ಮೂಡುಬಿದಿರೆ: ‘ಆಳ್ವಾಸ್ ಪ್ರಗತಿ-೨೦೨೫’ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

| Published : Aug 02 2025, 12:15 AM IST

ಮೂಡುಬಿದಿರೆ: ‘ಆಳ್ವಾಸ್ ಪ್ರಗತಿ-೨೦೨೫’ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜನೆಗೊಂಡಿರುವ ‘ಆಳ್ವಾಸ್ ಪ್ರಗತಿ 2025’ ೨ ದಿನಗಳ ಬೃಹತ್ ಉದ್ಯೋಗ ಮೇಳವನ್ನು ಶುಕ್ರವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.

ಮೂಡುಬಿದಿರೆ: ಶಿಕ್ಷಣ ವ್ಯಕ್ತಿಗಳಿಗೆ ಉದ್ಯೋಗ ಪಡೆಯಲು ಅರ್ಹರನ್ನಾಗಿಸುವುದರ ಜತೆಗೆ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ವೈಯಕ್ತಿಕವಾಗಿ ಸಶಕ್ತರನ್ನಾಗಿಸುತ್ತದೆ. ಉದ್ಯೋಗ ಗಳಿಸಿ ಸ್ವಂತಿಕೆಯಿಂದ ಬೆಳೆಯುವವರು ಇತರರನ್ನೂ ಬೆಳೆಸಿ ಸಮಾಜಕ್ಕೆ ಅಮೂಲ್ಯ ಆಸ್ತಿಯಾಗುತ್ತಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜನೆಗೊಂಡಿರುವ ‘ಆಳ್ವಾಸ್ ಪ್ರಗತಿ 2025’ ೨ ದಿನಗಳ ಬೃಹತ್ ಉದ್ಯೋಗ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಶಿಕ್ಷಣ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು ಸರ್ಕಾರದ ಹಾಗೂ ಸಮಾಜದ ಕರ್ತವ್ಯ. ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಲು ಸಾಧ್ಯವಾಗದೇ ಇದ್ದಾಗ ಸಮಾಜಕ್ಕೆ ಹೊರೆಯಾಗಿ ಕಾಣುತ್ತಾರೆ. ಈ ಸಂಖ್ಯೆಯನ್ನು ಕಡಿಮೆಗೊಳಿಸುವ ಜವಾಬ್ದಾರಿ ಹೆಚ್ಚಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.ಮಂಗಳೂರು ವಿವಿ ಕುಲಪತಿ ಡಾ ಪಿ.ಎಲ್‌. ಧರ್ಮ ಮಾತನಾಡಿ, ಕಾಲಕ್ಕೆ ಹೊಂದಿಕೊಂಡು ಉದ್ಯೋಗದ ಸ್ವರೂಪ ಬದಲಾಗುತ್ತಿವೆ. ಉದ್ಯೋಗ ಕೇಳುವುದಕ್ಕೂ, ನೀಡುವುದಕ್ಕೂ ಬಹಳಷ್ಟು ಅಂತರವಿದೆ, ಉದ್ಯೋಗ ಅಕಾಂಕ್ಷಿಗಳು ಅವಕಾಶಗಳಿಗೆ ಕಾಯುತ್ತಿರುವ ಸಂದರ್ಭ, ಸಮರ್ಥ ಅಭ್ಯರ್ಥಿಗಳನ್ನು ಅರಸಿಕೊಂಡು ನೇಮಕಾತಿದಾರರು ಬರುತ್ತಿರುವುದು ನಿಜವಾದ ಸಾಧನೆ ಎಂದರು.

ಮಾಜಿ ಸಚಿವ ರಮಾನಾಥ್ ರೈ ಆಳ್ವಾಸ್ ಪ್ರಗತಿಯ ಅಭ್ಯರ್ಥಿಗಳಿಗೆ ಅನುಕೂಲವಾಗುವ ಎಐ ತಂತ್ರಜ್ಞಾನ ಆಧಾರಿತ ಆ್ಯಪ್‌ಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಎಕ್ಸ್‌ಪರ್ಟೈಸ್‌ ಕಂಪನಿಯ ಕೆಎಸ್ ಶೇಖ್ ಕರ್ನಿರೆ, ಬಿಗ್ ಬ್ಯಾಗ್ಸ್ ಇಂಟರ್‌ನ್ಯಾಷನಲ್‌ನ ಆಡಳಿತ ನಿರ್ದೇಶಕ ರವೀಶ್ ಕಾಮತ್, ರೋಹನ್ ಕಾರ್ಪೋರೇಶನ್‌ನ ಸಂಸ್ಥಾಪಕ ರೋಹನ್ ಮೊಂತೆರೊ, ನಿವ್ಯಯಸ್ ಸೊಲ್ಯೂಷನ್ಸ್‌ನ ಸುಯೋಗ್ ಶೆಟ್ಟಿ ಅವರನ್ನು ಕರಾವಳಿ ಮೂಲದವರಾಗಿ ಇದೀಗ ಜಾಗತಿಕ ಮಟ್ಟದಲ್ಲಿ ಔದ್ಯೋಗಿಕ ವಲಯವನ್ನು ನಿರ್ಮಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಸಾಧನೆಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸ್ವಾಗತಿಸಿದರು.

ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನಸಭಾ ಪರಿಷತ್ ಸದಸ್ಯ ಭೋಜೆ ಗೌಡ, ಅದಾನಿ ಗ್ರೂಪ್ಸ್‌ನ ಕಿಶೋರ್ ಆಳ್ವ, ಕುಲದೀಪ್ ಎಂ, ಉದ್ಯಮಿ ಶ್ರೀಪತಿ ಭಟ್, ನಾರಾಯಣ ಪಿ.ಎಂ., ಮಂಗಳೂರು ವಿವಿಯ ಕುಲಸಚಿವ ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.