ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಾಪೆಡ್ ಮೂಲಕ ಕೊಬ್ಬರಿ ಮಾರಿದ ರೈತರಿಗೆ ಹಣ ನೀಡಲು ವಿಳಂಬವಾಗಿದ್ದನ್ನು ಖಂಡಿಸಿ, ನಗರದ ಎಪಿಎಂಸಿ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.ರೈತ ಸಂಘ ಜಿಲ್ಲಾಧ್ಯಕ್ಷ ದಯಾನಂದ್ ಮಾತನಾಡಿ, ಸುಮಾರು 3 ರಿಂದ 4 ತಿಂಗಳ ಹಿಂದೆ ರೈತರು ನಾಪೆಡ್ ಮೂಲಕ ಬಿಟ್ಟಂತಹ ಕೊಬ್ಬರಿ ಹಣ ಇನ್ನೂ ಸರಿಯಾಗಿ ರೈತರಿಗೆ ತಲುಪಿರುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಅತೀ ಶೀಘ್ರದಲ್ಲಿ ಹಣವನ್ನು ರೈತರಿಗೆ ನೀಡಬೇಕಾಗಿದೆ ಹಾಗೂ ಹಿಂಗಾರು ಮಳೆ ಬಿದ್ದ ಕಾರಣ ಬಿತ್ತನೆ ಬೀಜ, ರಸಗೊಬ್ಬರ, ಉಳಿಮೆಗೋಸ್ಕರ ಹಣವಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಹಣ ಬಿಡುಗಡೆಗೊಳಿಸುವಂತೆ ಪೆಡರೇಷನ್ ಎಂ.ಡಿ (ಪಿಳ್ಳೇಗೌಡ) ಹಾಗೂ ಹಾಸನ ಎಂ.ಡಿ (ಮಂಜುನಾಥ. ಎಂ) ರವರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲವೆಂದು ಕೇಂದ್ರ ಸರ್ಕಾರದ ಮೇಲೆ ಹಾಕುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಆದ್ದರಿಂದ ಕರ್ನಾಟಕ ರಾಜ್ಯ ರೈತ ಸಂಘದ ಎಲ್ಲಾ ಪದಾಧಿಕಾರಿಗಳು ಒಂದು ವಾರ ಗಡುವು ಕೊಟ್ಟಿದ್ದೇವೆ, ವಾರದೊಳಗಡೆ ಹಣ ಬಿಡುಗಡೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪೆಡರೇಷನ್ ಕಚೇರಿಯ ಮಂದೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ರೈತ ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ ಮಾತನಾಡಿ, ರಾಜ್ಯದ ರಾಜಕಾರಣಿಗಳು ರೈತರ ಸಮಸ್ಯೆಗಳನ್ನು ಆಲಿಸುವ ಬದಲು ಪಾದಯಾತ್ರೆ, ಜನಾಂದೋಲನಗಳಲ್ಲಿ ತೊಡಗಿದ್ದಾರೆ. ಜನಪ್ರತಿನಿಧಿಗಳು ಇದನ್ನೆಲ್ಲ ಬಿಟ್ಟು ರೈತರ ಕಷ್ಟಗಳನ್ನು ಆದಷ್ಟು ಬೇಗ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ರೈತಸಂಘದಿಂದ ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ನಂತರ ಗ್ರೇಡ್ - 2 ತಹಸೀಲ್ದಾರ್ ಪಾಲಾಕ್ಷ ಹಾಗೂ ಮಾರ್ಕೆಟ್ ಕಾರ್ಯದರ್ಶಿ ಸಿ .ಎಲ್. ಸಿದ್ದರಂಗ ಸ್ವಾಮಿ ಅವರಿಗೆ ಮನವಿ ಪತ್ರ ನೀಡಲಾಯಿತು. ಮನವಿ ಪತ್ರ ಸ್ವೀಕರಿಸಿ ಉಪ ತಹಸೀಲ್ದಾರ್ ಪಾಲಾಕ್ಷ ಮಾತನಾಡಿ, ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದು ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಮಹಿಳಾ ಅಧ್ಯಕ್ಷೆ ವಿನುತಾ, ಜಿಲ್ಲಾ ಮಹಿಳಾ ಘಟಕ ಉಪಾಧ್ಯಕ್ಷೆ ಜಯಶೀಲ, ತೊಳಲ್ಕೆರೆ ಗ್ರಾಪಂ ಸದಸ್ಯ ವೀರಣ್ಣ , ಬೆಳಗುಂಬ ಗ್ರಾಪಂ ಸದಸ್ಯ ಚಂದ್ರಶೇಖರ್ ಕೊಟ್ರೇಶ, ಲಿಂಗರಾಜು, ಶಿವಕುಮಾರ್, ಮಂಜುನಾಥ್, ಸಂತೋಷ್ ಹಾಗೂ ಇತರರು ಉಪಸ್ಥಿತರಿದ್ದರು.