ಗದಗ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಸಿದ್ಧತೆಗಳನ್ನು ಕೈಗೆತ್ತಿಕೊಂಡಿದ್ದು, ಕೃಷಿ ಇಲಾಖೆಯು ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲೆಯಲ್ಲಿ ಮೇ 19ರ ವರೆಗೆ ವಾಡಿಕೆಗಿಂತ ಅಧಿಕ 107.7 ಮಿಮೀ ಮಳೆಯಾಗಿದೆ(ವಾಡಿಕೆ 74.5 ಮಿ.ಮೀ). ಇದರಿಂದಾಗಿ ರೈತರು ಹೊಲಗಳನ್ನು ಹಸನು ಮಾಡಿಕೊಳ್ಳುತ್ತಿದ್ದು, ಬಿತ್ತನೆಗೆ ಬೇಕಾಗುವ ಬೀಜ ಹಾಗೂ ರಸಗೊಬ್ಬರಗಳನ್ನು ಸಂಗ್ರಹಿಸುತ್ತಿದ್ದಾರೆ.2026- 27ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 3.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಪ್ರಮುಖ ಬೆಳೆಗಳಾದ ಹೆಸರು 1.17 ಲಕ್ಷ ಹೆ. ಮೆಕ್ಕೆಜೋಳ 1.55 ಲಕ್ಷ ಹೆ. ಶೇಂಗಾ 15000 ಹೆ. ಹಾಗೂ ಸೂರ್ಯಕಾಂತಿ 8000 ಹೆ. ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಹಂಗಾಮಿಗೆ ಒಟ್ಟು 8 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಅವಶ್ಯಕತೆಯಿದ್ದು, ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಶೀಘ್ರದಲ್ಲೇ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುವುದು.
ಜಿಲ್ಲೆಯಲ್ಲಿ ಯಾವುದೇ ಬೀಜದ ಕೊರತೆ ಇಲ್ಲ. ಜಿಲ್ಲಾದ್ಯಂತ ರಸಗೊಬ್ಬರಗಳ ದಾಸ್ತಾನು ಪ್ರಕ್ರಿಯೆ ಚುರುಕುಗೊಂಡಿದ್ದು, ಒಟ್ಟಾರೆ 16194 ಮೆ. ಟನ್ ದಾಸ್ತಾನು ಲಭ್ಯವಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಯುರಿಯಾ, ಡಿಎಪಿ, ಎಂಒಪಿ ಸಂಯುಕ್ತ ರಸಗೊಬ್ಬರಗಳನ್ನು ವಿವಿಧ ಪರಿಕರ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಮಾಡಲಾಗಿದೆ. ಬಿತ್ತನೆ ಸಮಯದಲ್ಲಿ ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕೃತಕ ಕೊರತೆ ಸೃಷ್ಟಿಸುವ ಅಥವಾ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಕಾಳಸಂತೆ ದಂಧೆಯನ್ನು ತಡೆಯಲು ಕೃಷಿ ಅಧಿಕಾರಿಗಳು ಗೊಬ್ಬರ ಅಂಗಡಿಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ, ಮಣ್ಣಿನ ಆರೋಗ್ಯ ಕಾಪಾಡುವ ಉದ್ದೇಶದಿಂದ ಗೋಮಯ, ಕಂಪೋಸ್ಟ್ ಹಾಗೂ ಜೈವಿಕ ಗೊಬ್ಬರಗಳಂಥ ಸಾವಯವ ಗೊಬ್ಬರ ಬಳಕೆಗೂ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ಅತಿಯಾದ ರಸಗೊಬ್ಬರ ಬಳಕೆ ಮಣ್ಣಿನ ಫಲವತ್ತತೆ ಕುಗ್ಗಿಸುವುದರಿಂದ, ರೈತರು ಆರ್ಥಿಕ ಹೊರೆ ತಪ್ಪಿಸಲು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಆಧರಿಸಿಯೇ ಗೊಬ್ಬರ ಬಳಸಬೇಕು ಮತ್ತು ರಸೀದಿ ಪಡೆಯಬೇಕು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.
ಹೊಸ ನಿಯಮ: 2026- 27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಯೂರಿಯಾ ರಸಗೊಬ್ಬರವನ್ನು ಕಡ್ಡಾಯವಾಗಿ ಕೆ- ಕಿಸಾನ್ ತಂತ್ರಾಂಶದ ಮೂಲಕವೇ ವಿತರಿಸುವ ಹೊಸ ನಿಯಮ ಜಾರಿಗೆ ಬರಲಿದೆ. ರೈತರ ಜಮೀನಿನ ವಿಸ್ತೀರ್ಣ ಮತ್ತು ಅವರು ಬೆಳೆದ ಬೆಳೆಯ ಅನುಗುಣವಾಗಿ, ಕೇವಲ ರಸಗೊಬ್ಬರದ ಅವಶ್ಯಕತೆಗೆ ತಕ್ಕಂತೆ ಮಾತ್ರ ಈ ತಂತ್ರಾಂಶದ ಮೂಲಕ ಯೂರಿಯಾವನ್ನು ಪಾರದರ್ಶಕವಾಗಿ ವಿತರಿಸಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಚೇತನಾ ಪಾಟೀಲ ತಿಳಿಸಿದರು.