ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಶಾಸಕರಾದ ಲಕ್ಷ್ಮಣ ಸವದಿಯವರ ವಿಶೇಷ ಪ್ರಯತ್ನದಿಂದ ನಮ್ಮ ಸಂಘಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯಗಳು ದೊರೆತಿದೆ. ಅದಕ್ಕಾಗಿ ಈ ಸಭೆಯ ಮೂಲಕ ಅವರನ್ನು ಅಭಿನಂಧಿಸುವುದಾಗಿ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಸಿದ್ದಪ್ಪ ಕನಾಳೆ ಹೇಳಿದರು.ತಾಲೂಕಿನ ಮೋಳೆ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 69ನೇ ವರ್ಷದ ವಾರ್ಷಿಕ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, 2024-25ನೇ ಸಾಲಿನಲ್ಲಿ ಸಂಘಕ್ಕೆ ₹28.26 ಲಕ್ಷ ನಿವ್ವಳ ಲಾಭವಾಗಿದೆ ಎಂದರು. ಕಳೆದ ಹಲವಾರು ವರ್ಷಗಳಿಂದ ಶಾಸಕ ಲಕ್ಷ್ಮಣ ಸವದಿಯವರು ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಪ್ರತಿವರ್ಷ ರೈತರ ಸಾಲವನ್ನು ತುಂಬಿ ಅನುಕೂಲ ಮಾಡಿಕೊಟ್ಟಿದ್ದಾರೆ ಅದಕ್ಕಾಗಿ ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆಯವರಿಗೆ ಅಭಿನಂಧನೆಗಳನ್ನು ಸಲ್ಲಿಸುವುದಾಗಿ ಹೇಳಿದ ಅವರು ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳು ರೈತರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿವೆ ಎಂದರು.ಮುಖ್ಯಕಾರ್ಯನಿರ್ವಾಹಕ ಸಿದ್ದಪ್ಪ ತೆಲಸಂಗ ಮಾತನಾಡಿ, ಸಂಘದಲ್ಲಿ 3087 ಸದಸ್ಯರಿದ್ದು, ₹1.59 ಕೋಟಿ ಶೇರ ಬಂಡವಾಳವಿದೆ. ₹1 ಕೋಟಿ ಠೇವು ಸಂಗ್ರಹಿಸಿದೆ. ₹9.7 ಕೋಟಿ ರೈತರಿಗೆ ಸಾಲ ವಿತರಿಸಲಾಗಿದೆ. 65 ವರ್ಷ ಮೆಲ್ಪಟ್ಟವರಿಗೆ ಅಫಘಾತ ವಿಮೆ ಯೋಜನೆ, ಆರೋಗ್ಯ ವಿಮೆ ಸೇರಿದಂತೆ ಸಂಘದ ವತಿಯಿಂದ ಹಲವು ಯೋಜನೆಗಳಿವೆ. ಶೇರುದಾರ ಸದಸ್ಯರು ಇದರ ಲಾಭ ಪಡೆದುಕೊಳ್ಳಬೇಕು. ಸರ್ಕಾರ ಶೂನ್ಯ ದರದಲ್ಲಿ ಸಾಲ ವಿತರಿಸುತ್ತಿದ್ದರೂ ಇನ್ನೂ ಕೂಡ ಹಲವಾರು ರೈತರು ಕಟಬಾಕಿ ಹೊಂದಿದ್ದಾರೆ. ಅವರು ಕೂಡ ಸಾಲವನ್ನು ತುಂಬಿ ಹೆಚ್ಚಿನ ಸಾಲ ಪಡೆಯುವಂತೆ ಮನವಿ ಮಾಡಿದರು. ಸಂಘದ ಸದಸ್ಯರು 5 ಸಾಮಾನ್ಯ ಸಭೆಗಳ ಪೈಕಿ ಕನಿಷ್ಠ ಎರಡು ಸಭೆಗೆ ಹಾಜರಾಗಿರಬೇಕು. ಸಂಘದ ಕನಿಷ್ಠ ವ್ಯವಹಾರ ಮಾಡದಿದ್ದರೇ ಅಂತಹ ಸದಸ್ಯನು ಸದಸ್ಯತ್ವಕ್ಕೆ ಅನರ್ಹರಾಗುತ್ತಾರೆ. ಸಾಲದ ಮರುಪಾವರಿ ಜುಲೈ, ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ಇರುತ್ತದೆ. ರೈತರು ಗೊಬ್ಬರ ಖರೀದಿಗೆ ಆಧಾರ ಕಾರ್ಡ್, ಕಡ್ಡಾಯವಾಗಿ ತರಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಪ್ಪ ಕನಾಳೆ ವಹಿಸಿದ್ದರು, ಅಧ್ಯಕ್ಷ ಶ್ರೀಶೈಲ ಹಳ್ಳೋಳ್ಳಿ, ಉಪಾಧ್ಯಕ್ಷ ರಾಮದೇವ ಕಾಂಬಳೆ, ಆಡಳಿತ ಮಂಡಳಿಯ ಸದಸ್ಯರಾದ ಮದಪ್ಪ ಸೊಂದಕರ, ರಾಜಕುಮಾರ ಹುದ್ದಾರ, ನಾಯಕು ಮಲ್ಲುಖಾನ, ಶಿವಾಜಿ ರೂಪನವರ, ಶಶಿಕಾಂತ ಮುಂಜೆ, ಶ್ರೀನಿವಾಸ ಹುಂಡೇಕರ, ಶಿಲ್ಪಾ ಮಂಗಸೂಳಿ, ಲತಾ ಕಟ್ಟಿಕರ, ಅಶೋಕ ಕಡಕೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಮುಖ್ಯಕಾರ್ಯನಿರ್ವಾಹಕ ಸಿದ್ದಪ್ಪ ತೆಲಸಂಗ ಪ್ರಾರಂಭದಲ್ಲಿ ಸ್ವಾಗತಿಸಿ, ವಂದಿಸಿದರು.