ಮಿತಿಮೀರಿ ಭಕ್ತರು ಹರಿದು ಬಂದಿದ್ದರಿಂದ ಗವಿಮಠ ಆವರಣ ಭಕ್ತರಿಂದ ತುಂಬಿಹೋಗಿತ್ತು

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಭಾನುವಾರ ಲಕ್ಷ ಲಕ್ಷ ಭಕ್ತ ಸಾಗರ ಹರಿದು ಬಂದಿದ್ದರಿಂದ ದರ್ಶನಕ್ಕಾಗಿ ಕಿಲೋಮೀಟರ್‌ಗಟ್ಟಲೆ ಭಕ್ತರು ನಿಂತಿದ್ದರಿಂದ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳೇ ಎದ್ದು ಬಂದು ಭಕ್ತರಿಗೆ ದರ್ಶನ ನೀಡಿದರು.

ದರ್ಶನ ನೀಡಲು ಕುಳಿತಿದ್ದ ಶ್ರೀಗಳು ಸಿಸಿ ಕ್ಯಾಮೆರಾದಲ್ಲಿ ಗವಿಮಠದ ಸುತ್ತಲು, ಸಾಲದ್ದಕ್ಕೆ ಕೆರೆಯ ದಡದ ಸುತ್ತಲೂ ದರ್ಶನಕ್ಕಾಗಿ ಕಿಮೀಗಟ್ಟಲೇ ಸಾಲುಗಟ್ಟಿ ನಿಂತಿರುವುದು ಕಂಡು ಖುದ್ದು ತಾವೇ ಭಕ್ತರಿರುವ ಸ್ಥಳಕ್ಕೆ ಆಗಮಿಸಿ ಎಲ್ಲರಿಗೂ ಆಶೀರ್ವಾದ ಮಾಡಿದ್ದು, ಅಲ್ಲದೆ ಹೆಚ್ಚು ಭಕ್ತ ಸಂದಣಿ ಹತೋಟಿಗೆ ತರುವ ಪ್ರಯತ್ನ ಮಾಡಿದರು.

ಗವಿಸಿದ್ಧೇಶ್ವರ ರಥೋತ್ಸವ ಮುಗಿದು ಏಳನೇ ದಿನವಾದರೂ ಭಕ್ತಗಣ ಹರಿದುಬರುತ್ತಲೇ ಇದೆ. ಅದರಲ್ಲೂ ಭಾನುವಾರ ಮಿತಿಮೀರಿ ಭಕ್ತರು ಹರಿದು ಬಂದಿದ್ದರಿಂದ ಗವಿಮಠ ಆವರಣ ಭಕ್ತರಿಂದ ತುಂಬಿಹೋಗಿತ್ತು.

ದಾಸೋಹಕ್ಕೂ ಕಿಮೀಗಟ್ಟಲೆ ಸಾಲು: ಮಹಾದಾಸೋಹದಲ್ಲಿ ಪ್ರಸಾದ ಸ್ವೀಕಾರ ಮಾಡಲು ಬೆಳಗ್ಗೆ 6 ಗಂಟೆಯಿಂದ ಸರದಿಯಲ್ಲಿ ನಿಂತಿರುವುದು ಕಂಡು ಬಂದಿತು. ಮಧ್ಯಾಹ್ನದ ವೇಳೆಗೆ ಅದು ಹನುಮಂತನ ಬಾಲದಂತೆ ಬೆಳೆಯತೊಡಗಿತು. ಏಕಕಾಲಕ್ಕೆ ಹತ್ತರಿಂದ ಹದಿನೈದು ಸಾವಿರ ಭಕ್ತರು ಪ್ರಸಾದ ಸ್ವೀಕಾರ ಮಾಡುವುದಕ್ಕೆ ವ್ಯವಸ್ಥೆ ಇದ್ದರೂ ಸರದಿ ಸಂಜೆಯ ವೇಳೆಗೆ ಬೆಳೆಯುತ್ತಲೇ ಸಾಗಿತು.

ಹಾಸ್ಟೆಲ್‌ನಲ್ಲಿ ಅಡುಗೆ ಸಿದ್ಧ: ಮಹಾದಾಸೋಹದಲ್ಲಿ ಏಕಕಾಲಕ್ಕೆ ಲಕ್ಷ ಲಕ್ಷ ಭಕ್ತರು ಆಗಮಿಸಲಾರಂಭಿಸಿದ್ದರಿಂದ ಅನ್ನವನ್ನು ಅಷ್ಟು ವೇಗವಾಗಿ ಮಾಡುವುದು ದೊಡ್ಡ ಸವಾಲಾಯಿತು. ಮಹಾದಾಸೋಹದಲ್ಲಿ ಏಕಕಾಲದಲ್ಲಿ ಹತ್ತಾರು ಕ್ವಿಂಟಲ್ ಅನ್ನ ಮಾಡುವುದು ಸಾಲದಾಗಿದ್ದರಿಂದ ಗವಿಸಿದ್ಧೇಶ್ವರ ಮಠದಲ್ಲಿಯೂ ಅನ್ನ ಮಾಡಿ, ಮಹಾದಾಸೋಹಕ್ಕೆ ಕಳುಹಿಸಲಾಯಿತು. ಐದು ಸಾವಿರ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಅನ್ನ ಮಾಡುವ ವ್ಯವಸ್ಥೆ ಇರುವ ಹಾಸ್ಟೆಲ್ ಅಡುಗೆ ಮನೆಯನ್ನು ಸಹ ಮಹಾದಾಸೋಹಕ್ಕೆ ಬಳಕೆ ಮಾಡಿಕೊಳ್ಳಲಾಯಿತು. ಇದೇ ಮೊದಲ ಬಾರಿ ಮಹಾದಾಸೋಹದಲ್ಲಿನ ಅಡುಗೆಮನೆ ಸಾಲದೆ ಹಾಸ್ಟೆಲ್ ಅಡುಗೆ ಮನೆ ಬಳಕೆ ಮಾಡಲಾಗಿದೆ.

ಸಿಗುತ್ತಿಲ್ಲ ಲೆಕ್ಕ: ರಥೋತ್ಸವದಂದು ಬರೋಬ್ಬರಿ 114 ಕ್ವಿಂಟಲ್ ಅಕ್ಕಿ ಬಳಕೆಯಾಗಿದ್ದರೆ ಮಾರನೇ ದಿನ 130 ಕ್ವಿಂಟಲ್ ಅಕ್ಕಿ ಬಳಕೆಯಾಗಿದೆ. ಎರಡೇ ದಿನಗಳಲ್ಲಿ ಐದಾರು ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದಾರೆ. ಈಗ ಏಳನೇ ದಿನವೂ ಲಕ್ಷ ಲಕ್ಷ ಸಂಖ್ಯೆಯ ಭಕ್ತರು ಭಾನುವಾರ ಬಂದಿದ್ದರಿಂದ ಅಕ್ಕಿ ಲೆಕ್ಕವೇ ತಡರಾತ್ರಿಯಾದರೂ ಸಿಕ್ಕಿಲ್ಲ. ಮಹಾದಾಸೋಹದಲ್ಲಿ ಮತ್ತು ಹಾಸ್ಟೆಲ್‌ನಲ್ಲಿಯೂ ಅನ್ನ ಮಾಡಿದ್ದರಿಂದ ಇದೆಲ್ಲವನ್ನು ಲೆಕ್ಕ ಹಾಕುವುದಕ್ಕೂ ಮಹಾದಾಸೋಹದಲ್ಲಿ ಯಾರಿಗೂ ಸಮಯ ಇಲ್ಲದಂತಾಯಿತು.

ಟ್ರಾಫಿಕ್ ಜಾಮ್ : ಇದೇ ಮೊದಲ ಬಾರಿಗೆ ಕೊಪ್ಪಳ ಎಲ್ಲ ರಸ್ತೆಗಳಲ್ಲಿಯೂ ಟ್ರಾಫಿಕ್ ಜಾಮ್ ಆಗಿರುವುದು ಕಂಡು ಬಂದಿತು. ಬಸವೇಶ್ವರ ಸರ್ಕಲ್ ಮತ್ತು ಅಶೋಕ ವೃತ್ತ, ಗಡಿಯಾರ ಕಂಬ ಸೇರಿದಂತೆ ಗವಿಮಠಕ್ಕೆ ಬರಬಹುದಾದ ನಾಲ್ಕು ದಿಕ್ಕುಗಳಲ್ಲಿನ ರಸ್ತೆಗಳಲ್ಲಿಯೂ ಎರಡುಮೂರು ಕಿಮೀ ಟ್ರಾಫಿಕ್ ಜಾಮ್ ಆಗಿರುವುದು ಕಂಡು ಬಂದಿತು.

ತುಂಬಿ ತುಳುಕುತ್ತಿದ್ದ ಬಸ್ ನಿಲ್ದಾಣ: ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿಯೂ ಜನವೋ ಜನ ಇರುವುದು ಕಂಡು ಬಂದಿತು. ಬರುವ ಖಾಸಗಿ ವಾಹನ, ಟ್ಯಾಕ್ಸಿ ಸೇರಿದಂತೆ ನೂರಾರು ವಾಹನಗಳಲ್ಲಿ ಹತ್ತಿಕೊಳ್ಳಲು ಜನರು ಪರದಾಡುತ್ತಿರುವುದು ಕಂಡು ಬಂದಿತು. ಕೇಂದ್ರೀಯ ಬಸ್ ನಿಲ್ದಾಣ ಜನಜಂಗುಳಿಯಿಂದ ತುಂಬಿ ಹೋಗಿತ್ತು.

ಜಾತ್ರೆಯಲ್ಲಿ ಜನಸಾಗರ: ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ಜನಸಾಗರವೇ ಕಾಣುತ್ತಿತ್ತು. ಎಲ್ಲಿಯೂ ಕಾಲಿಡಲು ಜಾಗ ಇಲ್ಲದಂತೆ ಆಗಿರುವುದು ಕಂಡುಬಂದರೆ ರಥೋತ್ಸವ ಮೈದಾನ ತುಂಬಿ ತುಳುಕುತ್ತಿತ್ತು. ಇದೆಲ್ಲವನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುತ್ತಿರುವುದು ಕಂಡುಬಂದಿತು.

ದಾಖಲೆ ಜನಸಾಗರ: ರಥೋತ್ಸವ ನಂತರ ಇಷ್ಟೊಂದು ಜನಸಾಗರ ಸೇರಿದ್ದು ಇದೇ ಮೊದಲು ಎನ್ನಲಾಗಿದೆ. ಮಹಾದಾಸೋಹದಲ್ಲಿಯೇ ಬರೋಬ್ಬರಿ 2-3 ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದು, ಮೈದಾನದಲ್ಲಿಯೂ ಇಷ್ಟೇ ಸಂಖ್ಯೆಯಲ್ಲಿ ಏಳು ದಿನಗಳ ಬಳಿಕ ಸೇರಿದ್ದು ದಾಖಲೆಯೇ ಸರಿ ಎಂದೇ ಹೇಳಲಾಗುತ್ತದೆ.