ಅಧಿಕಾರ ನೀಡಲು ನಿರ್ಧರಿಸಿದ್ದಾರೆ.‌ ಈ ಚುನಾವಣೆಯಲ್ಲಿ ನನ್ನ ಕೆಲಸಗಳು ಮಾತನಾಡುತ್ತಿವೆ. ನಾನು ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ.

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವಕ್ಕೆ ಮೆಚ್ಚಿರುವ ಈ ದೇಶದ ಮತದಾರರು ಅಧಿಕಾರ ನೀಡಲು ನಿರ್ಧರಿಸಿದ್ದಾರೆ.‌ ಈ ಚುನಾವಣೆಯಲ್ಲಿ ನನ್ನ ಕೆಲಸಗಳು ಮಾತನಾಡುತ್ತಿವೆ. ನಾನು ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸುಮಾರು 35 ದಿನ ಪ್ರಚಾರಕ್ಕೆ ಸಮಯ ಸಿಕ್ಕಿದೆ. ಈ ದೇಶದ ಜನ ಹಾಗೂ ಹಾವೇರಿ-ಗದಗ ಜನರು ಬಹಳ ಪ್ರಬುದ್ಧವಾದ ಮತದಾರರಿದ್ದಾರೆ. ಇದೊಂದು ದೇಶ ನಡೆಸುವ ಚುನಾವಣೆ ಎಂಬುದು ಎಲ್ಲರಿಗೂ ಅರಿವಿದೆ. ದೇಶವನ್ನು ಸಮರ್ಥವಾಗಿ ನಡೆಸುವ ನಾಯಕರಿಗೆ ದೇಶ‌ ಕೊಡಬೇಕು ಎನ್ನುವ ಆಲೋಚನೆಯಲ್ಲಿದ್ದಾರೆ. ಅವರ ಹಿಂದಿನ ಸಾಧನೆ ಗಮನಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲ ವರ್ಗದ ಜನರು ಬೆಂಬಲ ಕೊಡುತ್ತಿದ್ದಾರೆ ಎಂದು ಹೇಳಿದರು.ಈ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರತಿ ತಾಲೂಕಿನಲ್ಲಿ ನಾವು ಮಾಡಿರುವ ಕೆಲಸ ಕಾರ್ಯಗಳನ್ನು ಜನರು ನೆನಪಿಸಿಕೊಳ್ಳುತ್ತಾರೆ. ತುಂಗಾ ಮೇಲ್ದಂಡೆ ಯೋಜನೆ ಜಾರಿ, ಮೆಡ್ಲೇರಿ ಕೆರೆಯನ್ನು ₹32 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ,. ಅದೇ ರೀತಿ ಎಲ್ಲ ತಾಲೂಕುಗಳಲ್ಲಿ ನಾವು ಮಾಡಿರುವ ಕೆಲಸಗಳ ಪ್ರಯೋಜ‌ನ ಪಡೆದವರು ಭೇಟಿ ಮಾಡಿ ಸಂತಸ ಹಂಚಿಕೊಂಡಿದ್ದಾರೆ ಎಂದು ಹೇಳಿದರು.ಸಂವಿಧಾನ ಬದಲಾವಣೆಯಿಲ್ಲ:ಹಾವೇರಿ ಮಾಜಿ ಶಾಸಕ ನೆಹರು ಓಲೇಕಾರ ಜತೆಗೆ ಒಳ್ಳೆಯ ಸಂಬಂಧ ಇದ್ದಿದ್ದು ನಿಜ, ಕಳೆದ ಚುನಾವಣೆಯಲ್ಲಿ ನಮ್ಮ ನಡುವೆ ಸಂವಹನ ಸಮಸ್ಯೆ ಆಯಿತು. ಈ ಬಾರಿ ಅವರು ಭಿನ್ನ ನಿಲುವು ತಳೆದರು. ಅವರು ಬಿಜೆಪಿ ವಿರುದ್ಧ ಸಂವಿಧಾನ ಬದಲಾವಣೆಯ ಬಗ್ಗೆ ಆರೋಪ ಮಾಡಿದ್ದಾರೆ. ಸಂವಿಧಾನ ಬದಲಾವಣೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನ ಬದಲಾವಣೆ ಮಾಡುವುದು ಅಸಾಧ್ಯ ಎಂದು ಹೇಳಿದೆ. ಯಾರೇ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ. ಕಾಂಗ್ರೆಸ್‌ನವರು ಅದನ್ನು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.ಮಹಿಳೆಯರು ಪ್ರಬುದ್ಧರಿದ್ದಾರೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಶೇ. 35ರಷ್ಟು ಜನರಿಗೆ ಮಾತ್ರ ತಲುಪಿವೆ. ಇನ್ನು ಶೇ. 65ರಷ್ಟು ಜನರಿಗೆ ತಲುಪಿಲ್ಲ. ಮಹಿಳೆಯರು ಪ್ರಬುದ್ಧರಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ವ್ಯತ್ಯಾಸ ಅವರಿಗೆ ಗೊತ್ತಿದೆ ಎಂದರು. ಚುನಾವಣೆ ಪ್ರಚಾರದ ವೇಳೆ ಪ್ರಮುಖವಾಗಿ ಕೇಳಿ ಬಂದ ಸಮಸ್ಯೆ ಎಂದರೆ ಕುಡಿಯುವ ನೀರು. ಹಾವೇರಿ ಗದಗ ನಗರಗಳಿಗೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸಮಸ್ಯೆ ಇದೆ.‌ ನಾನು ಸಿಎಂ ಆಗಿದ್ದಾಗ ₹140 ಕೋಟಿ ವೆಚ್ಚದಲ್ಲಿ ಗದಗನಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಿದ್ದೆವು. ಈ ಸರ್ಕಾರ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬೊಮ್ಮಾಯಿ ಆರೋಪಿಸಿದರು.

ಡಿಕೆಶಿ ರಿಜೆಕ್ಟೆಡ್ ಪಾರ್ಟಿ ಅಧ್ಯಕ್ಷ: ಡಿಸಿಎಂ ಡಿ.ಕೆ. ಶಿವಕುಮಾರ ಅವರು ತಮ್ಮನ್ನು ರಿಜೆಕ್ಟೆಡ್ ಅಭ್ಯರ್ಥಿ ಎಂದು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಡಿ.ಕೆ. ಶಿವಕುಮಾರ್ ಅವರು ರಿಜೆಕ್ಟೆಡ್ ಪಾರ್ಟಿಯ ಅಧ್ಯಕ್ಷ, ಇಡೀ ಪಕ್ಷವೇ ರಿಜೆಕ್ಟ್ ಆಗಿದೆ. ನಾನು ರಿಜೆಕ್ಟೆಡ್ ಅಲ್ಲ, ಶಿಗ್ಗಾಂವಿಯಲ್ಲಿ 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಸ್ವತಃ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ವಿರುದ್ಧ ಚುನಾವಣೆಯಲ್ಲಿ ಸೋತಿದ್ದಾರೆ. ನನ್ನ ವಿರುದ್ಧ ಮಾತನಾಡಲು ಅವರಿಗೆ ಏನೂ ಇಲ್ಲದಿರುವಾಗ ಈ ರೀತಿ ಹೇಳುತ್ತಿದ್ದಾರೆ. ಹಿಂದೆ ಅವರ ಪಕ್ಷವೂ ಸೋತಿತ್ತು. ಸಿಎಂಗಳೂ ಸೋತಿದ್ದಾರೆ ಎಂದು ತಿರುಗೇಟು ನೀಡಿದರು.