ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಸದ್ಯ ಮಳೆ ಅಬ್ಬರ ಮುಂದುವರೆದಿದ್ದು, ಹಲವಡೆ ಜೋರು ಮಳೆಯಾಗುತ್ತಿದೆ. ಆರಿದ್ರ ಮಳೆಯ ಆರ್ಭಟಕ್ಕೆ ಜಲಾಶಯಗಳಿಗೆ ಸಾವಿರಾರು ಕ್ಯುಸೆಕ್ ನೀರು ಹರಿದು ಬರುತ್ತಿದೆ.ಶುಕ್ರವಾರ ಭದ್ರಾ ಜಲಾಶಯಕ್ಕೆ 16,171 ಕ್ಯೂಸೆಕ್ ನೀರು ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟ 129. 6 ಅಡಿಗೆ (ಗರಿಷ್ಠ ಮಟ್ಟ : 186) ತಲುಪಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 137ಅಡಿ ಇತ್ತು.
ಈಗಾಗಲೇ ಭತಿಯಾಗಿರುವ ತುಂಗಾ ಜಲಾಶಯಕ್ಕೆ 34,477 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 37,104 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನೂ ಲಿಂಗನಮಕ್ಕಿ ಜಲಾಶಯಕ್ಕೆ 44,024 ಕ್ಯೂಸೆಕ್ ನೀರು ಹರಿದು ಬಂದಿದೆ. ಜಲಾಶಯದ ನೀರಿನ ಮಟ್ಟ 1763 (ಗರಿಷ್ಠ ಮಟ್ಟ : 1819) ಅಡಿ ತಲುಪಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1742. 65 ಅಡಿ ನೀರು ಸಂಗ್ರಹವಾಗಿತ್ತು.ಕಳೆದ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ 4. 80 ಮಿ.ಮೀ. ಭದ್ರಾವತಿ 4. 60, ತೀರ್ಥಹಳ್ಳಿ 10.10, ಸಾಗರ 20. 60, ಶಿಕಾರಿಪುರ 1.20, ಸೊರಬ 4.30 ಹಾಗೂ ಹೊಸನಗರದಲ್ಲಿ 12. 60 ಮಿ.ಮೀ ಮಳೆ ಸುರಿದಿದೆ.
ತುಂಗಾ ಜಲಾಶಯದಿಂದ ಜಲಾಶಯಕ್ಕೆ ಸಾವಿರಾರು ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿರುವ ಕಾರಣ ಶಿವಮೊಗ್ಗದ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಅಪಾಯ ಮಟ್ಟ ತಲುಪಿರುವುದರಿಂದ ನದಿ ಭಾಗದ ನಿವಾಸಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.ಜಲಾಶಯದಿಂದ ಸದ್ಯ 18 ಸಾವಿರ ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದ್ದು, ನಗರದ ಕೋರ್ಪಳಯ್ಯ ಛತ್ರ ಹಿಂಭಾಗದಲ್ಲಿರುವ ನದಿಯ ಮಂಟಪ ಬಹುತೇಕ ಮುಳುಗಿದೆ. ಹೀಗಾಗಿ ಮಹಾನಗರ ಪಾಲಿಕೆಯ ವತಿಯಿಂದ ಇಮಾಮ್ ಬಾಡಾ, ಕುಂಬಾರಗುಂಡಿ ಹಾಗೂ ಸೀಗೆಹಟ್ಟಿಯಲ್ಲಿ ನದಿಗಳಲ್ಲಿ ಹೆಚ್ಚು ನೀರು ಹರಿಸುವ ಮುನ್ನೆಚ್ಚರಿಕೆ ನೀಡಲಾಗಿದೆ.ರಸ್ತೆ ಸಂಪೂರ್ಣ ಕೆಸರುಗದ್ದೆ
ಆನಂದಪುರ: ಮಲಂದೂರು ಸಮೀಪ ಮಾಸ್ತಿ ಕಲ್ಲಿನಿಂದ ಕೈರಾ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಓಡಾಡಲು ಹರಸಾಹಸ ಪಡುವಂತಾಗಿದೆ.ಕೈರಾ ಗ್ರಾಮದಿಂದ ಆನಂದಪುರ ಪಟ್ಟಣಕ್ಕೆ ಸಂಪರ್ಕಿಸುವಂತಹ ಸಂಪರ್ಕ ರಸ್ತೆ ಇದಾಗಿದ್ದು, ಈ ಕೈರಾ ಗ್ರಾಮದಿಂದ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ವಿದ್ಯಾರ್ಥಿಗಳು ಓಡಾಡುವಂತಹ ಮುಖ್ಯ ರಸ್ತೆಯಾಗಿದ್ದು ವಿಪರೀತ ಮಳೆಯಿಂದ ರಸ್ತೆ ಸಂಪೂರ್ಣ ಕೆಸರುಗದ್ದೆಯಾಗಿದೆ. ಈ ಸಂಸ್ಥೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಬಿದ್ದಿರು ವಂತಹ ಘಟನೆಗಳು ನಡೆದಿವೆ. ಸ್ಥಳೀಯ ಗ್ರಾಮಾಡಳಿತ ರಸ್ತೆ ದುರಸ್ತಿಗೆ ಮುಂದಾಗುವಂತೆ ವಿದ್ಯಾರ್ಥಿಗಳು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆಸರುಗದ್ದೆಯಾದ ಆಟೋ ಕಾಂಪ್ಲೆಕ್ಸ್ ರಸ್ತೆಗಳುಶಿವಮೊಗ್ಗ: ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಆಟೋ ಕಾಂಪ್ಲೆಕ್ಸ್ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಸ್ಥಳೀಯರು ನಡೆದಾಡುವುದಕ್ಕೆ ಹಾಗೂ ವಾಹನ ಸಂಚರಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ನಗರ ಆಟೋ ಕಾಂಪ್ಲೆಕ್ಸ್ ರಸ್ತೆ 15 ವರ್ಷಗಳಿಂದ ಡಾಂಬರ್ ಆಗಲಿ ಕಾಂಕ್ರೀಟ್ ಆಗಲಿ ಕಂಡಿಲ್ಲ. ಹೀಗಾಗಿ ಸಣ್ಣ ಮಳೆ ಬಂದರೂ ಸಾಕು ಈ ರಸ್ತೆ ಸಣ್ಣ ಮಳೆ...ಯಾದರೆ ಸಾಕು ರಸ್ತೆಗಳು ರಾಡಿಯಾಗುತ್ತವೆ. ಸಾರ್ವಜನಿಕರು ಹಾಗೂ ಆಟೋ ಕಾಂಪ್ಲೆಕ್ಸ್ ನ ವರ್ತಕರು ಹಾಗೂ ಕಾರ್ಮಿಕರು ಸಂಚರಿಸುವುದು ದುಸ್ತರವಾಗಿದೆ.ಪ್ರತಿನಿತ್ಯ ಇಲ್ಲಿ ಸಂಚರಿಸಲು ಆಗದೆ ಕೆಸರುಗದ್ದೆಯಲ್ಲಿ ಬೀಳುವ ದುಸ್ಥಿತಿಗೆ ಬಂದು ನಿಂತಿದೆ. ಅನೇಕ ಬಾರಿ ಸಾರ್ವಜನಿಕರು ಇಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡ ಉದಾರಣೆಗಳಿವೆ. ಪ್ರತಿನಿತ್ಯ ಆಟೋ ಕಾರು ದ್ವಿಚಕ್ರ ವಾಹನಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುವ ದೃಶ್ಯ ಸಾಮಾನ್ಯವಾಗಿದೆ.ಅಲ್ಲದೆ, ಇಲ್ಲಿಯ ಕೆಟ್ಟ ರಸ್ತೆಯ ಪರಿಣಾಮವಾಗಿ ಆಟೋ ಮೊಬೈಲ್ ಶಾಪ್ ಹಾಗೂ ಕಾರ್ ಗ್ಯಾರೇಜ್ ಸೇರಿದಂತೆ ಇತರ ಶಾಪ್‌ಗಳಿಗೆ ಜನರು ಸಹ ಬರುತ್ತಿಲ್ಲ. ಯಾವುದೇ ವ್ಯಾಪಾರ ವಹಿವಾಟು ಇಲ್ಲದೆ ದಿನಾ ಬಾಗಿಲು ತೆಗೆದು, ನಷ್ಟ ಅನುಭವಿಸುತ್ತಾ, ಖಾಲಿ ಕೂರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಟೋಮೊಬೈಲ್ ಶಾಪ್ ಮಾಲೀಕರು ಆರೋಪಿಸಿದ್ದಾರೆ.
ಅನೇಕ ಬಾರಿ ಇಲ್ಲಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಸ್ಥಳೀಯರು ದೂರಿದ್ದಾರೆ, ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಇತ್ತ ಗಮನಹರಿಸಿ ರಸ್ತೆಗೆ ಡಾಂಬರೀಕರಣ ಅಥವಾ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.