ಮೂಡುಬಿದಿರೆ: ಹನ್ನೆರಡನೇ ಶತಮಾನದಲ್ಲಿ ಬದುಕಿ ಬಾಳಿದ ಕ್ರಾಂತಿ ಪುರುಷ, ಶರಣ ಶ್ರೇಷ್ಠ ಮಡಿವಾಳ ಮಾಚಿದೇವ ಅವರು ಸ್ವತಃ ಅಗಸ ವೃತ್ತಿ ನಡೆಸುತ್ತ ಕಾಯಕದ ಮಹತ್ವ ಸಾರಿದ ಶರಣ ಶ್ರೇಷ್ಠರು ಎಂದು ಸಾಹಿತಿ, ಮೂಡುಬಿದಿರೆಯ ಮಡಿವಾಳ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸದಾನಂದ ನಾರಾವಿ ತಿಳಿಸಿದರು.

ಮೂಡುಬಿದಿರೆ ತಾಲೂಕು ಆಡಳಿತ ಆಶ್ರಯದಲ್ಲಿ ಆಡಳಿತ ಸೌಧದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಆಚರಣೆಯಲ್ಲಿ ಪ್ರಧಾನ ಉಪನ್ಯಾಸ ನೀಡಿದರು.ಬಸವಣ್ಣನವರಿಗಿಂತ ಹಿರಿಯರಾಗಿದ್ದ ಮಾಚಿದೇವ ಅವರು ಅಲ್ಲಮ ಪ್ರಭು ಅವರ ಅನುಭವ ಮಂಟಪಕ್ಕೆ ಬರುವವರ ಅರ್ಹತೆಯನ್ನು ಪರೀಕ್ಷಿಸಿ ದೃಢೀಕರಿಸಿದ ಬಳಿಕವಷ್ಟೇ ಪ್ರವೇಶ ಕಲ್ಪಿಸುವ ಹೊಣೆಗಾರಿಕೆಯನ್ನುನಿಷ್ಪಕ್ಷವಾಗಿ, ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರು. ಶಸ್ತ್ರ, ಶಾಸ್ತ್ರ ಎರಡನ್ನೂ ಬಲ್ಲವರಾಗಿದ್ದ ಅವರು ಮಡಿವಾಳ ಸಮಾಜದ ಕುಲಗುರುಗಳಾಗಿದ್ದರು. ಎಲ್ಲರ ಗೌರವ, ಮಾನ್ಯತೆಗಳಿಗೆ ಪಾತ್ರರಾಗಿದ್ದರು ಎಂದರು. ಉಪತಹಸೀಲ್ದಾರ್ ರಾಮ ಕೆ. ಅಧ್ಯಕ್ಷತೆ ವಹಿಸಿದ್ದರು. ಯಾವ ಕಾಯಕವೂ ಸಣ್ಣದಲ್ಲ, ಯಾವುದೂ ದೊಡ್ಡದಲ್ಲ. ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ಸಾರಿದವರು ಮಾಚಿದೇವ ಎಂದು ಅವರು ಹೇಳಿದರು. ಮೂಡುಬಿದಿರೆ ಮಡಿವಾಳ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಶ್ಯಾಮ ಮಡಿವಾಳ ಅತಿಥಿಯಾಗಿದ್ದರು. ಮಾಚಿದೇವರ ಭಾವಚಿತ್ರದೆದುರು ದೀಪ ಬೆಳಗಿಸಿ, ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ತಾಲೂಕು ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು. ಗ್ರಾಮ ಆಡಳಿತಾಧಿಕಾರಿ ಸುನಿಲ್ ಸ್ವಾಗತಿಸಿ ವಂದಿಸಿದರು, ರಾಮ ಕೆ. ನಿರೂಪಿಸಿದರು.