ದೀರ್ಘಕಾಲದ ಬಿಡುವಿನ ನಂತರ ಪ್ರತ್ಯಕ್ಷವಾದ ವರುಣನ ಸಿಂಚನವು ಇಡೀ ಜಿಲ್ಲೆಯಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಗದಗ- ಬೆಟಗೇರಿ ಅವಳಿ ನಗರ ಹಾಗೂ ಇನ್ನುಳಿದ ಪಟ್ಟಣ ಪ್ರದೇಶಗಳಲ್ಲಿ ಮಳೆ ಧರೆಯನ್ನು ತಂಪಾಗಿಸಿದೆ.

ಗದಗ: ಜಿಲ್ಲಾದ್ಯಂತ ಮಳೆಗಾಲ ಪ್ರಾರಂಭವಾಗಿ ತಿಂಗಳುಗಳೇ ಕಳೆದಿದ್ದರೂ ಬೇಸಿಗೆಯ ವಾತಾವರಣವಿತ್ತು. ತೀವ್ರ ಬಿಸಿಲು ಮತ್ತು ಕಡುಗಾವಿಗೆ ಸಾಕ್ಷಿಯಾಗಿದ್ದ ಅವಳಿ ನಗರ ಹಾಗೂ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭಾನುವಾರ ಸಂಜೆ ಕೊಂಚ ಸಮಾಧಾನ ತರುವ ರೀತಿಯಲ್ಲಿ ಕೆಲ ಕಾಲ ಉತ್ತಮ ಮಳೆಯಾಗಿದೆ.

ದೀರ್ಘಕಾಲದ ಬಿಡುವಿನ ನಂತರ ಪ್ರತ್ಯಕ್ಷವಾದ ಈ ವರುಣನ ಸಿಂಚನವು ಇಡೀ ಜಿಲ್ಲೆಯಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಗದಗ- ಬೆಟಗೇರಿ ಅವಳಿ ನಗರ ಹಾಗೂ ಇನ್ನುಳಿದ ಪಟ್ಟಣ ಪ್ರದೇಶಗಳಲ್ಲಿ ಮಳೆ ಧರೆಯನ್ನು ತಂಪಾಗಿಸಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಯನ್ನೇ ನಂಬಿ ಬದುಕುತ್ತಿರುವ ಅನ್ನದಾತನ ಮೊಗದಲ್ಲಿ ಹೊಸ ಭರವಸೆಗೆ ಭಾನುವಾರದ ಮಳೆ ಕಾರಣವಾಗಿದೆ.

ಬಾಡುತ್ತಿದ್ದ ಬೆಳೆಗಳಿಗೆ ಜೀವದಾನ: ರೋಹಿಣಿ ಮತ್ತು ಮೃಗಶಿರಾ ನಕ್ಷತ್ರಗಳ ಮಳೆ ಕೈಕೊಟ್ಟ ಹಿನ್ನೆಲೆ ಈ ಭಾಗದ ಮುಂಗಾರು ಬಿತ್ತನೆ ತೀವ್ರವಾಗಿ ಕುಂಠಿತಗೊಂಡಿತ್ತು. ಇನ್ನು ಕೆಲವು ಕಡೆ ತೇವಾಂಶದ ಕೊರತೆಯ ನಡುವೆಯೂ ಧೈರ್ಯ ಮಾಡಿ ಬಿತ್ತನೆ ಮಾಡಿದ್ದ ಹೆಸರು, ಶೇಂಗಾ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆಗಳು ಮಳೆಯಿಲ್ಲದೇ ದಿನೇ ದಿನೇ ಬಾಡತೊಡಗಿದ್ದವು. ಮುಂಗಾರಿನ ಆರಂಭಿಕ ಹಂತದಲ್ಲೇ ತಲೆದೋರಿದ್ದ ಕಮರುವ ಲಕ್ಷಣಗಳು ರೈತರಲ್ಲಿ ಆತಂಕ ಮೂಡಿಸಿದ್ದವು. ಆದರೆ ಭಾನುವಾರ ಸುರಿದ ಮಳೆ ಬಾಡುತ್ತಿದ್ದ ಮುಂಗಾರು ಬೆಳೆಗಳಿಗೆ ಸದ್ಯದ ಮಟ್ಟಿಗೆ ಸಂಜೀವಿನಿಯಂತೆ ಜೀವದಾನ ನೀಡಿದೆ.

ಆಸರೆ: ಗದಗ ತಾಲೂಕಿನ ಗ್ರಾಮೀಣ ಭಾಗ ಮತ್ತು ಇನ್ನುಳಿದ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದಲೇ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ತುಂತುರು ಮಳೆ ಪ್ರಸ್ತುತ ಬೆಳೆಗಳಿಗೆ ಯಾವುದೇ ಹೆಚ್ಚಿನ ಅನುಕೂಲಕಾರಿಯಾಗಿಲ್ಲ, ಆದರೆ ಮಳೆ ಭೂಮಿಯ ತೇವಾಂಶವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಕಳೆದ 2 ತಿಂಗಳಿಂದ ಮಳೆ ಬಾರದೇ ಆಕಾಶದ ಕಡೆ ಮುಖ ಮಾಡಿ ಕೂರುವಂತಾಗಿತ್ತು. ಈ ಮಳೆ ಸದ್ಯಕ್ಕೆ ಬಿತ್ತನೆಯಾಗಿರುವ ಹೆಸರು ಮತ್ತು ಮೆಕ್ಕೆಜೋಳದ ಪೈರುಗಳಿಗೆ ಬಲ ನೀಡಲಿದೆ. ಇನ್ನುಳಿದ ಒಣ ಭೂಮಿಯಲ್ಲಿ ಹದ ಹಸನು ಮಾಡಿಕೊಂಡು ಮುಂದಿನ ಬಿತ್ತನೆಗೆ ಸಜ್ಜಾಗಲು ಇದು ಸೂಕ್ತ ಮುನ್ನುಡಿಯಾಗಿದೆ.ಮಳೆಗಾಲದ ಅನುಭವ: ಕಳೆದ ಕೆಲವು ದಿನಗಳಿಂದ ಸತತವಾಗಿ ಬಿಸಿಲಿನ ವಾತಾವರಣ ಹಾಗೂ ಉಷ್ಣಾಂಶದ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಭಾನುವಾರ ವರುಣದೇವ ತಂಪು ನೀಡಿದ್ದಾನೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಆಗಾಗ್ಗೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಇದರೊಂದಿಗೆ ಬೀಸುತ್ತಿರುವ ತಂಪಾದ ಗಾಳಿಯು ಅವಳಿ ನಗರದ ಜನರಿಗೆ ಜೂನ್ ತಿಂಗಳ ಅಂತ್ಯದಲ್ಲಾದರೂ ಸಂಪೂರ್ಣ ಮಳೆಗಾಲದ ಅನುಭವ ನೀಡುತ್ತಿದೆ. ರಸ್ತೆಗಿಳಿಯುವ ಜನರು ರೇನ್‌ಕೋಟ್, ಕೊಡೆಗಳ ಆಸರೆ ಪಡೆಯುತ್ತಿದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಬಿಸಿಬಿಸಿ ಚಹಾ, ಕುರುಕಲ ತಿಂಡಿಗಳನ್ನು ಸವಿಯುವ ದೃಶ್ಯಗಳು ಕಂಡುಬರುತ್ತಿವೆ.