ಅಭ್ಯರ್ಥಿಗಳ ಖರ್ಚು-ವೆಚ್ಚಗಳ ಮೇಲೆ ನಿಗಾ ವಹಿಸಿ: ಮುರಳಿಕುಮಾರ್

| Published : Apr 09 2024, 12:49 AM IST

ಸಾರಾಂಶ

ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಕಾರ್ಯಾಚರಣೆ ವೇಳೆ ಇದುವರೆಗೂ 439 ಪ್ರಕರಣಗಳು ದಾಖಲಾಗಿದ್ದು, 1,47,46,920 ರು.ಮೌಲ್ಯದ 44033 ಲೀ ಭಾರತೀಯ ಮದ್ಯ ಮತ್ತು 205 ಲೀ. ಬಿಯರ್ ಹಾಗೂ 70.00 ಲಕ್ಷ ರು.ಬೆಲೆಯ 40 ವಿವಿಧ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು, ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ವೆಚ್ಚ ಮಾಡುವ ಹಣದ ಬಗ್ಗೆ ಪ್ರತಿ ದಿನ ನಿಗಾವಹಿಸಿ, ಸಭೆ, ಸಮಾರಂಭ, ವಾಹನಗಳ ತಪಾಸಣೆ, ಬ್ಯಾಂಕ್ ವಹಿವಾಟುಗಳ ಬಗ್ಗೆ ನಿಗಾ ವಹಿಸುವಂತೆ ವಿಶೇಷ ವೆಚ್ಚ ವೀಕ್ಷಕ ಮುರಳಿ ಕುಮಾರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿಗಳು, ಆದಾಯ ತೆರಿಗೆ ಅಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ಎಫ್.ಎಸ್.ಟಿ, ಎಸ್.ಎಸ್.ಟಿ, ವಿವಿಟಿ ಹಾಗೂ ಇನ್ನಿತರ ತಂಡಗಳು ಜವಾಬ್ದಾರಿಯುತವಾಗಿ ಕೆಲಸ ನಡೆಸಿ ಅಭ್ಯರ್ಥಿಯು ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸುತ್ತಿರುವ ಬಗ್ಗೆ ನಿಗಾವಹಿಸುವಂತೆ ತಿಳಿಸಿದರು.

ಒಬ್ಬ ವ್ಯಕ್ತಿ ಅನೇಕ ಬ್ಯಾಂಕ್ ಖಾತೆಗೆ ಹಣ ತುಂಬುವುದು, ಅತಿ ಹೆಚ್ಚು ಬ್ಯಾಂಕ್ ವಹಿವಾಟು ನಡೆಸುವ ವ್ಯಕ್ತಿ ಮತ್ತು ಬ್ಯಾಂಕ್‌ನಲ್ಲಿ ಅನೇಕ ಬಾರಿ ಹಣ ಡ್ರಾ ಮಾಡುವವರ ಮೇಲೆ ನಿಗಾ ವಹಿಸಬೇಕು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬ್ಯಾಂಕ್ ವಹಿವಾಟು ಮಾಡುವವರ ವಿವರಗಳನ್ನು ಪರಿಶೀಲಿಸಬೇಕು ಹಾಗೂ ಇವೆಲ್ಲವುಗಳ ವಿವರಗಳನ್ನು ವೆಚ್ಚ ವೀಕ್ಷಕರಿಗೆ ಸಲ್ಲಿಸಬೇಕು ಎಂದರು.

ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆಗೆ ನಾಕಬಂಧಿ ವ್ಯವಸ್ಥೆ ಸಮರ್ಪಕವಾಗಿದ್ದು, ಪ್ರತಿದಿನ ಓಡಾಡುವ ವಾಹನಗಳ ಮೇಲೆ ನಿಗಾ ಇಡಬೇಕು. ಅನುಮಾನ ಬಂದ ವಾಹನಗಳನ್ನು ವಶಕ್ಕೆ ಪಡೆದು ಪರಿಶೀಲಿಸಬೇಕು. ಈಗಾಗಲೇ ವಶಪಡಿಸಿಕೊಂಡಿರುವ ವಾಹನಗಳ ಮತ್ತು ಮಾಲೀಕರ ಹಿನ್ನೆಲೆಯಲ್ಲಿ ಪರಿಶೀಲಿಸಿ ಮಾಹಿತಿಯನ್ನು ನೀಡಬೇಕು ಎಂದರು.

ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಕಾರ್ಯಾಚರಣೆ ವೇಳೆ ಇದುವರೆಗೂ 439 ಪ್ರಕರಣಗಳು ದಾಖಲಾಗಿದ್ದು, 1,47,46,920 ರು.ಮೌಲ್ಯದ 44033 ಲೀ ಭಾರತೀಯ ಮದ್ಯ ಮತ್ತು 205 ಲೀ. ಬಿಯರ್ ಹಾಗೂ 70.00 ಲಕ್ಷ ರು.ಬೆಲೆಯ 40 ವಿವಿಧ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸಲಾಗಿದೆ. ವಶಪಡಿಸಿಕೊಂಡಿರುವ ವಾಹನಗಳ ಹಿನ್ನೆಲೆಯಲ್ಲಿ ಪರಿಶೀಲಿಸುವಂತೆ ತಿಳಿಸಿದರು.

11 ಅಬಕಾರಿ ಚೆಕ್ ಪೋಸ್ಟ್ ಗಳು, 6 ಮೊಬೈಲ್ ತಪಾಸಣಾ ತಂಡ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ 2 ಚೆಕ್‌ಪೋಸ್ಟ್ ಗಳು ಕಾರ್ಯ ನಿರ್ವಹಿಸುತ್ತಿವೆ. ಕಂಟ್ರೋಲ್ ರೂಂ ನಲ್ಲಿರುವ ಸಿಬ್ಬಂದಿ ದೂರುಗಳು ದಾಖಲಾಗುವ ಬಗ್ಗೆ ಹಾಗೂ ಸಿಸಿಟಿವಿ ಅಳವಡಿಸಿರುವ ಕಡೆ ವಾಹನಗಳ ಚಲನವಲನಗಳ ಬಗ್ಗೆ ಮಾಹಿತಿಯನ್ನು ವೆಚ್ಚ ವೀಕ್ಷಕರಿಗೆ ನೀಡಬೇಕು ಎಂದು ಮುರಳಿ ಕುಮಾರ್ ಹೇಳಿದರು.

ವೆಚ್ಚ ವೀಕ್ಷಕರಾದ ಜಯರಾಘವನ್, ಜೀತೇಂದ್ರ ಸಿಂಗ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಬಿನೋಯ್ ಉಪಸ್ಥಿತರಿದ್ದರು.

ತಪಾಸಣೆ ವೇಳೆ 95.25 ಲೀ ಮದ್ಯ ವಶಕ್ಕೆ:

ರಾಮನಗರ: ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು, ಏ. 8ರ ಬೆಳಿಗ್ಗೆ 9 ಗಂಟೆಯವರೆಗೆ ಒಟ್ಟು 95.25ಲೀ. ಮದ್ಯ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್ ಗಳಲ್ಲಿ ತಪಾಸಣೆ ವೇಳೆ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆ ಕಾರ್ಯಾಚರಣೆ ವೇಳೆ 33,209 ರು. ಮೌಲ್ಯದ 95.25 ಲೀ ಮದ್ಯ ಹಾಗೂ 3 ವಿವಿಧ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸಲಾಗಿದೆ.