ಬೀದಿನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಹೆಸರಿನಲ್ಲಿ ಹಣ ಪೋಲು..!

| Published : Mar 12 2024, 02:01 AM IST

ಬೀದಿನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಹೆಸರಿನಲ್ಲಿ ಹಣ ಪೋಲು..!
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವೇ ಪ್ರಕಾರ ನಗರದ ೩೫ ವಾರ್ಡ್‌ಗಳಲ್ಲಿರುವುದು ಕೇವಲ ೩ ಸಾವಿರ ಬೀದಿ ನಾಯಿಗಳಂತೆ. ಈ ಸರ್ವೇಯೇ ಅವೈಜ್ಞಾನಿಕ. ಒಂದೊಂದು ವಾರ್ಡ್‌ನಲ್ಲೇ ಸಾವಿರದಷ್ಟು ಬೀದಿ ನಾಯಿಗಳಿವೆ. ಇದರ ನಡುವೆ ಕಳೆದ ಬಾರಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಪ್ರತಿ ವಾರ್ಡ್‌ನಲ್ಲಿ ಕೇವಲ ೨೫ ನಾಯಿಗಳನ್ನು ಆಯ್ಕೆ ಮಾಡಿಕೊಂಡು ನಡೆಸಿದರು. ಹೀಗಾದರೆ ಏನು ಪ್ರಯೋಜನ.

ಕನ್ನಡಪ್ರಭ ವಾರ್ತೆ ಮಂಡ್ಯಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಹೆಸರಿನಲ್ಲಿ ಸಾರ್ವಜನಿಕರ ಹಣ ಪೋಲಾಗುತ್ತಿದೆಯೇ ಹೊರತು ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಬಾರದಂತಾಗಿದೆ ಎಂದು ಸದಸ್ಯ ನಾಗೇಶ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ನಗರಸಭೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮಾತನಾಡಿದ ಅವರು, ಸರ್ವೇ ಪ್ರಕಾರ ನಗರದ ೩೫ ವಾರ್ಡ್‌ಗಳಲ್ಲಿರುವುದು ಕೇವಲ ೩ ಸಾವಿರ ಬೀದಿ ನಾಯಿಗಳಂತೆ. ಈ ಸರ್ವೇಯೇ ಅವೈಜ್ಞಾನಿಕ. ಒಂದೊಂದು ವಾರ್ಡ್‌ನಲ್ಲೇ ಸಾವಿರದಷ್ಟು ಬೀದಿ ನಾಯಿಗಳಿವೆ. ಇದರ ನಡುವೆ ಕಳೆದ ಬಾರಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಪ್ರತಿ ವಾರ್ಡ್‌ನಲ್ಲಿ ಕೇವಲ ೨೫ ನಾಯಿಗಳನ್ನು ಆಯ್ಕೆ ಮಾಡಿಕೊಂಡು ನಡೆಸಿದರು. ಹೀಗಾದರೆ ಏನು ಪ್ರಯೋಜನ. ಸಾರ್ವಜನಿಕರ ಹಣ ಖರ್ಚಾಗುವುದೇ ವಿನಃ ಬೀದಿ ನಾಯಿಗಳ ನಿಯಂತ್ರಣ ದೂರದ ಮಾತಾಗಿದೆ. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವುದಾದರೆ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು ಮಾಡಬೇಕು. ಇಲ್ಲದಿದ್ದರೆ ಮಾಡುವುದೇ ಬೇಡ ಎಂದರು.

ಸದಸ್ಯ ಶ್ರೀಧರ್ ಮಾತನಾಡಿ, ನಾವು ನಗರಸಭೆ ಸದಸ್ಯರು ಹೌದೋ, ಅಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಏಕೆಂದರೆ, ನಮ್ಮ ವಾರ್ಡ್‌ನಲ್ಲಿ ನಡೆಯುವ ಕಾಮಗಾರಿಗಳು ನಮ್ಮ ಗಮನಕ್ಕೇ ಬರುತ್ತಿಲ್ಲ. ನಮ್ಮನ್ನು ಅಧಿಕಾರಿಗಳೂ ಆಹ್ವಾನಿಸುತ್ತಿಲ್ಲ. ಜನರೆದುರು ಅವಮಾನಕ್ಕೊಳಗಾಗುತ್ತಿದ್ದೇವೆ. ನಮ್ಮನ್ನು ಕರೆಯದಿರುವುದಕ್ಕೆ ಕಾರಣವೇನು ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು.

ಆಗ ಜಿಲ್ಲಾಧಿಕಾರಿಗಳು ಶಿಷ್ಠಾಚಾರ ಪಾಲನೆಯಾಗದಿರುವುದಕ್ಕೆ ಏನು ಕಾರಣ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೇ, ಇಂತಹ ಸಣ್ಣಪುಟ್ಟ ವಿಚಾರಗಳು ನನ್ನವರೆಗೆ ಬರಬಾರದು. ಇದರಲ್ಲಿ ನೀವು ಜವಾಬ್ದಾರಿ ತೆಗೆದುಕೊಂಡು ಕಾರ್ಯನಿರ್ವಹಿಸುವಂತೆ ಆಯುಕ್ತ ಆರ್.ಮಂಜುನಾಥ್ ಅವರಿಗೆ ಸೂಚಿಸಿದರು.