ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಬಳಕೆಯಾಗದೇ ಉಳಿದಿರುವ ಅನುದಾನವನ್ನು ಬಳಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಹೋಬಳಿ ಮಟ್ಟದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾರ್ಚ್ ತಿಂಗಳಲ್ಲಿ ಸಮಾವೇಶ ಆಯೋಜನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಸಲು ಸೂಚಿಸಲಾಗಿದೆ.ಸಮಾವೇಶ ಆಯೋಜನೆ ಮಾಡಲು ಸಭೆಗೆ ಹಾಜರಾಗುವ ಸಾರ್ವಜನಿಕರಿಗೆ ಊಟ, ವಸತಿ, ಪೆಂಡಾಲು, ಇತ್ಯಾದಿ ವೆಚ್ಚಗಳಿಗಾಗಿ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಾಲೂಕು, ಹೋಬಳಿ ಮಟ್ಟದ ಕಾರ್ಯಕ್ರಮಗಳಿಗೆ ತಾಲೂಕಿಗೆ ಒಟ್ಟು ೫೦ ಲಕ್ಷ ರು., ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ೧ ಕೋಟಿ ರು., ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮಗಳಿಗೆ ೨ ಕೋಟಿ ರು. ಅನುದಾನ ಬಳಸಿಕೊಳ್ಳುವಂತೆ ಕಂದಾಯ ಇಲಾಖೆಯ ಪದನಿಮಿತ್ತ ಕಾರ್ಯದರ್ಶಿ ಡಾ.ಬಿ.ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.ಸಮಾವೇಶಕ್ಕೆ ಬಿಡುಗಡೆ ಮಾಡುವ ಅನುದಾನವನ್ನು ಜಿಲ್ಲಾಧಿಕಾರಿಗಳ ಮಿಸಲೇನಿಯಸ್ ಪಿ.ಡಿ.ಖಾತೆಯಲ್ಲಿ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ ಅನುದಾನವನ್ನು ಹೊರತುಪಡಿಸಿ ಬಳಕೆಯಾಗದೇ ಉಳಿದಿರುವ ಇತರೆ ಅನುದಾನದಿಂದ ಬಳಸಿಕೊಳ್ಳಲು ಆರ್ಥಿಕ ಇಲಾಖೆ ಸಮ್ಮತಿ ಸೂಚಿಸಿದೆ ಎಂದು ಹೇಳಿದ್ದಾರೆ.ಮಿಸಲೇನಿಯಸ್ ಪಿಡಿ ಖಾತೆ ಯಾವುದು..?ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದಿಂದ ಜಿಲ್ಲಾಧಿಕಾರಿಗಳ ಮಿಸಲೇನಿಯಸ್ ಪಿ.ಡಿ.ಖಾತೆಗೆ ಹಣ ಬಿಡುಗಡೆ ಮಾಡುತ್ತದೆ. ಈ ಖಾತೆಯಲ್ಲಿ ಯೋಜನೆಗಳಿಗೆ ಬಿಡುಗಡೆಯಾದ ಅನುದಾನವನ್ನು ಖರ್ಚು ಮಾಡದೆ, ಬಳಕೆಯಾಗದೆ ಉಳಿದಿರುವ ಅನುದಾನವನ್ನು ಗ್ಯಾರಂಟಿ ಸಮಾವೇಶ ಆಯೋಜನೆಗೆ ಬಳಸಿಕೊಳ್ಳುವುದು.
ಬರದಲ್ಲೂ ದುಂದುವೆಚ್ಚ ಬೇಕೆ?: ಸಿ.ಎಸ್.ಪುಟ್ಟರಾಜುಬರಗಾಲದಲ್ಲಿ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸದಂತೆ ಗ್ಯಾರಂಟಿ ಸಮಾವೇಶದ ಹೆಸರಿನಲ್ಲಿ ಜನರ ಕೋಟ್ಯಂತರ ರು. ತೆರಿಗೆ ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ದುರಂತ. ಗ್ಯಾರಂಟಿ ಸಮಾವೇಶಗಳಿಂದ ಜನಸಾಮಾನ್ಯರಿಗೆ ಆಗುವ ಪ್ರಯೋಜನವಾದರೂ ಏನು?, ಸಾರ್ವಜನಿಕ ಹಣವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಕುತಂತ್ರ ಇದರ ಹಿಂದೆ ಅಡಗಿರುವಂತೆ ಕಾಣುತ್ತಿದೆ. ರಾಜ್ಯದಲ್ಲಿ ಜಲಕ್ಷಾಮ ಎದುರಾಗಿರುವ ಸಮಯದಲ್ಲಿ ಕೋಟ್ಯಂತರ ರು. ಹಣವನ್ನು ಸಮಾವೇಶಗಳಿಗೆ ಖರ್ಚು ಮಾಡದೆ ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿದರೆ ಜನರ ದಾಹವನ್ನಾದರೂ ಇಂಗಿಸಿದಂತಾಗುವುದು. ಜನರ ಹಣದಲ್ಲಿ ಸಮಾವೇಶ ನಡೆಸುತ್ತಿರುವ ಇದೊಂದು ಜನವಿರೋಧಿ, ರೈತ ವಿರೋಧಿ ಸರ್ಕಾರ.
- ಸಿ.ಎಸ್.ಪುಟ್ಟರಾಜು, ಮಾಜಿ ಸಚಿವರು