ಶನಿವಾರ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ಆವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- ೨೦೨೬’ ನ್ನು ವೈಭವವನ್ನು ಉದ್ಘಾಟಿಸಿ
ಗಣೇಶ್ ಕಾಮತ್
ಕನ್ನಡಪ್ರಭ ವಾರ್ತೆ ಮೂಡುಬಿದಿರೆಎಲ್ಲರನ್ನೂ ಒಳಗೊಳ್ಳುವುದು ಮತ್ತು ಒಂದಾಗಿಸುವುದು ನಮ್ಮ ಕರ್ನಾಟಕದ ಸಂಸ್ಕೃತಿ. ಭಾಷೆಯ ಸೊಗಡು, ಸಾಂಸ್ಕೃತಿಕ ವೈವಿಧ್ಯ, ಕನ್ನಡಿಗರ ಪ್ರೀತಿ, ವಿಶ್ವಾಸ. ಹಾಗಾಗಿ ಕರ್ನಾಟಕವೇ ಆಕರ್ಷಣೀಯ. ಕನ್ನಡಿಗರಾಗಿ ನಮ್ಮ ಭಾಗ್ಯ ಎಂದು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್ ಕುಮಾರ್ ಹೇಳಿದರು.
ಶನಿವಾರ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ಆವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- ೨೦೨೬’ ನ್ನು ವೈಭವವನ್ನು ಉದ್ಘಾಟಿಸಿ ಮಾತನಾಡಿದರು.ಸಮಗ್ರ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ಎಲ್ಲರ ವೈವಿಧ್ಯತೆಯನ್ನೂ ಗೌರವಿಸುವ , ಬಂಧುತ್ವ, ಧಾರಾಳತನದ ಮನಸ್ಸು ಇಲ್ಲಿ ಕಂಡಿದೆ. ಕಾಲೇಜುಗಳ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಟ್ರೆಡಿಶನಲ್ ಡೇ ಎನ್ನುವ ವಿಶಿಷ್ಠ ಕಾರ್ಯಕ್ರಮದಲ್ಲಿ ಇದೇ ಮೊದಲು ಪಾಲ್ಗೊಂಡು ಖುಷಿಯಾಗಿದೆ. ಬಹಳ ಹಿಂದೆ ಸ್ಮೈಲ್ ಚಿತ್ರದ ಶೂಟಿಂಗ್ ಗೆ ಬಂದ ಬಳಿಕ ಎರಡನೇ ಬಾರಿ ಮೂಡುಬಿದಿರೆಗೆ ಬರುತ್ತಿದ್ದೇನೆ ಎಂದ ಅವರು, ನಾಲ್ಕು ದಶಕಗಳ ಚಿತ್ರರಂಗದ ಬದುಕಿನಲ್ಲಿ ಅದೇ ಪ್ರೀತಿ ತೋರಿಸುತ್ತಿರುವುದಕ್ಕಾಗಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಡ್ಯಾನ್ಸ್ ಕರ್ನಾಟಕ ಫಿನಾಲೆ ಕುರಿತು ಉಲ್ಲೇಖಿಸಿದ ಅವರು, ಆಳ್ವಾಸ್ ವಿದ್ಯಾರ್ಥಿನಿ ಸುಜನ್ಯ ಅವರ ಸಾಧನೆ ಶ್ಲಾಘಿಸಿದರು.
“ನಾವು ಬಾರದಿದ್ದರೆ ತಪ್ಪಾಗುತ್ತಿತ್ತು. ವಿದ್ಯಾರ್ಥಿಗಳೇ ಎಲ್ಲ ಜವಾಬ್ದಾರಿ ವಹಿಸಿಕೊಂಡು ಮಾಡಿರುವ ಈ ಕಾರ್ಯಕ್ರಮದ ಸಾಂಸ್ಕೃತಿಕ ಮೆರವಣಿಗೆ ಕಂಡು ಖುಷಿಯಾಗಿದೆ. ಸಮಗ್ರ ಭಾರತದ ಸಂಸ್ಕೃತಿಯ ಪ್ರದರ್ಶನ ಕಾಣುವಂತಾಗಿದೆ. ಆಳ್ವಾಸ್ ಸಂಸ್ಥೆ ಕಟ್ಟಿದ ಆಳ್ವರಿಗೆ ಧನ್ಯವಾದ” ಎಂದು ಗೀತಾ ಶಿವರಾಜ್ ಕುಮಾರ್ ನುಡಿದರು.ಕುಣಿದು ಕುಪ್ಪಳಿಸಿದ ಶಿವಣ್ಣ..!
ಸಾಂಪ್ರದಾಯಿಕ ದೀಪ ಬೆಳಗಿ ಉದ್ಘಾಟಿಸಿ, ಚೆಂಡೆ ಡೋಲು ಬಡಿದು ಶಿವಣ್ಣ ದಂಪತಿ ಸಮಾರಂಭಕ್ಕೆ ಚಾಲನೆ ನೀಡಿದರು.ಅಭಿಮಾನಿಗಳ ಒತ್ತಾಯಕ್ಕೆ ಮಣಿದು ವೇದಿಕೆಯಲ್ಲಿ ಮತ್ತೆ ಮೈಕ್ ಕೈಗೆತ್ತಿಕೊಂಡು ತನ್ನ ಮೊದಲ ಸಿನಿಮಾ ಆನಂದ್ ಚಿತ್ರದ ‘ಟುವ್ವಿ ಟುವ್ವಿ’ಹಾಡಿದ ಶಿವಣ್ಣ 62ರ ಹರೆಯದಲ್ಲೂ ಸುತ್ತಿ ಕುಣಿದು ಕುಪ್ಪಳಿಸಿದರು. ಮುತ್ತಣ್ಣ ಪೀಪಿ ಊದಿದ, ಮಣಿ..ಮಣಿ..ಮಣಿ.., ಇವನ್ಯಾರ ಮಗನೋ.. ಶಿವ ರಾಜ ಕುಮಾರ ಎಂದು ಕೆಲವು ಹಾಡುಗಳ ಸಾಲುಗಳನ್ನು ಗುನುಗಿದರು. ಬೇಡುವೆನು ವರವನ್ನು... ಕೊಡು ತಾಯಿ.. ಎಂಬ ಸಾಲುಗಳಿಗೆ ಸಭೆ ಭಾವ ಪರವಶವಾಯಿತು. ಅಭಿಮಾನಿಗಳ ಪ್ರತಿಕ್ರಿಯೆಗೆ ಮಣಿದ ಅವರು ಯಾರೇ ಕೂಗಾಡಲಿ .. ಹಾಡಿ ಡಾ.ರಾಜ್ ಅವರನ್ನೂ ಸ್ಮರಿಸಿದರು. ಬೊಂಬೆ ಹೇಳುತ್ತೈತೆ.. ಸಾಲು ಗುನುಗಿ “ ನೀವೇ ರಾಜಕುಮಾರ...” ಎಂದು ಸಭೆಗೆ ವಂದಿಸಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಡಾ. ಎಂ. ಮೋಹನ ಆಳ್ವ ಅವರು ಡಾ. ಶಿವರಾಜ್ ಕುಮಾರ್ ದಂಪತಿಗೆ ಶಾಲು ಹೊದಿಸಿ, ಹಾರ, ಫಲಪುಷ್ಪ ಸ್ಮರಣಿಕೆಯೊಂದಿಗೆ ಬಡಗು ತಿಟ್ಟಿನ ಯಕ್ಷ ವೇಷದ ಆಕರ್ಷಕ ಸ್ಮರಣಿಕೆಯೊಂದಿಗೆ ಸನ್ಮಾನಿಸಿದರು.ಆಳ್ವಾಸ್ ಎಂ.ಎಸ್. ಡಬ್ಲ್ಯು ವಿದ್ಯಾರ್ಥಿ ಕೌಶಿಕ್ ತಾವು ರಚಿಸಿದ ಶಿವರಾಜ್ ಕುಮಾರ್ ದಂಪತಿಯ ರೇಖಾ ಚಿತ್ರವನ್ನು ಹಸ್ತಾಂತರಿಸಿದರು.ದಿನದ ಸ್ಪರ್ಧೆಗಳ ನಿರ್ಣಾಯಕರಾಗಿ ಬಂದ ಚಿತ್ರರಂಗದ ಪ್ರಮುಖರಾದ ನಟ ರಾಹುಲ್ ಅಮೀನ್, ಶೈಲಶ್ರೀ ಮೂಲ್ಕಿ, ದಿಶಾ ಶೆಟ್ಟಿ ಹಾಗೂ ಸಾಹಿಲ್ ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.ಸಮಾರಂಭಕ್ಕೂ ಮೊದಲು ಸಮಗ್ರ ಭಾರತೀಯ ಸಂಸ್ಕೃತಿಯ ಹಾಗೂ ವಿಶೇಷವಾಗಿ ತುಳುನಾಡಿನ ಸಂಸ್ಕೃತಿಯ ವೈಭವ ಪರಿಚಯಿಸುವ ಸಾಂಸ್ಕೃತಿಕ ಮೆರವಣಿಗೆ ಸಭಾಂಗಣದಲ್ಲಿ ರಂಜಿಸಿತು. ಕರಾವಳಿ ಕರ್ನಾಟಕ ಸಹಿತ ಉತ್ತರ ಹಾಗೂ ದಕ್ಷಿಣ ಭಾರತದ ಆಹಾರ ಮೇಳ ಗಮನ ಸೆಳೆಯಿತು.