ಅಶೋಕ ಡಿ. ಸೊರಟೂರ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಸ ಸಂಗ್ರಹ ವಾಹನ, ಟಿಪ್ಪರ್‌, ಡೋಜರ್‌ಗಳಿಗೆ ಮತ್ತು ಜೆಸಿಬಿ ವಾಹನಗಳಿಗೆ ಪ್ರತಿ ತಿಂಗಳು ₹1 ಲಕ್ಷಕ್ಕೂ ಹೆಚ್ಚು ಮೊತ್ತದ ಡೀಸೆಲ್‌ ಖರ್ಚಾಗುತ್ತಿದೆ ಎಂದು ಪುರಸಭೆ ಅಧಿಕಾರಿಗಳೇ ಹೇಳುತ್ತಾರೆ. ಆದರೂ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರು ಕೇಳಿಬಂದಿವೆ.

ಪಟ್ಟಣದಲ್ಲಿ ಪ್ರತಿನಿತ್ಯ ಮನೆ ಮನೆಯಿಂದ ಸಂಗ್ರಹವಾಗುವ ಕಸ ಹಾಗೂ ಬೀದಿಯಲ್ಲಿ ಬಿದ್ದ ತ್ಯಾಜ್ಯವನ್ನು ಎತ್ತಿ ಹೊರಹಾಕುವುದು ಪುರಸಭೆಯ ಅಧಿಕಾರಿಗಳಿಗೆ ದೊಡ್ಡ ಸವಾಲಿನ ಕಾರ್ಯವಾಗಿದೆ.

ಪಟ್ಟಣದಲ್ಲಿನ ಕಸ ವಿಲೇವಾರಿ ವಾಹನಗಳಲ್ಲಿ ಹಲವು ವಾಹನಗಳು ದುರಸ್ತಿಯಲ್ಲಿವೆ. ಹಲವು ವಾಹನಗಳು ಚಾಲನೆಯಲ್ಲಿ ಇದ್ದರೂ ಅವುಗಳಿಂದ ಪಟ್ಟಣದಲ್ಲಿ ತ್ಯಾಜ್ಯವನ್ನು ಹೊರಸಾಗಿಸುವುದು ಅಸಾಧ್ಯದ ಮಾತಾಗಿದೆ. ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಸಾರ್ವಜನಿಕರು ಕಸವನ್ನು ಎಲ್ಲಿಬೇಕೆಂದಲ್ಲಿ ಹಾಕುವ ಮೂಲಕ ಪಟ್ಟಣವನ್ನು ಕಸಮಯವನ್ನಾಗಿಸಿದ್ದಾರೆ.

ಪಟ್ಟಣದಲ್ಲಿ ಪ್ರತಿನಿತ್ಯ ಸುಮಾರು 15 ಟನ್ ಕಸ ಉತ್ಪಾದನೆಯಾಗುತ್ತಿದ್ದು. ಕಸ ಸಾಗಿಸಲು 2 ಟ್ರ್ಯಾಕ್ಟರ್, 7 ಕಸ ವಿಲೇವಾರಿ ಮಿನಿ ವಾಹನಗಳಿವೆ. ಇವುಗಳಲ್ಲಿ 2 ವಾಹನಗಳು ದುರಸ್ತಿಯಲ್ಲಿವೆ. ಇರುವ 5 ಕಸ ವಿಲೇವಾರಿ ವಾಹನಗಳಿಂದ ಪಟ್ಟಣದಲ್ಲಿನ ಘನತ್ಯಾಜ್ಯ ಘಟಕಕ್ಕೆ ಸಾಗಿಸಲು ವಾಹನಗಳ ಕೊರತೆ ಕಾಡುತ್ತಿದೆ.


ನಿತ್ಯ 2 ಟ್ರ್ಯಾಕ್ಟರ್‌ಗಳು ಕಸ ಸಾಗಿಸುವ ಕಾರ್ಯ ಮಾಡುತ್ತಿದ್ದರೂ ಕಸದ ಸಮಸ್ಯೆ ಎದ್ದು ಕಾಣುತ್ತಿದೆ. 7 ಕಸ ವಿಲೇವಾರಿ ಮಿನಿ ವಾಹನಗಳಲ್ಲಿ ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸದೆ ಹಾಕುವುದರಿಂದ ಅವುಗಳನ್ನು ಬೇರ್ಪಡಿಸುವುದು ದೊಡ್ಡ ತೊಡಕಿನ ಕಾರ್ಯವಾಗಿದೆ ಎನ್ನುತ್ತಾರೆ ಪೌರಕಾರ್ಮಿಕರು.

ಪಟ್ಟಣವು ವೇಗವಾಗಿ ಬೆಳೆಯುತ್ತಿರುವುದರಿಂದ ವಿವಿಧ ವಾರ್ಡ್‌ಗಳಲ್ಲಿ ಕಸ ಸಂಗ್ರಹ ಮಾಡುವುದು ಸವಾಲಿನ ಕೆಲಸವಾಗಿದೆ. ಪಟ್ಟಣದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಸ ವಿಲೇವಾರಿಗಾಗಿ 32 ಕಾರ್ಮಿಕರನ್ನು ತೆಗೆದುಕೊಳ್ಳಲಾಗಿದ್ದರೂ ಕಸ ನಿರ್ವಹಣೆ ಕಗ್ಗಂಟಾಗಿದೆ.

ಹೊರಗುತ್ತಿಗೆ ಆಧಾರದಲ್ಲಿ ಕಸ ವಿಲೇವಾರಿಗಾಗಿ 17 ಜನರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅದರಲ್ಲಿ 12 ಜನ ಡ್ರೈವರ್, 2 ಜನ ಲೋಡರ್, 1 ಕಾವಲುಗಾರ, 1 ಸೂಪರ್‌ವೈಸರ್, 1 ಮಷಿನ್ ಆಪರೇಟರ್ ಇದ್ದಾರೆ. ಕೌಶಲ್ಯಾಭಿವೃದ್ಧಿ ಯೋಜನೆ ಅಡಿಯಲ್ಲಿ 10 ಜನ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಇವರು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಂಗಡಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದು, ತ್ಯಾಜ್ಯವನ್ನು ಗೊಬ್ಬರ ತಯಾರು ಮಾಡುವುದು ಇವರ ಕಾರ್ಯವಾಗಿದೆ. ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ 5 ಜನ ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರ ಕಾರ್ಯ ಪಟ್ಟಣದಲ್ಲಿನ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ಹಾಕುವಂತೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಕಾರ್ಯವಾಗಿದೆ.

ಗೊಬ್ಬರಕ್ಕಿಲ್ಲ ಬೇಡಿಕೆ: ಪಟ್ಟಣದಲ್ಲಿ ಕಸ ಸಂಗ್ರಹಣೆಯಿಂದ ಆಗುತ್ತಿರುವ ವೆಚ್ಚ ಅತಿಯಾಗಿದ್ದರೆ, ಕಸವನ್ನು ಬೇರ್ಪಡಿಸಿ ಗೊಬ್ಬರವನ್ನಾಗಿ ತಯಾರು ಮಾಡಿ ಅದರಿಂದ ಬರುವ ಲಾಭವನ್ನು ಪುರಸಭೆಯ ಇತರೆ ಖರ್ಚುಗಳಿಗೆ ಬಳಸಿಕೊಳ್ಳುವ ಯೋಜನೆ ಸರ್ಕಾರ ರೂಪಿಸಿದೆ. ಆದರೆ ಕಸದಿಂದ ತಯಾರಾದ ಗೊಬ್ಬರಕ್ಕೆ ಬೇಡಿಕೆ ಕಡಿಮೆ ಇದ್ದು, ಇದು ಪುರಸಭೆಗೆ ಹೊರೆಯಾಗಿದೆ ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ತಿಳಿಸಿದರು.

ಕಸ ನಿರ್ವಹಣೆ ಮಾಡುತ್ತಿಲ್ಲ: ಪಟ್ಟಣದಲ್ಲಿ ಕಸ ವಿಲೇವಾರಿ ಬೃಹತ್ ಸಮಸ್ಯೆಯಾಗಿದೆ. ಪುರಸಭೆ ಅಧಿಕಾರಿಗಳು ಇರುವ ಪೌರ ಕಾರ್ಮಿಕರನ್ನು ಸರಿಯಾಗಿ ಬಳಸಿಕೊಂಡು ಕಸ ನಿರ್ವಹಣೆ ಮಾಡುತ್ತಿಲ್ಲ. ಕಸದಿಂದ ಹಲವಾರು ಕಾಯಿಲೆಗಳು ಹರಡುತ್ತಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ. ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ಕಡಿವಾಣ ಹಾಕಬೇಕು ಎಂದು ಲಕ್ಷ್ಮೇಶ್ವರ ಪಟ್ಟಣದ ನಿವಾಸಿ ಪದ್ಮರಾಜ ಪಾಟೀಲ ತಿಳಿಸಿದರು.