ಅಡಕೆ ಮಾರಾಟಕ್ಕೆ ಅಡ್ಡಿಯಾದ ತೇವಾಂಶ ಮಾನದಂಡ!

| Published : Nov 07 2024, 11:47 PM IST

ಸಾರಾಂಶ

ಈ ಮಾನದಂಡದ ಆಧಾರದಲ್ಲಿ ಅಡಕೆ ಮೇಲಿನ ತೇವಾಂಶ ಪ್ರಮಾಣವನ್ನು ಶೇ.11ಕ್ಕೆ ನಿಗದಿಪಡಿಸಿ ಪರಿಷ್ಕರಿಸುವಂತೆ ಬೆಳೆಗಾರರ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿತ್ತು. ಅಕ್ಟೋಬರ್‌ 1ರಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆಯ ಅಡಕೆ ಹಾಗೂ ಸಾಂಬಾರ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರು ಅಧೀನ ಕಾರ್ಯದರ್ಶಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಕೋರಿದ್ದಾರೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಬೆಳೆಗಾರರಿಂದ ಖರೀದಿಸಿದ ಅಡಕೆಯನ್ನು ಉತ್ತರ ಭಾರತದ ಮಾರುಕಟ್ಟೆಗೆ ಮಾರಾಟ ಮಾಡಲು ಅಡಕೆ ಮಾರಾಟದ ಸಹಕಾರಿ ಸಂಸ್ಥೆಗಳು ಈಗ ಪರದಾಟ ನಡೆಸುತ್ತಿವೆ. ಕೇಂದ್ರ ಸರ್ಕಾರ ವಿಧಿಸಿದ ತೇವಾಂಶದ ಮಾನದಂಡ ಸಹಕಾರಿ ಸಂಸ್ಥೆಗಳಿಗೆ ಅಡಕೆ ಮಾರಾಟಕ್ಕೆ ಮುಳುವಾಗಿದೆ.

ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್ಎಸ್‌ಎಐ) ನಿಯಮ ಪ್ರಕಾರ ಅಡಕೆಯಲ್ಲಿನ ತೇವಾಂಶ ಪ್ರಮಾಣ ಶೇ.7 ರ ಮಾಪನ ಮೀರಬಾರದು. ಹಾಗೇನಾದರೂ ಮೀರಿದರೆ ಅಂತಹ ಅಡಕೆ ಖರೀದಿಗೆ ಯೋಗ್ಯವಲ್ಲ ಎನ್ನುತ್ತದೆ. ಇದು ಅಡಕೆ ರಫ್ತಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಗುಟ್ಕಾ ಉತ್ಪಾದನೆಗೆ ಬಳಸುವ ಕೆಂಪಡಕೆಗೆ ಉತ್ತರ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಮುಖ್ಯವಾಗಿ ಕರಾವಳಿ, ಮಲೆನಾಡು ಪ್ರದೇಶಗಳ ಕೆಂಪಡಕೆಯನ್ನು ಉತ್ತರ ಭಾರತಕ್ಕೆ ರವಾನಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಗುಟ್ಕಾ ಕಂಪನಿಗಳೇ ನೇರವಾಗಿ ಸಹಕಾರಿ ಸಂಸ್ಥೆಗಳಿಂದ ಅಡಕೆ ಖರೀದಿಸುತ್ತವೆ.

ಮುಳುವಾದ ತೇವಾಂಶ ಮಾನದಂಡ:

ಅಡಕೆಯಲ್ಲಿ ಶೇ.7ಕ್ಕಿಂತ ಅಧಿಕ ತೇವಾಂಶ ಇದ್ದರೆ ಅಂತಹ ಅಡಕೆಯನ್ನು ಕಂಪನಿಗಳು ಖರೀದಿಸುವುದಿಲ್ಲ. ಗುಣಮಟ್ಟ ಪರಿಶೀಲಿಸಿಯೇ ಅಡಕೆ ಖರೀದಿಸುವುದರಿಂದ ಶೇ.7ರ ತೇವಾಂಶ ಮಾನದಂಡವೇ ಅಡಕೆ ಮಾರಾಟಕ್ಕೆ ಎರವಾಗಿದೆ.

2015-16ರಲ್ಲಿ ಅಡಕೆ ಮೇಲಿನ ತೇವಾಂಶವನ್ನು ಶೇ.7ರ ಪ್ರಮಾಣ ಎಂದು ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿದೆ. ಆ ಬಳಿಕ ಅಡಕೆ ಮಾರಾಟ ವ್ಯವಹಾರದಲ್ಲಿ ಇದೇ ಮಾನದಂಡ ಬಳಕೆಯಾಗುತ್ತಿದೆ. ಕಾಲ ಬದಲಾದಂತೆ ಹವಾಮಾನ ಬದಲಾವಣೆಯೂ ಆಗತೊಡಗಿದ್ದು, ಈಗ ವಾತಾವರಣವೂ ಬದಲಾಗಿದೆ. ಇದಕ್ಕೆ ಅನುಗುಣವಾಗಿ ಅಡಕೆ ಮೇಲಿನ ತೇವಾಂಶ ಕೂಡ ಬದಲಾಗಿದೆ ಎನ್ನುವುದು ಅಡಕೆ ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಪ್ರಸ್ತುತ ದಿನಗಳಲ್ಲಿ ಬಿಳಿ ಹಾಗೂ ಕೆಂಪಡಕೆಯಲ್ಲಿ 45-50 ಬಿಸಿಲಿನ ಬಳಿಕವೂ ತೇವಾಂಶ ಪ್ರಮಾಣ ಈಗಿನ ವಾತಾವರಣಕ್ಕೆ ಅನುಗುಣವಾಗಿ ಸಾಮಾನ್ಯವಾಗಿ ಶೇ.10 ರಿಂದ 11ರ ವರೆಗೆ ಇರುತ್ತದೆ. ಹೀಗಾಗಿ ಅಂತಹ ಅಡಕೆಯನ್ನು ಖರೀದಿದಾರರು ಗುಣಮಟ್ಟ ರಹಿತ ಕಾರಣವೊಡ್ಡಿ ತಿರಸ್ಕರಿಸುತ್ತಾರೆ. ಹೀಗೆ ತಿರಸ್ಕರಿಸಿದರೆ, ಅದರಿಂದ ಅಪಾರ ನಷ್ಟ ಉಂಟಾಗುವುದು ಸಹಕಾರಿ ಸಂಸ್ಥೆಗಳಿಗೆ. ಪ್ರಸ್ತುತ ಇದೇ ರೀತಿಯ ವಿದ್ಯಮಾನಗಳು ನಡೆಯುತ್ತಿವೆ.

ಅಡಕೆಯ ತೇವಾಂಶ ಪ್ರಮಾಣ ಶೇ.11 ನಿಗದಿ

ಅಡಕೆ ಮೇಲಿನ ತೇವಾಂಶ ಪ್ರಮಾಣ ಶೇ.7 ರಿಂದ ಶೇ.11ಕ್ಕೆ ಹೆಚ್ಚಳಗೊಂಡಿರುವುದನ್ನು ಕಾಸರಗೋಡಿನ ಐಸಿಎಆರ್‌-ಸಿಪಿಸಿಆರ್‌ಐ(ಕೇಂದ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ) 2020-21ರಲ್ಲಿ ತನ್ನ ಅಧ್ಯಯನ ವರದಿಯಲ್ಲಿ ಪ್ರಕಟಿಸಿತ್ತು. ಅಡಕೆ ಮೇಲಿನ ತೇವಾಂಶ ಪ್ರಮಾಣವನ್ನು ಪರಿಷ್ಕರಿಸುವಂತೆ 2020 ಮಾರ್ಚ್‌ನಲ್ಲಿ ನಡೆದ ಕ್ಯಾಂಪ್ಕೋ ನಿರ್ದೇಶಕ ಮಂಡಳಿ ಸಭೆಯಲ್ಲಿ ಸಿಪಿಸಿಆರ್‌ಐಯನ್ನು ಕೋರುವ ನಿರ್ಣಯ ಕೈಗೊಳ್ಳಲಾಗಿತ್ತು. ಈ ಮಾನದಂಡದ ಆಧಾರದಲ್ಲಿ ಅಡಕೆ ಮೇಲಿನ ತೇವಾಂಶ ಪ್ರಮಾಣವನ್ನು ಶೇ.11ಕ್ಕೆ ನಿಗದಿಪಡಿಸಿ ಪರಿಷ್ಕರಿಸುವಂತೆ ಬೆಳೆಗಾರರ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿತ್ತು. ಅಕ್ಟೋಬರ್‌ 1ರಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆಯ ಅಡಕೆ ಹಾಗೂ ಸಾಂಬಾರ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರು ಅಧೀನ ಕಾರ್ಯದರ್ಶಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಕೋರಿದ್ದಾರೆ. ಅಡಕೆ ಮೇಲಿನ ತೇವಾಂಶ ಪ್ರಮಾಣ ಶೇ.7 ಇದ್ದರೆ, ಅಡಕೆ ಮಾರಾಟಕ್ಕೆ ತೊಂದರೆಯಾಗುತ್ತಿದೆ. ಗುಣಮಟ್ಟದ ಅಡಕೆಯಾದರೂ ಈಗ ತೇವಾಂಶದ ಪ್ರಮಾಣ ಶೇ.10 ರಿಂದ 11ರಷ್ಟಿದೆ. ಹಾಗಾಗಿ ತೇವಾಂಶದ ಪ್ರಮಾಣವನ್ನು ಶೇ.11ರ ಮಾನದಂಡಕ್ಕೆ ಪರಿಷ್ಕರಿಸುವಂತೆ ಕೇಂದ್ರ ಕೃಷಿ ಮಂತ್ರಾಲಯಕ್ಕೆ ಮನವಿ ಸಲ್ಲಿಸಲಾಗಿದೆ.

-ಕಿಶೋರ್‌ ಕುಮಾರ್‌ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೋ, ಮಂಗಳೂರು

----------------------