ಸುಂಟಿಕೊಪ್ಪ ಆರೋಗ್ಯ ಕೇಂದ್ರ ಸುಧಾರಣೆಗೆ ತಿಂಗಳ ಗಡುವು

| Published : Nov 07 2024, 11:52 PM IST / Updated: Nov 07 2024, 11:53 PM IST

ಸಾರಾಂಶ

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌, ಸಹಾಯಕ ಅಧಿಕಾರಿ ಡಾ.ಶ್ರೀನಿವಾಸ್ ಮತ್ತಿತರರು ಗುರುವಾರ ಸುಂಟಿಕೊಪ್ಪ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಸಂಘಟನೆಗಳ ಪ್ರಮುಖರು ಅವರೊಂದಿಗೆ ಚರ್ಚಿಸಿ ಕೇಂದ್ರದ ಸುಧಾರಣೆಗೆ ಒಂದು ತಿಂಗಳ ಗಡುವು ವಿಧಿಸಿ, ಪ್ರತಿಭಟನೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಗಳ ಪರಿಹಾರಕ್ಕೆ ಒಂದು ತಿಂಗಳ ಒಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಸುಂಟಿಕೊಪ್ಪ ಸೋಶಿಯಲ್‌ ಡೆಮಾಕ್ರಟಿಕ್‌ ಟ್ರೇಡ್‌ ಯೂನಿಯನ್‌ (ಎಸ್‌ಡಿಟಿಯು) ನೇತೃತ್ವದಲ್ಲಿ ಗ್ರಾಮಸ್ಥರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‌ಡಿಟಿಯು ಮುಖಂಡ ಕೆ.ಎ.ಲತೀಫ್, ಜಿಲ್ಲಾಧ್ಯಕ್ಷ ಶರೀಫ್ (ಅಣ್ಣಾ), ಉದ್ಯಮಿ ಫೈರೋಜ್ ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯಾಧಿಕಾರಿಗಳು ಇಲ್ಲ, ಹಗಲಿನ ವೇಳೆಯಲ್ಲೂ ನುರಿತ ವೈದ್ಯಾಧಿಕಾರಿಗಳು ಇಲ್ಲದೆ ಬಡ ಜನತೆ ಖಾಸಗಿ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ಅರ್ನಿವಾಯ ಪರಿಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ಶುಷ್ರೂಶಕಿಯರು ಹಾಗೂ ಇತರ ಸಿಬ್ಬಂದಿ ಕೊರತೆಗೆ ಸಂಬಂಧಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಗುರುವಾರ ಭೇಟಿ ನೀಡಿದ್ದ ಸಂದರ್ಭ ಮುಖಂಡರು ಸಮಸ್ಯೆ ಪರಿಹಾರಕ್ಕೆ ತಿಂಗಳ ಗಡುವು ವಿಧಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌, ಸಹಾಯಕ ಅಧಿಕಾರಿ ಡಾ.ಶ್ರೀನಿವಾಸ್ ಮತ್ತಿತರರು ಗುರುವಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಸಂಘಟನೆಗಳ ಪ್ರಮುಖರು ಅವರೊಂದಿಗೆ ಚರ್ಚಿಸಿದರು.

ಸುಂಟಿಕೊಪ್ಪ ಆರೋಗ್ಯ ಕೇಂದ್ರ ೭ ಗ್ರಾಮ ಪಂಚಾಯಿತಿ ವ್ಯಾಪ್ತಿ ಹೊಂದಿದ್ದು, ಅಂದಾಜು ೨೦ ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದೆ. ಅತೀ ಹೆಚ್ಚು ಮಂದಿ ಕೂಲಿ ಕಾರ್ಮಿಕರೇ ನೆಲೆಸಿದ್ದು, ತುರ್ತು ಚಿಕಿತ್ಸೆಗಳಿಗೆ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವಲಂಬಿತರಾಗಿದ್ದಾರೆ. ದಿನವೊಂದಕ್ಕೆ ಕನಿಷ್ಠ ೧೫೦ಕ್ಕೂ ಮಿಕ್ಕಿ ಕೂಲಿ ಕಾರ್ಮಿಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಆಗಮಿಸುತ್ತಾರೆ.

ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯಾಧಿಕಾರಿಗಳು ಇಲ್ಲದಿದ್ದರೂ ನುರಿತ ಶುಷ್ರೂಶಕಿಯರಿಂದ ಕನಿಷ್ಠ ಪ್ರಾಥಮಿಕ ಚಿಕಿತ್ಸೆ ದೊರೆಯುತ್ತಿದೆ. ಅಲ್ಲದೆ ತಿಂಗಳಿಗೆ ಕನಿಷ್ಠ ೧೦ ಪ್ರಸೂತಿ ಕಾರ್ಯವೂ ನಡೆಯುತ್ತಿದೆ. ಆದರೆ ಇಲ್ಲಿರುವ ಶುಷ್ರೂಶಕಿಯರನ್ನು ವರ್ಗಾವಣೆಗೊಳಿಸಲಾಗಿದ್ದು, ತೆರವಾದ ಸ್ಥಾನಕ್ಕೆ ಸಿಬ್ಬಂದಿ ನಿಯೋಜಿಸದೆ ಇರುವುದು ಸಮಸ್ಯೆಗೆ ಕಾರಣವಾಗಿದೆ.

ಇರುವ ಶುಷ್ರೂಷಕಿಯರೇ ಅತೀ ಹೆಚ್ಚು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾತ್ರ ಒಂದು ಕಾನೂನು ಇತರೆ ಆರೋಗ್ಯ ಕೇಂದ್ರಗಳಿಗೆ ಕಾನೂನು ಬದಲಿಸಲಾಗಿದೆಯೇ ಎಂದು ಫೈರೋಜ್ ಪ್ರಶ್ನಿಸಿದರು.

ಪ್ರಾಥಮಿಕ ಆರೋಗ್ಯ ಆರೋಗ್ಯ ಕೇಂದ್ರದ ಆವರಣವು ಕಾಡು ಗಿಡಗಂಟಿಗಳಿಂದ ತುಂಬಿ ಹೋಗಿದೆ ಪಾಳು ವಸತಿಗೃಹಗಳಲ್ಲಿ ಹಾವು ಚೇಳುಗಳ ಅವಾಸ ಸ್ಥಾನವಾಗಿ ಮಾರ್ಪಟ್ಟಿದ್ದು ಅವುಗಳನ್ನು ತೆರವುಗೊಳಿಸಬೇಕು. ಕಳೆದ ೬ ತಿಂಗಳ ಹಿಂದೆಯೇ ೧೦೮ ಆ್ಯಂಬುಲೆನ್ಸ್‌ ಅಪಘಾತಕ್ಕೀಡಾಗಿದ್ದು, ಬದಲಿ ಆ್ಯಂಬುಲೆನ್ಸ್ ನಿಯೋಜಿಸಲು ಮುಂದಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿದ್ದ ಆ್ಯಂಬುಲೆನ್ಸ್‌ ದುರಸ್ತಿಗೀಡಾಗಿದ್ದು ಮಂಗಳೂರಿಗೆ ಕಳುಹಿಸಲಾಗಿದ್ದು ವಾಪಸ್‌ ತರಿಸುವಂತೆ ಅಣ್ಣಾ ಶರೀಫ್ ಹಾಗೂ ಲತೀಫ್ ಒತ್ತಾಯಿಸಿದರು.

ಕೆಲವು ಸಿಬ್ಬಂದಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ರೋಗಿಗಳೊಂದಿಗೆ ಅನುಚಿವರ್ತನೆ ತೋರುತ್ತಿದ್ದು ಕೂಡಲೇ ಅವರನ್ನು ಇಲ್ಲಿಂದ ವರ್ಗಾವಣೆಗೊಳಿಸಬೇಕು. ಇವರನ್ನು ಇಲ್ಲಿಂದ ವರ್ಗಾವಣೆಗೊಳಿಸಿ ತೆರವಾದ ಸ್ಥಾನಕ್ಕೆ ಬೇರೆ ಸಿಬ್ಬಂದಿ ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸತೀಶ್ ಅವರಿಗೆ ಬೇಡಿಕೆ ಸಲ್ಲಿಸಿದ್ದರು.

ಅಧಿಕಾರಿಗಳು ಪ್ರತಿಭಟನೆ ನಡೆಸದಂತೆ, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ಈ ಆರೋಗ್ಯ ಕೇಂದ್ರ ದುರವಸ್ಥೆ ಕುರಿತು ಅ.23ರ ‘ಕನ್ನಡಪ್ರಭ’ದಲ್ಲಿ ವರದಿ ಪ್ರಕಟವಾಗಿತ್ತು.