ಗುರುವಾರ ಸಂಜೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗರಗಂದೂರಿನಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ 80 ಮಕ್ಕಳು ಪರೀಕ್ಷೆಯನ್ನು ಎದುರಿಸಿದ್ದು, ಶೇ. 100 ಫಲಿತಾಂಶವನ್ನು ಪಡೆದಿದೆ. ಉನ್ನತ ಶ್ರೇಣಿಯಲ್ಲಿ 53 ಮಂದಿ ಪ್ರಥಮ ಶ್ರೇಣಿಯಲ್ಲಿ 27 ಮಂದಿ ಉತ್ತೀರ್ಣರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಗುರುವಾರ ಸಂಜೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗರಗಂದೂರಿನಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ 80 ಮಕ್ಕಳು ಪರೀಕ್ಷೆಯನ್ನು ಎದುರಿಸಿದ್ದು, ಶೇ. 100 ಫಲಿತಾಂಶವನ್ನು ಪಡೆದಿದೆ. ಉನ್ನತ ಶ್ರೇಣಿಯಲ್ಲಿ 53 ಮಂದಿ ಪ್ರಥಮ ಶ್ರೇಣಿಯಲ್ಲಿ 27 ಮಂದಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಜಿ.ಆರ್.ಧ್ರುವ ಮತ್ತು ಮಿಥುನ್ ಕೆ.ಎಚ್. ತಲಾ 581 (ಶೇ.97) ಅಂಕಗಳನ್ನು, ಕುಶಾಲ್ ಕೆ.ಎನ್ 579 ಅಂಕಗಳನ್ನು, ಪ್ರಹ್ಲಾದ 578 (ಶೇ.96) ಅಂಕಗಳನ್ನು ಶೈನಿ ಬಿ.ಸಿ.578 (ಶೇ.96) ಅಂಕಗಳನ್ನು ಪಡೆದು ಮೊದಲ 4 ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಮಕ್ಕಳ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಚಂದ್ರ ಕೆ.ಪಿ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ. ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ 64 ವಿದ್ಯಾರ್ಥಿಗಳಲ್ಲಿ 60 ಮಂದಿ ಉತ್ತೀರ್ಣರಾಗಿದ್ದು ಕಾಲೇಜು ಶೇ. 95.31 ಫಲಿತಾಂಶವನ್ನು ಪಡೆದಿದೆ. ಕಲಾ ವಿಭಾಗದಲ್ಲಿ 14 ರಲ್ಲಿ 12ಮಂದಿ ವಾಣಿಜ್ಯ ವಿಭಾಗದಲ್ಲಿ 30ರಲ್ಲಿ 29 ಹಾಗೂ ವಿಜ್ಞಾನ ವಿಭಾಗದಲ್ಲಿ 20 ರಲ್ಲಿ 19 ತೇರ್ಗಡೆ ಹೊಂದಿದ್ದಾರೆ. ಕಾಲೇಜು ಒಟ್ಟಾರೆಯಾಗಿ ಶೇಕಡ ಸಾಧನೆಯನ್ನು ಮಾಡಿದೆ ಎಂದು ಕಾಲೇಜಿನ ಪ್ರಾಚಾರ್ಯ ಶ್ರೀಲತಾ ಮಾಹಿತಿ ನೀಡಿದ್ದಾರೆ. ಸಂತ ಮೇರಿ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 35 ಮಕ್ಕಳ ಪೈಕಿ 33 ಮಂದಿ ತೇರ್ಗಡೆಯಾಗಿದ್ದು ಶೇಕಡ 94.28 ಫಲಿತಾಂಶ ಬಂದಿದೆ ಅತ್ಯುನ್ನತ ಶ್ರೇಣಿಯಲ್ಲಿ 8 ಮಂದಿ ಪ್ರಥಮ ದರ್ಜೆಯಲ್ಲಿ 20 ಮಂದಿ, ದ್ವಿತೀಯ ದರ್ಜೆಯಲ್ಲಿ 5 ಮಂದಿ ತೇರ್ಗಡೆ ಹೊಂದಿದ್ದಾರೆ.ಆ ಪೈಕಿ ಕೆ.ಎಸ್.ಜಸ್ವಿನ್ 580 (ಶೇ.96.66) ಅಂಕಗಳಿಂದ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕರಾದ ರೆ.ಫಾ. ವಿಜಯ್‌ಕುಮಾರ್ ಮತ್ತು ಕಾಲೇಜು ಪ್ರಾಂಶುಪಾಲರಾದ ಸೆಲ್ವರಾಜ್ ಅವರು ಮಕ್ಕಳ ಸಾಧನೆಯನ್ನು ಪ್ರಶಂಸಿಸಿದ್ದಾರೆ. ಮಾದಾಪುರ ಡಿ.ಚೆನ್ನಮ್ಮ ಪದವಿ ಪೂರ್ವಕಾಲೇಜು ಶೇ. 96.20 ಫಲಿತಾಂಶ ಪಡೆದಿದ್ದು ಅತ್ಯುನ್ನತ ಶ್ರೇಣಿಯಲ್ಲಿ 8 ಮಂದಿ ಉತ್ತೀರ್ಣರಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 51 ಮಂದಿ, ದ್ವಿತೀಯ ದರ್ಜೆಯಲ್ಲಿ 15 ಮಂದಿ ಮತ್ತು ಸಾಮಾನ್ಯ ದರ್ಜೆಯಲ್ಲಿ 2 ಮಂದಿ ತೇರ್ಗಡೆಗೊಂಡಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮಕ್ಕಳ ಸಾಧನೆಯನ್ನು ಶ್ಲಾಘಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯು ಸುಂಟಿಕೊಪ್ಪ ವ್ಯಾಪ್ತಿಯಲ್ಲಿನ ಸರಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳು ಉತ್ತಮ ಸಾಧನೆ ಮಾಡಿರುವುದು ಪೋಷಕರಲ್ಲಿ ಮತ್ತು ಕಾಲೇಜಿನ ಉಪನ್ಯಾಸಕರಲ್ಲಿ ಹರ್ಷ ಉಂಟು ಮಾಡಿದೆ.