ಕಳೆದ ಜೂನ್ ತಿಂಗಳಲ್ಲಿ ೧೫ ದಿನ ನಿರಂತರ ಮಳೆ ಸುರಿದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಮಳೆರಾಯ ಜುಲೈ ತಿಂಗಳು ಶುರುವಾಗುತ್ತಿದ್ದಂತೆಯೇ ಕೈಕೊಟ್ಟು ಮೌನವಾಗಿದ್ದು, ಈ ತಿಂಗಳು 15 ದಿನ ಕಳೆದರೂ ಮಳೆಯೇ ಬಿದ್ದಿಲ್ಲ.
ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಜುಲೈ ತಿಂಗಳು ಅರ್ಧ ಕಳೆದರೂ ತಾಲೂಕಿನಲ್ಲಿ ವರುಣ ಕೃಪೆ ತೋರಿಲ್ಲ. ಮಳೆಯ ತೀವ್ರ ಅಭಾವದಿಂದ ಮುಂಗಾರು ಹಂಗಾಮು ಸಂಪೂರ್ಣ ವೈಫಲ್ಯದತ್ತ ಸಾಗಿದ್ದು, ತಾಲೂಕಿಗೆ ಭೀಕರ ಬರ ಅಪ್ಪಳಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಕಳೆದ ಜೂನ್ ತಿಂಗಳಲ್ಲಿ ೧೫ ದಿನ ನಿರಂತರ ಮಳೆ ಸುರಿದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಮಳೆರಾಯ ಜುಲೈ ತಿಂಗಳು ಶುರುವಾಗುತ್ತಿದ್ದಂತೆಯೇ ಕೈಕೊಟ್ಟು ಮೌನವಾಗಿದ್ದು, ಈ ತಿಂಗಳು 15 ದಿನ ಕಳೆದರೂ ಮಳೆಯೇ ಬಿದ್ದಿಲ್ಲ. ತಾಲೂಕಿನ ಹೊಸಳ್ಳಿ, ಕಡಕೋಳ, ಜಲ್ಲಿಗೇರಿ, ಕುಸ್ಲಾಪೂರ, ವರವಿ, ಛಬ್ಬಿ, ದೇವಿಹಾಳ, ರಣತೂರ, ಬೆಳ್ಳಟ್ಟಿ, ಕೊಂಚಿಗೇರಿ, ನಾಗರಮಡುವು ಸೇರಿದಂತೆ ಬಹುತೇಕ ಎಲ್ಲ ಗ್ರಾಮಗಳ ರೈತರು ಜೂನ್ ತಿಂಗಳಿನಲ್ಲಿ ಸುರಿದ ಮಳೆಗೆ ಸಂತಸಪಟ್ಟು ಬಿತ್ತನೆ ಮಾಡಿದ್ದು, ಸಧ್ಯ ಒಮ್ಮೆಲೆ ಮಳೆ ಕೈಕೊಟ್ಟಿದ್ದರಿಂದ ರೈತರು ಎಲ್ಲ ಬೆಳೆಯನ್ನು ಹರಗುತ್ತಿದ್ದಾರೆ.ಹತ್ತಿ, ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ, ಹೆಸರು, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಮಳೆಯ ಕೊರತೆಯಿಂದ ಹಾನಿಗೊಳಗಾಗುತ್ತಿವೆ. ನೀರಾವರಿ ಸೌಲಭ್ಯವಿಲ್ಲದ ಒಣಭೂಮಿ ರೈತರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದು, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ.ಕೆಲವೆಡೆ ರೈತರು ಬೆಳೆ ಉಳಿಸಿಕೊಳ್ಳಲು ಖಾಸಗಿ ಕೊಳವೆಬಾವಿ ಮತ್ತು ಬೋರ್‌ವೆಲ್‌ಗಳ ನೀರನ್ನು ಬಳಸಲು ಮುಂದಾಗಿದ್ದಾರೆ. ಆದರೆ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರು ಕೂಡ ಸಮರ್ಪಕವಾಗಿ ದೊರೆಯುತ್ತಿಲ್ಲ. ವಿದ್ಯುತ್ ಪೂರೈಕೆಯ ಸಮಸ್ಯೆಯಿಂದ ನೀರಾವರಿ ಮಾಡುವುದು ಮತ್ತಷ್ಟು ಕಷ್ಟಕರವಾಗಿದೆ.ರೈತರ ಪ್ರಮುಖ ಬೇಡಿಕೆಗಳು: ಬರಪೀಡಿತ ತಾಲೂಕುಗಳನ್ನು ತಕ್ಷಣ ಘೋಷಿಸಬೇಕು. ಬೆಳೆಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಬೆಳೆವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು. ರೈತರ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು. ಬಡ್ಡಿರಹಿತ ಅಥವಾ ಕಡಿಮೆ ಬಡ್ಡಿದರದಲ್ಲಿ ಹೊಸ ಕೃಷಿ ಸಾಲ ನೀಡಬೇಕು. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
೧೦೩೫೫ ಹೆಕ್ಟೇರ್ ಬಿತ್ತನೆ: ಒಟ್ಟು ಬಿತ್ತನೆ ಗುರಿ ೩೬೪೩೦ ಹೆಕ್ಟೇರ್ ಇದ್ದು, ಸಧ್ಯ ಈವರೆಗೆ ೧೦೩೫೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜೂ. ೧ರಿಂದ ಜುಲೈ ೧೪ನೇ ತಾರೀಕಿನ ವರೆಗೆ ವಾಡಿಕೆ ಮಳೆ ೧೩೩ ಮಿಮೀ ಆಗಬೇಕಿತ್ತು. ಸಧ್ಯ ೧೦೨.೬ ಮಿಮೀ ಮಳೆ ಆಗಿದೆ. ಶೇ. ೨೩ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದ್ದು, ಸಧ್ಯ ಬೆಳೆ ಸಮೀಕ್ಷೆ ಕಾರ್ಯ ನಡೆದಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ತಿಳಿಸಿದರು.ಬೆಳೆ ಹರಗುವ ಸ್ಥಿತಿ: ಹೊಸಳ್ಳಿ, ಕಡಕೋಳ, ಜಲ್ಲಿಗೇರಿ, ಕುಸ್ಲಾಪುರ ಗ್ರಾಮಗಳ ಸುತ್ತಮುತ್ತಲ ನೂರಾರು ಜನ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಗೋವಿನಜೋಳ, ಶೇಂಗಾ, ಹತ್ತಿ ಬಿತ್ತನೆ ಮಾಡಿದ್ದು, ಮಳೆ ಕೊರತೆಯಿಂದಾಗಿ ಹರಗುವ ಸ್ಥಿತಿಯಲ್ಲಿದ್ದಾರೆ. ಬೀಜ, ಗೊಬ್ಬರ, ಕಳೆ, ಕ್ರಿಮಿನಾಶಕ ಸಿಂಪರಣೆ ಅಂತಾ ಲಕ್ಷಗಟ್ಟಲೆ ಹಣ ಖರ್ಚು ಮಾಡಿದ್ದೇವೆ ಎಂದು ಕಡಕೋಳ ಗ್ರಾಮದ ರೈತ ಮಾದೇಗೌಡ ಪಾಟೀಲ ತಿಳಿಸಿದರು.