ಕನ್ನಡಪ್ರಭ ವಾರ್ತೆ ಬೆಂಗಳೂರು
ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸದಂತೆ ಹಾಗೂ ಪರಿಶಿಷ್ಟ ಜಾತಿ ಜನರಿಗಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಜಾತಿಗೆ ಸೇರಿದ ಸಚಿವರು, ಕಾಂಗ್ರೆಸ್ ಶಾಸಕರು ಮನವಿ ಮಾಡಿದ್ದಾರೆ.ಸೋಮವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಚಿವರು ಹಾಗೂ ಶಾಸಕರು ಭಾಗವಹಿಸಿ ವಿವಿಧ ಬೇಡಿಕೆ ಸಲ್ಲಿಸಿದರು.
ಎಸ್ಸಿಪಿ-ಟಿಎಸ್ಪಿ ಹಣವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಬಳಕೆ ಮಾಡಬೇಕೆಂಬ ನಿಯಮವಿದೆ. ಅದನ್ನು ವರ್ಗಾವಣೆ ಮಾಡಬಾರದೆಂಬ ಕಾರಣಕ್ಕೆ ಸೆಕ್ಷನ್ 7ಡಿ ತೆಗೆದು ಹಾಕಲಾಗಿದೆ. ಹೀಗಿದ್ದರೂ ಗ್ಯಾರಂಟಿಗಳಿಗೆ ಎಸ್ಸಿಪಿ, ಟಿಎಸ್‌ಪಿ ಹಣ ಬಳಕೆ ಮಾಡಲಾಗುತ್ತಿದೆ. 42,000 ಕೋಟಿ ರು. ಮೀಸಲಿಟ್ಟಿದ್ದರೂ ಎಸ್ಸಿ,ಎಸ್ಟಿ ಕಾರ್ಯಕ್ರಮಗಳಿಗೆ ಸೂಕ್ತ ಅನುದಾನ ದೊರಕುತ್ತಿಲ್ಲ. ಇದಕ್ಕೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು ಎಂದು ತಿಳಿದುಬಂದಿದೆ.ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಮನವಿ-ಪರಂ:
ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪರಿಶಿಷ್ಟರಿಗೆ ಬಜೆಟ್‌ನಲ್ಲಿ ಹಣ ಮೀಸಲಿಡುವ ಎಸ್ಸಿಪಿ-ಟಿಎಸ್‌ಪಿ ಕಾಯಿದೆಯನ್ನು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ತರಲಾಗಿತ್ತು. ಇದರಡಿ ದಲಿತರಿಗೆ ಅನುಕೂಲ ಮಾಡಲಾಗುತ್ತಿದೆ. ಮುಂಬರುವ ಬಜೆಟ್‌ನಲ್ಲಿ ಖಾಲಿ ಹುದ್ದೆ ಭರ್ತಿ, ಬ್ಯಾಕ್‌ಲಾಗ್ ಹುದ್ದೆ ತುಂಬುವಂತೆ ಮನವಿ ಮಾಡಿದ್ದೇವೆ. ಕೈಗಾರಿಕೆ ಭೂ ಮಂಜೂರಾತಿ, ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿ ಮತ್ತಿತರ ವಿಚಾರಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಿದರು.
ದಲಿತ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ರಾಹುಲ್‌ಗಾಂಧಿ ಭೇಟಿ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಅಂಥ ಅಗತ್ಯ ಇಲ್ಲ. ನಮ್ಮ ಮುಖ್ಯಮಂತ್ರಿ ಅವರು ಸಮುದಾಯಕ್ಕೆ ಕೊಡಬೇಕಾದದ್ದನ್ನು ಕೊಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಎಸ್ಸಿಪಿ-ಟಿಎಸ್‌ಪಿ ಹಣ ಸಮರ್ಪಕ ಉಪಯೋಗ ಆಗುವ ಕುರಿತು ಚರ್ಚಿಸಿದ್ದೇವೆ. ಸಮುದಾಯಕ್ಕೆ ಮೀಸಲಿಟ್ಟಿರುವ ಹಣವನ್ನು ಸಮುದಾಯಕ್ಕೆ ಮಾತ್ರ ವೆಚ್ಚ ಮಾಡಲು ಮನವಿ ಮಾಡಿದ್ದೇವೆ ಎಂದರು.ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರಾದ ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಆರ್.ಬಿ. ತಿಮ್ಮಾಪುರ ಸೇರಿದಂತೆ ಹಲವರು ಹಾಜರಿದ್ದರು.
