ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪ.ಜಾ., ಪ.ವರ್ಗದ ನೀರು ಬಿಲ್ ಬಾಕಿ ಇರುವವರ ಅದಾಲತ್ ನಡೆಸಿ ಎಂದು ಡಿಸೆಂಬರ್‌ನಲ್ಲಿ ಹೇಳಿದ್ದರೂ ಈ ತನಕ ವಿಲೇವಾರಿ ಮಾಡಿಲ್ಲ ಎಂದು ಶ್ವೇತಾ, ಶಕುಂತಲಾ, ಶಶಿರೇಖಾ ದೂರಿದರು.ಕಳೆದ ನಾಲ್ಕು ಮೀಟಿಂಗ್‌ನಲ್ಲಿ ಬಸ್ ನಿಲ್ದಾಣದ ಅವ್ಯವಸ್ಥೆಗಳ ಬಗ್ಗೆ ಚರ್ಚೆ ನಡೆದು ಸರಿಪಡಿಸುವ ಭರವಸೆ ಹಾಗೇ ಉಳಿದಿದೆ. ಕಳೆದ ಎರಡೂವರೆ ವರ್ಷದ ಹಿಂದೆ ಟೆಂಡರ್ ಆದ ಹಳೆ ಬಸ್ ನಿಲ್ದಾಣದ ಎದುರಿನ ಚಪ್ಪಡಿ ಕಲ್ಲು ಹಲ್ಲು ಮುರಿದಂತೆ ಯಥಾ ಸ್ಥಿತಿಯಲ್ಲಿದೆ. ಈ ವರ್ಷ ಮಳೆಗಾಲಕ್ಕೆ ಮೊದಲು ಒಳ ಚರಂಡಿ ಅಗಲಗೊಳಿಸಿ ಸರಿಪಡಿಸಬೇಕೆಂದು ರಾಜೇಶ್ ನಾಯಕ್ ಕೈ ಮುಗಿದು ಸಭೆಯಲ್ಲಿ ವಿನಂತಿಸಿದರು.
ಮೂಡುಬಿದಿರೆ ಪುರಸಭಾ ಏಪ್ರಿಲ್ ಸಭೆ 24ರಂದು ನಡೆಯಿತು. ಅಧ್ಯಕ್ಷ ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷೆ, ಮುಖ್ಯಾಧಿಕಾರಿ ಇಂದು ಹಾಜರಿದ್ದರು.ನಾಲ್ಕು ಕಡೆಗಳಲ್ಲಿ ಇರುವ ಸಾರ್ವಜನಿಕ ಶೌಚಾಲಯವನ್ನು ಕನಿಷ್ಠ ವಾರಕ್ಕೆರಡು ಬಾರಿಯಾದರೂ ಪೂರ್ಣ ಸ್ವಚ್ಛಗೊಳಿಸುವ ಕೆಲಸ ಆಗಬೇಕು ಎಂದು ಕೊರಗಪ್ಪ ವಿನಂತಿಸಿದರು. ಈ ವರ್ಷ ಮಳೆಗಾಲಕ್ಕೆ ಮೊದಲು ಡಾಂಬರೀಕರಣ, ಬೀದಿ ದೀಪ ಸಮರ್ಪಕಗೊಳಿಸಲು ಸುರೇಶ್ ಪ್ರಭು ಒತ್ತಾಯಿಸಿದರು.
ಮೂಡುಬಿದಿರೆಯ ಹದಿನೆಂಟು ಕೆರೆಗಳನ್ನು ವಿವಿಧ ಸಂಘ ಸಂಸ್ಥೆಗಳು ಸಹಕಾರದಿಂದ ಅಭಿವೃದ್ಧಿ ಪಡಿಸುವ ಕಾರ್ಯ ಯೋಜನೆಗಳನ್ನು ಪಿ.ಕೆ.ಥೋಮಸ್ ಸಭೆಯಲ್ಲಿ ಪ್ರಸ್ತಾಪಿಸಿದರು. ಸ್ವಚ್ಛ ಭಾರತ್ ಫಂಡ್‌ನಿಂದ ಡಂಪಿಂಗ್ ಯಾರ್ಡ್ ಸಮರ್ಥ ನಿರ್ವಹಣೆಯಾಗಿದ್ದು, ಸರ್ಕಾರದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಮುಖ್ಯಾಧಿಕಾರಿ ಇಂದು ಹರ್ಷ ವ್ಯಕ್ತಪಡಿಸಿದರು.ಪುರಸಭಾ ವ್ಯಾಪ್ತಿಯಲ್ಲಿ 45 ಸಿಸಿ ಕೆಮೆರಾಗಳಿದ್ದು ಉಪಯೋಗ ಇಲ್ಲದಂತಾಗಿದೆ ಎಂದು ಕೊರಗಪ್ಪ, ಪುರಂದರ ದೇವಾಡಿಗ, ರಾಜೇಶ್ ನಾಯಕ್, ಕರೀಂ ಗಮನಸೆಳೆದಾಗ ಎಲ್ಲವನ್ನೂ ಸಮರ್ಪಕ ಗೊಳಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸಿ ಕಾರ್ಯಗತ ಮಾಡಲು ಮುಖ್ಯಾಧಿಕಾರಿಗಳಿಗೆ ಸಭೆ ಒಪ್ಪಿಗೆಯನ್ನು ಸೂಚಿಸಿತು. ಅಲ್ಲಲ್ಲಿ ಕಸ ಎಸೆಯುವ ಬಗ್ಗೆ ವಿಚಾರ ಬಂದಾಗ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಪಾರ್ಕ್ ನಿರ್ವಹಣೆ ಮಾಡಲು ಮಹಿಳಾ ಸಂಘಟನೆಗಳು ಮುಂದೆ ಬಂದಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಮಾಹಿತಿ ಇತ್ತರು.