ಮುಂಗಾರು ಆರಂಭ: ಅಗತ್ಯ ಕ್ರಮ ಕೈಗೊಳ್ಳಲು ಡಿಸಿ ಸೂಚನೆ

| Published : May 15 2024, 01:32 AM IST

ಮುಂಗಾರು ಆರಂಭ: ಅಗತ್ಯ ಕ್ರಮ ಕೈಗೊಳ್ಳಲು ಡಿಸಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಆರಂಭವಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು.

- ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್

ಕನ್ನಡಪ್ರಭ ವಾರ್ತೆ ಕೊಪ್ಪಳ

ಮುಂಗಾರು ಆರಂಭವಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬರಗಾಲ ಹಾಗೂ ಮುಂಗಾರು ಆರಂಭದ ಹಿನ್ನೆಲೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಸಾಲಿನ ಮುಂಗಾರು ಸಂದರ್ಭಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ತಹಸೀಲ್ದಾರರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಹಿಂದಿನ ಹಾನಿ ಮರುಕಳಿಸದಂತೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಪೈಪ್ ದುರಸ್ತಿ, ಚರಂಡಿಗಳ ನಿರ್ವಹಣೆ ಸೇರಿದಂತೆ ಮಳೆಯಿಂದ ಉಂಟಾಗಬಹುದಾದ ಹಾನಿ ಹಾಗೂ ಸಮಸ್ಯೆಗಳ ಕುರಿತು ಪೂರ್ವಸಿದ್ದತೆಯಾಗಿ ನಿರ್ವಹಣಾ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಬೇಕು. ಹಿಂದಿನ ವರ್ಷಗಳ ಮುಂಗಾರು ಮಳೆಯಿಂದ ಉಂಟಾದ ಹಾನಿ ಕುರಿತು ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಬಾಕಿ ಇರುವ ಬಿಲ್‌ಗಳನ್ನು ಶುಕ್ರವಾರದೊಳಗೆ ಸಲ್ಲಿಸಿ, ಪಾವತಿಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಅನುಷ್ಠಾನ ಏಜೆನ್ಸಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

21,887 ಮಿನಿ ಮೇವು ಕಿಟ್‌ ವಿತರಣೆ:

ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಪಂ ವ್ಯಾಪ್ತಿಯ ಟಣಕನಕಲ್ ಹಾಗೂ ಬೂದಗುಂಪಾ ಗ್ರಾಪಂ ವ್ಯಾಪ್ತಿಯ ನಾಗೇಶನಹಳ್ಳಿ ಹಾಗೂ ಜಬ್ಬಲಗುಡ್ಡ ಗ್ರಾಮಗಳಿಗೆ ಪ್ರತಿ ದಿನ 13 ಟ್ರಿಪ್‌ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮೇ 10 ರಂತೆ ಜಿಲ್ಲೆಯಾದ್ಯಂತ 35 ವಾರಗಳಿಗೆ ಸಾಕಾಗುವಷ್ಟು 5,28,994.91 ಟನ್ ಮೇವು ಲಭ್ಯವಿದೆ. ಮುಂದಿನ ದಿನಗಳ ಅಗತ್ಯತೆಗಾಗಿ ಮೇವು ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಜಿಲ್ಲೆಗೆ ಪಶು ಸಂಗೋಪನೆ ಇಲಾಖೆಯಿಂದ ನೀಡಲಾದ 26,659 ಮಿನಿ ಮೇವಿನ ಕಿಟ್‌ಗಳಲ್ಲಿ 9,167 ರೈತರಿಗೆ 21,887 ಮಿನಿ ಮೇವು ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.2024-25ನೇ ಸಾಲಿನ ಅತಿವೃಷ್ಟಿ ಪರಿಹಾರ ವಿವರ:

ಏಪ್ರಿಲ್‌ನಿಂದ ಮೇ ವರೆಗೆ ಸುರಿದ ಮಳೆಯಿಂದ 3 ಮಾನವ ಜೀವ ಹಾನಿಯಾಗಿದ್ದು, ತಲಾ ₹5 ಲಕ್ಷದಂತೆ ಒಟ್ಟು ₹15 ಲಕ್ಷ ಪರಿಹಾರ ವಿತರಿಸಲಾಗಿದೆ. ಸಿಡಿಲಿನ ಆಘಾತದಿಂದ ಉಂಟಾದ ಒಟ್ಟು 20 ಜಾನುವಾರು ಪ್ರಾಣ ಹಾನಿ ಪ್ರಕರಣಗಳಲ್ಲಿ ₹3,59,500 ಪರಿಹಾರ ಮೊತ್ತ ವಿತರಿಸಲಾಗಿದೆ ಎಂದು ತಿಳಿಸಿದರು. ಎಲ್ಲ 7 ತಹಸೀಲ್ದಾರರ ವಿಪತ್ತಿನ ಪಿಡಿ ಖಾತೆಯಲ್ಲಿ ಒಟ್ಟು ₹320.44 ಲಕ್ಷ ಅನುದಾನ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ರೈತರಿಗೆ ಸೂಕ್ತ ಮಾಹಿತಿ ನೀಡಲು ಸೂಚನೆ:

ಬರ ಹಾಗೂ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗಳಲ್ಲಿ ಪರಿಹಾರ ವಿತರಣೆ ಪ್ರಕರಣಗಳಲ್ಲಿ ಸೂಕ್ತ ದಾಖಲೆ ಇರುವ ರೈತರಿಗೆ ಈಗಾಗಲೇ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ. ಆದರೆ ಕೆಲವು ರೈತರು ಫ್ರೂಟ್ಸ್ ಐಡಿ, ಸರ್ವೇ ಸಂಖ್ಯೆ, ಬ್ಯಾಂಕ್ ಖಾತೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರದಿಂದ ವಂಚಿತರಾಗಿದ್ದಾರೆ. ಪರಿಹಾರ ಮೊತ್ತ ಪಡೆಯಲು ಇರುವ ಸಮಸ್ಯೆಗಳ ಕುರಿತು ದೂರು/ಅಹವಾಲು ಸಲ್ಲಿಸಲು ತಾಲೂಕು ಹಂತದಲ್ಲಿ ಕಾಲ್ ಸೆಂಟರ್‌ ತೆರೆಯಬೇಕು. ಜಿಲ್ಲಾ ಹಂತದಲ್ಲಿಯೂ ಕಾಲ್ ಸೆಂಟರ್ ಆರಂಭಿಸಬೇಕು. ಬರ ನಿರ್ವಹಣೆಗೆ ತೆರೆಯಲಾದ ಸಹಾಯವಾಣಿ ಸಂಖ್ಯೆಗಳನ್ನು ಈ ಕಾರ್ಯಕ್ಕೂ ಬಳಸಿಕೊಳ್ಳಬಹುದು. ಆದ್ದರಿಂದ ಎಲ್ಲ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ರೈತರು ಕೇಳುವ ಯಾವುದೇ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ನೀಡಬೇಕು. ಯಾವುದೇ ದಾಖಲೆ ಕೊರತೆ ಇದ್ದಲ್ಲಿ ದಾಖಲೆಯನ್ನು ಪಡೆಯುವ ಸ್ಥಳ ಹಾಗೂ ವಿಧಾನದ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಕಂದಾಯ ನಿರೀಕ್ಷಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ, ತಹಸೀಲ್ದಾರ ವಿಠ್ಠಲ್ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಇದ್ದರು.