ಸಿಎಂಗೆ 136 ಶಾಸಕರ ನೈತಿಕ ಬೆಂಬಲ: ಬಸವರಾಜ ಶಿವಗಂಗಾ

| Published : Sep 25 2024, 12:51 AM IST

ಸಾರಾಂಶ

ಸದ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಗುವ ಬಗ್ಗೆ ಪೈಪೋಟಿ ಇಲ್ಲ. ಸಿಎಂ ಸಿದ್ದರಾಮಯ್ಯನವರಿಗೆ ನಾವೆಲ್ಲಾ 136 ಶಾಸಕರೂ ನೈತಿಕ ಬೆಂಬಲ ನೀಡುತ್ತೇವೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ದಾವಣಗೆರೆಯಲ್ಲಿ ಹೇಳಿದ್ದಾರೆ.

- ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಎಂಬುದು ಸ್ಪಷ್ಟ ಎಂದು ಟೀಕೆ - - -

ದಾವಣಗೆರೆ: ಸದ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಗುವ ಬಗ್ಗೆ ಪೈಪೋಟಿ ಇಲ್ಲ. ಸಿಎಂ ಸಿದ್ದರಾಮಯ್ಯನವರಿಗೆ ನಾವೆಲ್ಲಾ 136 ಶಾಸಕರೂ ನೈತಿಕ ಬೆಂಬಲ ನೀಡುತ್ತೇವೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಮುಖಾಂತರ ಬಿಜೆಪಿ ಕುತಂತ್ರ ಮಾಡುತ್ತಿದೆ. ಹಿಂಬಾಗಿಲಿನಿಂದ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿಯವರು ಕುತಂತ್ರ ನಡೆಸುತ್ತಿದ್ದಾರೆ ಎಂದು ದೂರಿದರು.

ಇದೇ ರಾಜ್ಯಪಾಲರು ಶಶಿಕಲಾ ಜೊಲ್ಲೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜನಾರ್ದನ ರೆಡ್ಡಿ ವಿರುದ್ಧ ತನಿಖೆಗೆ ಲೋಕಾಯುಕ್ತ ಸಂಸ್ಥೆಯೇ ಕೊಟ್ಟಿದ್ದರೂ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿಲ್ಲ. ಆದರೆ, ಸಾಮಾಜಿಕ ಕಾರ್ಯಕರ್ತನಿಗೆ ಅನುಮತಿ ನೀಡಿದೆ. ಇದು ಯಾವ ನ್ಯಾಯ? ಇದರಿಂದಲೇ ರಾಜ್ಯಪಾಲರು ಕೇಂದ್ರದ ಕೈಗೊಂಬೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಟೀಕಿಸಿದ ಅವರು, ನಾವು ಯಾವುದಕ್ಕೂ ಬಗ್ಗಲ್ಲ, ಜಗ್ಗಲ್ಲ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.

ಬಿಜೆಪಿ ತಂತ್ರಗಳು ಫಲಿಸಲ್ಲ:

ಇನ್ನೂ ತನಿಖೆಯೇ ನಡೆದಿಲ್ಲ. ತೀರ್ಪು ಬಂದಿಲ್ಲ. ಹಾಗಾಗಿ ರಾಜೀನಾಮೆಯ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ರಾಜ್ಯಪಾಲರನ್ನು ಬಳಸಿಕೊಂಡು ಮಾಡುವಂತಹ ಯಾವುದೇ ತಂತ್ರ, ಕುತಂತ್ರ, ಷಡ್ಯಂತ್ರಗಳೂ ನಡೆಯುವುದಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ಇರುತ್ತದೆ ಎಂದು ಬಸವರಾಜು ಸ್ಪಷ್ಟಪಡಿಸಿದರು.

- - -

ಕೋಟ್‌ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರಿಗೆ ಮುಖ್ಯಮಂತ್ರಿ ಆಗುವಂತಹ ಸಂದರ್ಭ ಬರಲಿದೆ. ಆ ಸಂದರ್ಭ ಬಂದಾಗ ಖಂಡಿತವಾಗಿಯೂ ಮುಖ್ಯಮಂತ್ರಿ ಆಗುತ್ತಾರೆ. ಯಾರಿಗೋ ನೋವು ಕೊಟ್ಟು ಮುಖ್ಯಮಂತ್ರಿ ಆಗುವಂತಹ ಸಂದರ್ಭ ಅಲ್ಲ. ಡಿಕೆಶಿ ಸಿಎಂ ಆಗುವುದು ಖಚಿತ. ಮುಂಚಿನಿಂದಲೂ ನಾನು ಇದೇ ಮಾತು ಹೇಳುತ್ತಿದ್ದೇನೆ. ಈ ಸಂದರ್ಭದಲ್ಲಿ ಅಂತಹ ವಿಚಾರ ಬೇಡ

- ಬಸವರಾಜ ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ

- - - -24ಕೆಡಿವಿಜಿ: ಬಸವರಾಜ ಶಿವಗಂಗಾ